Advertisement

ಭಾರತದ ಮೊದಲ ಧರ್ಮಶಾಸ್ತ್ರಕಾರ ಮನುವಲ್ಲ, ಯಮ

01:03 PM May 15, 2017 | Team Udayavani |

ಹರಪನಹಳ್ಳಿ: ಭಾರತದ ಮೊದಲ ಧರ್ಮ ಶಾಸ್ತ್ರಕಾರ ಮನು ಅಲ್ಲ, ಯಮ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್‌ ಹೇಳಿದರು. ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಭಾನುವಾರ “ಮಸಣದ ಮುತ್ತು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಭೇದಭಾವ ಮಾಡದೇ ಎಲ್ಲರಿಗೂ ಒಂದೇ ತೀರ್ಪು ಕೊಡುತ್ತಾನೆ ಎನ್ನುವ ಕಾರಣಕ್ಕೆ ಯಮ ಧರ್ಮರಾಯ ಎಂದು ಕರೆಯಲಾಗುತ್ತದೆ. ಇಂದು ಯಮನನ್ನು ಅಶುಭದ ದೇವರನ್ನಾಗಿ ಮಾಡಲಾಗಿದೆ. ಆದರೆ ಭಾರತದ ಸಂಸ್ಕೃತಿಯಲ್ಲಿದ್ದ ಅಣ್ಣ-ತಂಗಿ ಮದುವೆಯಾಗುವ ಆಚರಣೆಯನ್ನು ಮೊದಲ ಬಾರಿಗೆ ನಿರಾಕರಿಸಿದವನು ಯಮ.

ಅಲ್ಲಿಂದ ಮನುಷ್ಯ ಸಂಬಂಧ ಸಂಸ್ಕೃತಿ ಆರಂಭವಾಗಿ ಅಧಿಕೃತವಾಗಿ ಅಣ್ಣ-ತಂಗಿ ಮದುವೆಯಾಗುವುದನ್ನು ನಿಷೇಧಿಸಲಾಯಿತು ಎಂದು ಹೇಳಿದರು. ಧರ್ಮ ಎನ್ನುವುದು ಆಚರಣೆ, ಲಾಂಛನ, ಸಂಕೇತಗಳಲ್ಲಿಲ್ಲ. ನ್ಯಾಯದ ಆಚರಣೆ, ನ್ಯಾಯಯುತವಾಗಿ ನಡೆಯುವುದೇ ಧರ್ಮವಾಗಿದೆ. ಹೋಮ, ಹವನ, ಪೂಜೆ ಪುನಸ್ಕಾರ ಮಾಡುವುದು ಆಚರಣೆಯೇ ಹೊರತು ಕ್ರಿಯಾವಿಧಿ ಧರ್ಮವಲ್ಲ ಎಂದರು.

ಧರ್ಮವೆಂದರೆ ಮೌಲ್ಯ ಮತ್ತು ಸತ್ಯದ ಅರಿವು. ವಿಶ್ವಕ್ಕೂ ನನಗೂ ಇರುವ ಸಂಬಂಧ, ಸಹಜೀವನ ಮತ್ತು ಸಹಕಾರವನ್ನು ತಿಳಿಸಿ ಕೊಡುವುದೇ ಧರ್ಮವಾಗಿದೆ. ನೂರಾರು ಧರ್ಮಗಳಿದ್ದು, ಮನುಷ್ಯನಿಗೆ ಮೌಲ್ಯಗಳನ್ನು ತಿಳಿಸಿ ಸನ್ಮಾರ್ಗದಲ್ಲಿ ನಡೆಸುವುದು ಧರ್ಮದ ಕೆಲಸವಾಗಿದೆ ಎಂದರು. 

ದುಡಿಯದೇ ತಿನ್ನುವುದು ಪಾಪ, ದುಡಿದಿದ್ದನ್ನು ತಾನು ಒಬ್ಬನೇ ತಿನ್ನುವುದು ಕೂಡ ಪಾಪ ಎನ್ನುವುದನ್ನೇ ಧರ್ಮ ಸಾರಿದೆ. ಧರ್ಮ ಎನ್ನುವುದು ಪುಸ್ತಕಗಳ ಭಂಡಾರವಲ್ಲ. ಗ್ರಾಮೀಣ ಭಾಗದ ಜನರು ಮೂರು ಸಾವಿರ ವರ್ಷಗಳ ಕಾಲ ಶಾಸ್ತ್ರ, ಶ್ಲೋಕಗಳ ಗೋಜಿಗೆ ಹೋಗದೆ ಪರಸ್ಪರ ಧಾರ್ಮಿಕವಾಗಿ ಗೌರವ ಕೊಡುತ್ತಿದ್ದರು.

Advertisement

ಮೌಲ್ಯ ಪ್ರಜ್ಞೆ ಬೆಳೆಸುವುದು ಧರ್ಮವೇ ಹೊರತು ಉನ್ಮಾದ ಬೆಳೆಸುವುದಲ್ಲ. ಇನ್ನೊಬ್ಬರನ್ನು ನಿಂದನೆ, ಟೀಕಿಸುವುದು, ದಾಳಿ ಮಾಡುವುದೂ ಧರ್ಮವಲ್ಲ. ಧರ್ಮ ಎಂಬುವುದು ದ್ವೇಷ ಅಲ್ಲ. ನೀತಿ ಶಾಸ್ತ್ರವಾಗಿದೆ ಎಂದು ಹೇಳಿದರು. ದನವನ್ನು ಪೂಜಿಸುವವರು ಸಾಕುತ್ತಿಲ್ಲ. ಯಾರು ದನವನ್ನು ಸಾಕುತ್ತಾರೋ, ಸಗಣಿ ಕಸವನ್ನು ಬಳಿಯುತ್ತಾರೋ ಅವರು ದನ ಸತ್ತಾಗ ಅನಿವಾರ್ಯವಾಗಿ ತಿನ್ನುತ್ತಾರೆ. 

ಆದರೆ ಪೂಜಿಸುವವರು ಫೋಟೋ ಹಾಕಿಕೊಂಡಿದ್ದಾರೆ. ಫೋಟೋದಿಂದ ಕರು ಹುಟ್ಟುವುದಿಲ್ಲ, ಹಾಲು ಕೊಡುವುದಿಲ್ಲ. ದನವನ್ನು ತಿನ್ನುವುದೇ ಸಂಸ್ಕೃತಿಯಾಗಿದ್ದರೆ ದೇಶದಲ್ಲಿ ಒಂದು ದನವೂ ಉಳಿಯುತ್ತಿರಲಿಲ್ಲ. ಆಹಾರ ಸಂಸ್ಕೃತಿ, ವಸ್ತ್ರ ಸಂಹಿತೆ, ದೈವ ಆಚರಣೆ ಬಗ್ಗೆ ಬಲವಂತದ ತೀರ್ಪು, ಒತ್ತಡ ಸಲ್ಲ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next