ಹೈದರಾಬಾದ್: ಹೈದರಾಬಾದ್ ಎದುರಿನ ಕಳೆದ ಪಂದ್ಯದಲ್ಲಿ ಚೆನ್ನೈ ತಂಡದ ಇಂಪ್ಯಾಕ್ಟ್ ಆಟಗಾರ ಮುಕೇಶ್ ಕುಮಾರ್ ತಮ್ಮ ಮೊದಲ ಓವರ್‌ನಲ್ಲೇ 27 ರನ್ ನೀಡಿ ಅತ್ಯಂತ ದುಬಾರಿಯಾಗಿ ಪರಿಣಮಿಸಿದ್ದರು. ಇದರಿಂದ ಮುಕೇಶ್ ಆತಂಕಕ್ಕೊಳಗಾಗಬೇಕಿಲ್ಲ, ಇಡೀ ತಂಡವೇ ಅವರ ಬೆಂಬಲಕ್ಕೆ ನಿಲ್ಲಲಿದೆ ಎಂಬುದಾಗಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಭರವಸೆ ತುಂಬಿದ್ದಾರೆ.
2022ರಲ್ಲಿ ಚೆನ್ನೈ ಪರ ಅತ್ಯಧಿಕ 16 ವಿಕೆಟ್ ಉರುಳಿಸಿದ ಎಡಗೈ ಪೇಸರ್ ಮುಕೇಶ್ ಕುಮಾರ್, ಪ್ರಸಕ್ತ ಋತುವಿನಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು. ಅವರ ಓವರ್‌ನಲ್ಲೇ ಅಭಿಷೇಕ್ ಶರ್ಮ 3 ಸಿಕ್ಸರ್, 2 ಬೌಂಡರಿ ಬಾರಿಸಿ ಸಿಡಿದು ನಿಂತಿದ್ದರು.
“ನಮಗಿಂದು ಮುಕೇಶ್ ಚೌಧರಿ ಅವರನ್ನು ಕಣಕ್ಕಿಳಿಸುವ ಅವಕಾಶ ಸಿಕ್ಕಿತು. ಹಿಂದೆಲ್ಲ ಅವರು ಚೆನ್ನೈ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಇವತ್ತು ಅವರ ದಿನವಾಗಿರಲಿಲ್ಲ. ಐಪಿಎಲ್‌ನಲ್ಲಿ ಇದೆಲ್ಲ ಮಾಮೂಲು. ಅಂದಮಾತ್ರಕ್ಕೆ ನಾವು ಯಾವ ಆಟಗಾರನನ್ನೂ ಕಡೆಗಣಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಂತು ಸ್ಫೂರ್ತಿ ತುಂಬುತ್ತೇವೆ’ ಎಂಬುದಾಗಿ ಫ್ಲೆಮಿಂಗ್ ಹೇಳಿದರು.
ಬಾಂಗ್ಲಾದೇಶದ ಪ್ರಮುಖ ಬೌಲರ್ ಮುಸ್ತಫಿಜುರ್ ರೆಹಮಾನ್ ಗೈರು ಕೂಡ ತಂಡದ ಬೌಲಿಂಗ್ ವಿಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಎಂದೂ ಫ್ಲೆಮಿಂಗ್ ಹೇಳಿದರು.