Advertisement

ಡ್ರೆಸ್ಸಲ್ಲಿ ಗುಣ ಕಾಣೋಲ್ಲ!

03:40 PM Dec 20, 2017 | |

ಒಂದು ಹೆಣ್ಣನ್ನು ನಾವೇಕೆ ಅವಳ ಉಡುಗೆ ನೋಡಿ ಚಿತ್ರಿಸುತ್ತೇವೆ? ಸೀರೆ ಉಟ್ಟ ಸಿಂಗಾರಿ ಸಂಭಾವಿತಳು, ಜೀನ್ಸ್‌ ಹಾಕಿದವಳು ಜಗಳಗಂಟಿ ಅಂತ ನಾವೇಕೆ ಭಾವಿಸಬೇಕು? 

Advertisement

ಅವತ್ತು ಪದವಿಯ ಮೊದಲ ದಿನ. ಎಲ್ಲೆಲ್ಲೂ ಹೊಸ ಮುಖಗಳೇ. ಎಲ್ಲರೂ ತಮ್ಮಷ್ಟಕ್ಕೆ ಕ್ಲಾಸ್‌ ಒಳಗೆ ಬಂದು, ಅವರಿಗಿಷ್ಟ ಬಂದಲ್ಲಿ ಕುಳಿತರು. ಅಷ್ಟರಲ್ಲೇ ಒಬ್ಬಳು ಮಾಡರ್ನ್ ಊರ್ವಶಿಯ ಆಗಮನ. ನಮ್ಮ ಶಿಕ್ಷಕರಿಂದ ಹಿಡಿದು, ಜೊಲ್ಲು ಪಾರ್ಟಿ ಅನಂತನವರೆಗೆ ಎಲ್ಲರೂ ಕಣ್ಣು ಮಿಟುಕಿಸದೇ ಬಾಯಿ ಬಿಟ್ಟುಕೊಂಡು ಅವಳನ್ನು ನೋಡುತ್ತಿದ್ದರು. ಕಾರಣ ಅವಳು ಹಾಕಿದ್ದ ಡ್ರೆಸ್‌. ಸಿನಿಮಾ ಶೂಟಿಂಗ್‌ಗೆ ಬಂದವಳಂತೆ ಕಾಣಿಸುತ್ತಿದ್ದಳು ಆಕೆ.

ನಾವ್ಯಾರೂ ಅವತ್ತು ಅವಳೊಂದಿಗೆ ಒಂದೇ ಒಂದೂ ಮಾತಾಡಲಿಲ್ಲ. ನಮ್ಮೆಲ್ಲರ ಬಾಯಿಗೆ ಅವಳೇ ಬ್ರೇಕಿಂಗ್‌ ನ್ಯೂಸ್‌. ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತಾಡಿಕೊಂಡೆವು. ಭಾರೀ ಶ್ರೀಮಂತಳಿರಬೇಕು, ಊರಿಗೆಲ್ಲ ಸಾಕಾಗುವಷ್ಟು ಸೊಕ್ಕು ಅವಳ ಹತ್ರನೇ ಇದೆ, ಎಷ್ಟು ಹುಡುಗರಿಗೆ ಕೈ ಕೊಟ್ಟಿದ್ದಾಳ್ಳೋ? ಒಂಚೂರೂ ಡ್ರೆಸ್‌ ಸೆನ್ಸ್‌ ಇಲ್ಲ, ಹುಡುಗಿಯರ ಮರ್ಯಾದೆ ತೆಗೆಯಲು ಇವಳೊಬ್ಬಳು ಸಾಕು, ಮೇಕಪ್‌ ಮೇಲಿನ ಇಂಟ್ರೆಸ್ಟ್‌ ಅನ್ನು ಓದಿನಲ್ಲಿ ತೋರಿಸಿದ್ರೆ ಯುನಿವರ್ಸಿಟಿಗೆ ರ್‍ಯಾಂಕ್‌ ಬರುತ್ತಾಳ್ಳೋ ಏನೋ… ಹೀಗೆ ತಲೆಗೊಂದು ಮಾತಾಡಿಕೊಂಡೆವು. 

ನಾವೆಷ್ಟೇ ಚುಚ್ಚಿ ಮಾತಾಡಿದರೂ ಅವಳ ಡ್ರೆಸ್‌ ಮೊದಲಿನಂತೆಯೇ ಇತ್ತು. ಅವಳೆಂದೂ ಗೌರಮ್ಮ ಆಗಲೇ ಇಲ್ಲ. ನೀವು ನಂಬಿರೋ ಇಲ್ವೋ? ಅವತ್ತು ನಾನೇ ಶಾಪ ಹಾಕಿದ್ದ ಮಾಡರ್ನ್ ಊರ್ವಶಿ, ಇಂದು ನನ್ನ ಬೆಸ್ಟ್‌ಫ್ರೆಂಡ್‌. ಅವತ್ತು ನಾನು ಅದೆಷ್ಟು ಅವಿವೇಕಿ ತರ ಮಾತಾಡಿದೆ? ಅವಳ ಹಾಕಿರುವ ಡ್ರೆಸ್‌ನಿಂದ ಅವಳ ವ್ಯಕ್ತಿತ್ವ ಅಳೆದು ತೂಗಿಬಿಟ್ಟಿದ್ದೆ. ವಾಸ್ತವದಲ್ಲಿ ಅವಳು ನಮ್ಮಂತೆಯೇ ಮಧ್ಯಮ ವರ್ಗದ ಹುಡುಗಿ. ಹಿಡಿಯಷ್ಟೂ ಸೊಕ್ಕಿಲ್ಲ ಅವಳಲ್ಲಿ. ಮಗುವಿನಂಥ ಮುಗ್ಧತೆ. ಹುಡುಗರನ್ನು ಕಂಡರೆ ಮಾರುದೂರ ಸರಿಯುತ್ತಾಳೆ. ಇಂಥ ಪಾಪದ ಹುಡುಗಿಯನ್ನು ಅದೆಷ್ಟು ನಿಂದಿಸಿದ್ದೆ ನಾನು. ನನಗೆ ನಾನೇ ಛಿಮಾರಿ ಹಾಕಿಕೊಳ್ಳಬೇಕೆಂದೆನಿಸಿತ್ತು.

ಡ್ರೆಸ್‌, ಮೇಕಪ್‌ ಅವರವರ ಅಭಿರುಚಿ, ಆಸೆ, ಧರ್ಮ, ಸಂಪ್ರದಾಯ, ಸಂಸ್ಕಾರಕ್ಕೆ ಬಿಟ್ಟ ವಿಚಾರ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆದರೂ, ಒಂದು ಹೆಣ್ಣನ್ನು ನಾವೇಕೆ ಅವಳ ಉಡುಗೆ ನೋಡಿ ಚಿತ್ರಿಸುತ್ತೇವೆ? ಸೀರೆ ಉಟ್ಟ ಸಿಂಗಾರಿ ಸಂಭಾವಿತಳು, ಜೀನ್ಸ್‌ ಹಾಕಿದವಳು ಜಗಳಗಂಟಿ ಅಂತ ನಾವೇಕೆ ಭಾವಿಸಬೇಕು? ಸೀರೆ, ಜೀನ್ಸ್‌ ಎರಡರಲ್ಲೂ ಮುಖವಾಡ ಇರಬಹುದು. ಎದುರು ಕಾಣುವುದೆಲ್ಲವೂ ಸತ್ಯವಲ್ಲ ತಾನೇ?

Advertisement

ಮೊದಲು ನಾವು ಬದಲಾಗಬೇಕು. ನಮ್ಮ ದೃಷ್ಟಿಕೋನ ಬದಲಾಗಬೇಕು. ಹಿರಿಯರು ಮುಖ ನೋಡಿ ಮಣೆ ಹಾಕು ಎಂದಿದ್ದಾರೆ. ದಿರಿಸು ನೋಡಿ ವ್ಯಕ್ತಿತ್ವವನ್ನು ಅಳೆಯಿರಿ ಎಂದಲ್ಲ. ಹೆಣ್ಣಿಗೂ ಸ್ವಾತಂತ್ರ್ಯವಿದೆ. ಅವಳಿಗೆ ಇಷ್ಟಬಂದಂತೆ ಬದುಕುವ ಹಕ್ಕು ಅವಳಿಗಿದೆ. ಅವಳು ತನ್ನ ಹಿಡಿತದಲ್ಲಿ ತಾನಿದ್ದರೆ ಎಂಥ ಮೇಕಪ್‌ ಮೆತ್ತಿಕೊಂಡರೂ, ಮಿನಿ ಸ್ಕರ್ಟ್‌ ಹಾಕಿ ಊರೆಲ್ಲ ತಿರುಗಿದರೂ, ಎಡವಿ ಬೀಳುವುದಿಲ್ಲ.

ಹೆತ್ತವರು ಹೆಣ್ಣಿಗೆ ಬಾಲ್ಯದಲ್ಲಿಯೇ ಆಂತರಿಕ ಸೌಂದರ್ಯದ ಸಂಸ್ಕಾರವನ್ನು ನೀಡಿರುತ್ತಾರೆ. ಸಂಸ್ಕಾರಸ್ಥ ಹೆಣ್ಣು ಮಗಳು ಅದೆಂಥದ್ದೇ ಉಡುಗೆ ತೊಟ್ಟರೂ ಅವಳ ಹಿಡಿತದಲ್ಲಿ ಅವಳಿರುತ್ತಾಳೆ. ಉಡುಗೆ ಸಾಂಪ್ರದಾಯಕವಾದರೂ ಸರಿ, ಆಧುನಿಕವಾದರೂ ಸರಿ. ನೋಡುಗರ ದೃಷ್ಟಿ ಸರಿಯಿದ್ದರೆ ಒಳ್ಳೆಯದು.

ಕಾವ್ಯಾ ಭಟ್ಟ ಜಕ್ಕೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next