Advertisement
ಇತ್ತೀಚೆಗೆ ಗೆಳತಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಫೋನ್ ಮಾಡಿದ್ದೆ. ಈಚೆ ಕಡೆಯಿಂದ ನಾನು ಹುಟ್ಟುಹಬ್ಬದ ಶುಭಾಶಯಗಳು ಎಂದಾಗ ಆ ಕಡೆಯಿಂದ ಆಕೆ “ಹುಂ…’ ಎಂದಷ್ಟೆ ಹೇಳಿ ಸುಮ್ಮನಾದಳು. “ಥ್ಯಾಂಕ್ಸ್ ಹೇಳಿದರೆ ನಿನ್ನ ಗಂಟೇನು ಹೋಗುತ್ತದೆ?’ ಎಂದಾಗ ಆಕೆ ಹಾವಿನಂತೆ ಬುಸುಗುಟ್ಟಿದಳು, “ವರ್ಷ ಮೂವತ್ತಾಯಿತು ಕಣೇ ನನಗೆ. ಹೇಗೆ ಸಂಭ್ರಮಿಸಲಿ ಈ ಹುಟ್ಟುಹಬ್ಬವನ್ನು? ಕೇಕ್ ಕತ್ತರಿಸಿ ಖುಷಿಪಡಲು ನನಗೇನು ಹದಿನಾರು ವರ್ಷನಾ…?’ ಎಂದಾಗ ನನಗೆ ತುಸು ಪಿಚ್ಚೆನಿಸಿತು. ಅವಳ ಅಸಮಾಧಾನಕ್ಕೆ ವರುಷವಾದರೂ ಬೆಸೆಯದ ಮದುವೆಯ ನಂಟು ಎಂಬುದು ಗೊತ್ತಾಯಿತು.
“ಏನು ಮಾಡಲಿ? ಆಫೀಸ್‌ಗೆ ಹೋಗೋದಕ್ಕೂ ಬೇಜಾರು. ಯಾವಾಗ ಮದುವೆ ಊಟ ಹಾಕಿಸ್ತೀರಿ ಎಂದು ಸಹೋದ್ಯೋಗಿಗಳು ಸಮಯ ಸಿಕ್ಕಾಗಲೆಲ್ಲ ಕಿಚಾಯಿಸುತ್ತಿರುತ್ತಾರೆ. ಯಾರಾದರೂ ಒಬ್ಬ ಹುಡುಗ ಸಿಕ್ಕಿದರೂ ಸಾಕುಮಗಳ ಕತ್ತಿನಲ್ಲಿ ಒಂದು ತಾಳಿ ನೇತಾಡಲಿ ಎಂಬುದು ಅಮ್ಮನ ಆಸೆ. ಎಷ್ಟು ಒಳ್ಳೆಯ ಸಂಬಂಧ ಬಂದರೂ ನೀನು ಏನಾದರೂ ಒಂದು ತಗಾದೆ ತೆಗೆಯುತ್ತೀಯ. ನನಗಿನ್ನು ಹುಡುಕೋದಕ್ಕೆ ಆಗುವುದಿಲ್ಲ ಎಂದು ಅಪ್ಪ ಸಿಡಿಮಿಡಿಗುಟ್ಟುತ್ತಾರೆ. “ನೀನು ಹೀಗೆ ತಡಮಾಡಿದರೆ ನಾನು ಮುದುಕನಾದ ಮೇಲೆ ಮದುವೆಯಾಗಬೇಕು. ಆಮೇಲೆ ನನಗೆ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಾರೆ ತಲೆಯಲ್ಲಿ ಕೂದಲು ಉದುರಲು ಶುರುವಾಗಿದೆ’ ಎಂದು ಅಣ್ಣ ಒಳಗೊಳಗೇ ಸಿಡುಕುತ್ತಾನೆ. ಯಾರದ್ದಾದರೂ ಫೋಟೊ ಬಂದರೆ “ಅಕ್ಕಾ… ಇವನು ಚೆನ್ನಾಗಿದ್ದಾನೆ. ಹುಂ ಅನ್ನು. ಇನ್ನು ತಡ ಮಾಡಿದರೆ ಕಷ್ಟ’ ಎಂದು ತಂಗಿ ತನ್ನ ಲೈನ್ ಕ್ಲಿಯರ್ ಆಗುವುದಕ್ಕಾಗಿ ಕಾಯುತ್ತಿದ್ದಾಳೆ. ವರ್ಷ 30 ದಾಟಿದ ಮೇಲೆ ಮಕ್ಕಳಾಗೋದಕ್ಕೆ ಸ್ವಲ್ಪ ಕಷ್ಟವಾಗುತ್ತೆ. ಡೆಲಿವರಿಗೂ ಸಮಸ್ಯೆಯಾಗುತ್ತೆ. ಅದೂ ಅಲ್ಲದೆ, ಈಗ ಪಿಸಿಓಎಸ್ ಮಣ್ಣು ಮಸಿ ಎಂಬಿತ್ಯಾದಿ ಸಮಸ್ಯೆಗಳು ಹೆಣ್ಣಮಕ್ಕಳನ್ನು ಕಾಡುತ್ತಿವೆ. ಬೇಗ ಒಂದು ಮದುವೆಯಾದರೆ ಒಳ್ಳೆಯದು ಎಂಬುದು ಪಕ್ಕದ ಮನೆಯ ಆಂಟಿ ನೀಡುವ ಬಿಟ್ಟಿ ಉಪನ್ಯಾಸ.
Related Articles
Advertisement
ಕಾಲ ಬದಲಾಗಿದೆ!ಕಾಲಕಾಲಕ್ಕೆ ಮಳೆ, ಬೆಳೆ ಆಗುವ ಹಾಗೆ ಹೆಣ್ಣುಮಕ್ಕಳು ಆಯಾ ವಯಸ್ಸಿಗೆ ಮದುವೆ, ಮಕ್ಕಳು ಅಂತ ಆದರೆ ಚೆಂದ ಎಂದು ಹಿರಿಯರು ಹೇಳುತ್ತಿರುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡಿನಷ್ಟೇ ಸಮಾನಳು. ಗಂಡಿನಂತೆ ಸಂಸಾರದ ಜವಾಬ್ದಾರಿಗೆ ಹೆಗಲು ಕೊಡಬಲ್ಲಳು. ಅದು ಅಲ್ಲದೇ ಈಗ ಐಟಿ-ಬಿಟಿ ವಲಯದಲ್ಲಿ ಕೆಲಸಕ್ಕೆ ಹೋಗುವವರು ಜೀವನದಲ್ಲಿ ಒಂದು ನೆಲೆ ಅಂತ ಕಂಡುಕೊಂಡ ಮೇಲೆ ಮದುವೆಯಾದರೆ ಆಯ್ತು. ಇಷ್ಟು ಬೇಗ ಯಾಕೆ ಜವಾಬ್ದಾರಿ ಎಂಬ ಅಭಿಪ್ರಾಯವನ್ನೇ ಹೊಂದಿರುತ್ತಾರೆ. ಈಗಿನ ಬಹುತೇಕ ತಂದೆ ತಾಯಂದಿರು ಮಕ್ಕಳ ಅಭಿಪ್ರಾಯಕ್ಕೆ ಬೆಲೆ ಕೊಡುತ್ತಿದ್ದಾರೆ. ಒಂದಿಷ್ಟು ಸಮಸ್ಯೆಗಳು
ಇನ್ನು ಮಧ್ಯಮ ವರ್ಗದ ಹೆಣ್ಣು ಮಕ್ಕಳದ್ದು ಇನ್ನೊಂದು ರೀತಿಯ ಪಾಡು. ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲ ತೀರಿಸಬೇಕು, ಎಲ್ಲಾ ಭಾರವನ್ನು ಅಪ್ಪನ ಹೆಗಲ ಮೇಲೆ ಹೊರಿಸುವುದು ಬೇಡ. ತಮ್ಮನ ಓದು, ಬೆಳೆದು ನಿಂತ ತಂಗಿ, ಅಮ್ಮನ ಔಷಧಿ… ಈ ರೀತಿಯ ಹಣಕಾಸಿನ ಸಮಸ್ಯೆ ನಿವಾರಿಸುವುದಕ್ಕೆ ಒಂದು ಕೆಲಸ ಹುಡುಕಿಕೊಂಡು ನಗರದ ಕಡೆ ಹೋಗಿರುತ್ತಾರೆ. ತಾನು ಬೇಗ ಮದುವೆಯಾದರೆ ಇದನ್ನೆಲ್ಲಾ ನಿಭಾಯಿಸುವವರು ಯಾರು? ಎಂಬ ಅಭದ್ರತೆಯಿಂದ ತಮ್ಮ ಮದುವೆಯನ್ನು ಮುಂದೂಡಿರುತ್ತಾರೆ. ತಂದೆ- ತಾಯಿ ಇಲ್ಲದೇ ಇರುವುದು, ಮಗಳ ಮದುವೆಯ ಜವಾಬ್ದಾರಿ ಹೊರದ ಕುಡುಕ ಅಪ್ಪ, ಆರ್ಥಿಕ ಸಮಸ್ಯೆ, ಪ್ರೇಮ ವೈಫಲ್ಯ, ವಿದ್ಯಾಭ್ಯಾಸ, ಹೆಣ್ಣಿನ ರೂಪ, ಆಕಾರಗಳು ಕೂಡ ಮದುವೆ ತಡವಾಗುವುದಕ್ಕೆ ನೆಪಗಳಾಗಿರುತ್ತವೆ. ಕಾಡುವ ಕಳವಳ
ತನ್ನ ಗೆಳತಿಯರಿಗೆಲ್ಲಾ ಮದುವೆಯಾಗಿ ಮಗುವಾಗಿದೆ ತನಗಿನ್ನೂ ಆಗಿಲ್ಲ ಎಂಬ ಚಿಂತೆ ಆ ಹೆಣ್ಣನ್ನು ಕಾಡುತ್ತಿರುತ್ತದೆ. ಗೆಳತಿಯರು ಫೋನ್ ಮಾಡಿ ತಮ್ಮ ಸಂಸಾರದ ಬಗ್ಗೆ ಗಂಟೆಗಟ್ಟಲೆ ಮಾತನಾಡುವಾಗ ಅವಳದೆಯಲ್ಲೂ ನೋವಿನ ಎಳೆ ಮೋಡ ಕಟ್ಟಿಕೊಳ್ಳುತ್ತದೆ. ಅವಳನ್ನು ನೋಡೋದಕ್ಕೆ ಬಂದವರೆಲ್ಲಾ ಯಾಕಿಷ್ಟು ತಡ ಮಾಡಿದ್ದೀರಿ? ಎಂದು ಕೇಳುವಾಗ ಅವಳ ಹೆತ್ತವರ ಮೌನವನ್ನು ಕಂಡು ಅವಳೂ ಒಳಗೊಳಗೆ ನರಳುತ್ತಾಳೆ. ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳಿ
ಯಾವುದೋ ಒಂದು ಕಾರಣದಿಂದ ಮದುವೆ ಆಗದೇ ಇರಬಹುದು ಅಥವಾ ಸ್ವಲ್ಪ ಮುಂದೆ ಹೋಗಿರಬಹುದು. ಇರುವ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವ ಕಲೆ ರೂಢಿಸಿಕೊಳ್ಳುವ ಮನಸ್ಥಿತಿ ಮುಖ್ಯ. “ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ. ಇದು ನನ್ನ ಜೀವನ. ನಾನಿರುವುದೇ ಹೀಗೆ’ ಎಂದು ವ್ಯಂಗ್ಯದಿಂದ ಪ್ರಶ್ನೆ ಕೇಳುವವರಿಗೆ ಉತ್ತರ ಹೇಳುವಷ್ಟರ ಮಟ್ಟಿಗೆ ಧೈರ್ಯ ತಂದುಕೊಳ್ಳಬೇಕು. ಮೊದಲೆಲ್ಲಾ ಹೆಣ್ಣಿಗೆ ಆಯ್ಕೆಗಳು ಇರಲಿಲ್ಲ. ಈಗ ಅವಳ ಜೀವನ ಸಂಗಾತಿಯನ್ನು ಅವಳೇ ಆಯ್ಕೆ ಮಾಡಿಕೊಳ್ಳುವಷ್ಟು ಸ್ವಾತಂತ್ರ್ಯ ಇದೆ. ಸವಾಲುಗಳನ್ನು ಎದುರಿಸುವ ಛಲವಿದ್ದರೆ ತಲೆ ಎತ್ತಿ ನಡೆಯಲು ಸಾಧ್ಯ. ಪವಿತ್ರಾ ಶೆಟ್ಟಿ, ಈರೋಡ್