ಹೊಸದಿಲ್ಲಿ: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದರೂ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿಲ್ಲ. 2021ರಲ್ಲಿ ಹೆಲ್ಮೆಟ್ ಧರಿಸದೆ ಒಟ್ಟು 45,593 ಮಂದಿ, ಸೀಟ್ ಬೆಲ್ಟ್ ಧರಿಸದೆ 16,397 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾರಿಗೆ ಇಲಾಖೆ ಹೇಳಿದೆ. ಒಟ್ಟಾರೆಯಾಗಿ ಅಪಘಾತಗಳಲ್ಲಿ 1,53,972 ಮಂದಿ ಮೃತಪಟ್ಟಿದ್ದಾರೆ.
ಸೀಟ್ ಬೆಲ್ಟ್ ಧರಿಸದೆ ಮೃತಪಟ್ಟವರಲ್ಲಿ 8,438 ಚಾಲಕರು ಮತ್ತು 7,959 ಮಂದಿ ಸಹ ಪ್ರಯಾಣಿಕರು ಎಂದು ಇಲಾಖೆ ಹೇಳಿದೆ.
“ಭಾರತದಲ್ಲಿ ರಸ್ತೆ ಅಪಘಾತ- 2021′ ಎಂಬ ವರದಿ ಬಿಡುಗಡೆ ಮಾಡಿರುವ ಇಲಾಖೆ, ಕೆಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಹೆಲ್ಮೆಟ್ ಧರಿಸದೆ ಇರುವುದರಿಂದಲೇ ಹೆಚ್ಚು ಮಂದಿ ಸಾವನ್ನಪ್ಪಿರುವುದು ಗೊತ್ತಾಗಿದೆ. 32,877 ಮಂದಿ ಬೈಕ್ ಚಾಲನೆ ಮಾಡುತ್ತಿದ್ದವರು ಹಾಗೂ 13,716 ಮಂದಿ ಹಿಂಬದಿ ಸವಾರರು ಸಾವನ್ನಪ್ಪಿದ್ದಾರೆ. 93,763 ಮಂದಿ ಹೆಲ್ಮೆಟ್ ಧರಿಸದೆ ಗಾಯಗೊಂಡಿದ್ದಾರೆ. 2021ರಲ್ಲಿ ಒಟ್ಟು 4,12,432 ಸಾರಿಗೆ ಸಂಬಂಧಿ ಅಪಘಾತಗಳಾಗಿದ್ದು, 3,84,448 ಮಂದಿ ಗಾಯಗೊಂಡಿದ್ದಾರೆ.
ಸೀಟ್ ಬೆಲ್ಟ್ ಧರಿಸದೆ ಅಪಘಾತಗಳಲ್ಲಿ 39 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಸದ್ಯ ದೇಶದಲ್ಲಿ ಮುಂದಿನ ಮತ್ತು ಹಿಂದಿನ ಸವಾರರಿಬ್ಬರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ.