Advertisement

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

08:21 PM Oct 20, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಪ್ರತೀ ದಿನದ ಕಸ ಸಂಗ್ರಹದ ಮೇಲೆ ನಿಗಾ ಇಡಲು ಮನೆಗಳು, ಅಪಾರ್ಟ್‌ಮೆಂಟ್‌, ಅಂಗಡಿಗಳು ಸಹಿತ ಕಟ್ಟಡಗಳಲ್ಲಿ ಅಳವಡಿಸಲಾದ ಬಹುತೇಕ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ ಆಗುತ್ತಿಲ್ಲ.

Advertisement

ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ನಗರದಲ್ಲಿ ಸುಮಾರು 68,000 ಕಟ್ಟಡಗಳಿಗೆ ಕ್ಯೂ ಆರ್‌ ಕೋಡ್‌ ಅಳವಡಿಸಲಾಗಿದೆ. ತ್ಯಾಜ್ಯ ಸಂಗ್ರಹದ ಬಳಿಕ ಈ ಕ್ಯೂ ಆರ್‌ ಕೋಡ್‌ ಅನ್ನು ಸ್ಕ್ಯಾನ್ ಮಾಡಲು ಪ್ರತೀ ಪೌರಕಾರ್ಮಿಕರಿಗೆ ಮೊಬೈಲ್‌ ಡಿವೈಸ್‌ ನೀಡಲಾಗಿದೆ. ಈ ಡಿವೈಸ್‌ನಲ್ಲಿ ವಾರ್ಡ್‌ ವಾರು ವ್ಯಾಪ್ತಿಯನ್ನು ನಮೂದು ಮಾಡಲಾಗಿದ್ದು, ಆ ವ್ಯಾಪ್ತಿಯೊಳಗೆ ಮಾತ್ರ ಆ ಯಂತ್ರ ಕಾರ್ಯ ನಿರ್ವಹಿಸುತ್ತದೆ. ಆದರೆ ಸದ್ಯ ಕೆಲವೊಂದು ವಾರ್ಡ್‌ಗಳಲ್ಲಿನ ತ್ಯಾಜ್ಯ ಸಂಗ್ರಹದಲ್ಲಿ ಪೌರಕಾರ್ಮಿಕರು ವ್ಯಾಪ್ತಿ ಬದಲಾವಣೆ ಮಾಡುವುದರಿಂದ ಆ ಯಂತ್ರದ ಮೂಲಕ ಎಲ್ಲ ವಾರ್ಡ್‌ಗಳಲ್ಲಿ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸದ್ಯ 3,000 ಕಟ್ಟಡಗಳಲ್ಲಿರುವ ಕ್ಯೂ ಆರ್‌ ಕೋಡ್‌ ರೀಡ್‌ ಆದರೂ 1,500 ಕಟ್ಟಡಗಳ ಮಾಹಿತಿ ಮಾತ್ರ ಸ್ಮಾರ್ಟ್‌ಸಿಟಿ ಕಮಾಂಡ್‌ ಕಂಟ್ರೋಲ್‌ ರೂಂ.ಗೆ ಲಭ್ಯವಾಗುತ್ತಿದೆ.

ಸರಿಪಡಿಸಲಾಗುತ್ತಿದೆ
ಈ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಲ್ಲಿ ವಿಚಾರಿಸಿದರೆ ಸದ್ಯ ವಾರ್ಡ್‌ವಾರು ಮಾಡಲಾಗಿದ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ. ಬಳಿಕ ಈ ವ್ಯಾಪ್ತಿಯ ಎಲ್ಲೇ ಹೋದರೂ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ಆಗಲಿದೆ. ಸದ್ಯ ಎದುರಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ. ಮುಂದೆ ದಕ್ಷಿಣ ಮತ್ತು ಉತ್ತರ ವಾರ್ಡ್‌ಗಳಲ್ಲಿ ಪೌರಕಾರ್ಮಿಕರಿಗೆ 100 ಯಂತ್ರ ನೀಡಲಾಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ:ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

ಏನಿದು ಕ್ಯೂ ಆರ್‌ ಕೋಡ್‌ ?
ಆನ್‌ಲೈನ್‌ ಪೇಮೆಂಟ್‌ಗೆ ಬಳಸುವ ಕ್ಯೂ ಆರ್‌ ಕೋಡ್‌ ಮಾದರಿಯಲ್ಲಿ ಈ ಕೋಡ್‌ ಸಿದ್ಧಪಡಿಸಲಾಗಿದೆ. ತ್ಯಾಜ್ಯ ಉತ್ಪಾದನೆ ಕೇಂದ್ರಗಳಾದ ಮನೆ, ಹೊಟೇಲ್‌, ಅಪಾರ್ಟ್‌ಮೆಂಟ್‌, ಕಾಂಪ್ಲೆಕ್ಸ್‌, ಮಳಿಗೆಗಳು ಹಾಗೂ ವಿವಿಧ ಉದ್ಯಮಗಳ ಕಾಂಪೌಂಡ್‌ಗಳಿಗೆ ಕ್ಯೂ-ಆರ್‌ ಕೋಡ್‌ ಅಂಟಿಸಲಾಗಿದೆ. ಕಸ ಸಂಗ್ರಹಿಸುವ ಪೌರ ಕಾರ್ಮಿಕರು ತಮಗೆ ನೀಡಲಾದ ಯಂತ್ರ ಬಳಸಿ ಸ್ಕ್ಯಾನ್ ಮಾಡಿ ಬಳಿಕ ಆ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಆಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಇಂಟಿಗ್ರೇಟೆಡ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗೆ ಈ ಸಂದೇಶ ರವಾನೆಯಾಗುತ್ತದೆ. ಸೆಂಟರ್‌ನಲ್ಲಿರುವ ಅಧಿಕಾರಿ/ಸಿಬಂದಿ ಇದನ್ನು ಗಮನಿಸುತ್ತಾರೆ. ಒಂದು ವೇಳೆ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡದೇ ಇದ್ದರೆ ಆ ಮನೆಯಿಂದ ಕಸ ಸಂಗ್ರಹಿಸಿಲ್ಲವೆಂದು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಹೋಗುತ್ತದೆ. ಕಸ ಸಂಗ್ರಹ ಮಾಡದಿದ್ದರೆ ಸಾರ್ವಜನಿಕರು ಕೂಡ ಮೊಬೈಲ್‌ ಮುಖೇನ ಈ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ ಮಾಡಿ ದೂರು ನೀಡಬಹುದಾಗಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು “ಉದಯವಾಣಿ’ ಸುದಿನಕ್ಕೆ ತಿಳಿಸಿದ್ದಾರೆ.

Advertisement

ತಾಂತ್ರಿಕ ಸಮಸ್ಯೆ
ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಯ ಮೇಲೆ ನಿಗಾ ಇಡುವ ಉದ್ದೇಶದಿಂದ ನಗರದಲ್ಲಿ ಸುಮಾರು 68,000 ಕ್ಯೂ ಆರ್‌ ಕೋಡ್‌ ಅಳವಡಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಕೆಲವೊಂದು ಸ್ಕ್ಯಾನ್ ಆಗುತ್ತಿಲ್ಲ. ಇದನ್ನು ಮಂಗಳೂರು ಉತ್ತರ ಮತ್ತು ದಕ್ಷಿಣ ವ್ಯಾಪ್ತಿ ಎಂಬ ಸ್ವರೂಪದಲ್ಲಿ ಪರಿಗಣಿಸಲು ಕ್ರಮ ಕೈಗೊಳ್ಳಲಾಗುವುದು.
-ಅರುಣ್‌ ಪ್ರಭ,ಜನರಲ್‌ ಮ್ಯಾನೇಜರ್‌, ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next