ಸಿನಿಮಾ ಎಂದರೆ ಅಲ್ಲೊಂದಿಷ್ಟು ಟ್ವಿಸ್ಟ್-ಟರ್ನ್ಗಳಿರಬೇಕು, ಪ್ರೇಕ್ಷಕನ ಕುತೂಹಲದ ವೇಗ ಹೆಚ್ಚಿಸುತ್ತಲೇ ಸಾಗಬೇಕು. ಅದರಲ್ಲೂ ಥ್ರಿಲ್ಲರ್ ಸಿನಿಮಾಗಳು ಈ ನಿಯಮಕ್ಕೆ ಬದ್ಧವಾಗಿರಲೇಬೇಕು. ಈ ವಾರ ತೆರೆಕಂಡಿರುವ “ನಾಟೌಟ್’ ಕೂಡಾ ಇದೇ ರೀತಿ ಒಂದಷ್ಟು ಹೊಸ ಅಂಶಗಳೊಂದಿಗೆ ತೆರೆಗೆ ಬಂದಿರುವ ಸಿನಿಮಾ.
ಮಧ್ಯಮ ವರ್ಗದ ಹುಡುಗನ ಕನಸಿನ ಪಯಣದ ಕಥೆ ಇದು. ಈ ಚಿತ್ರದ ಬಗ್ಗೆ ಹೇಳಬೇಕಾದರೆ ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಕನಸಿನ ಹುಡುಗನ ಕಾಸಿನ ಕಥೆ ಎನ್ನಬಹುದು. ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕೆಂಬ ಆಲೋಚನೆಯಲ್ಲಿರುವ ಹುಡುಗ ಅನಿವಾರ್ಯವಾಗಿ ಹೇಗೆ ಆತ “ಹಾದಿ’ ಬದಲಿಸುತ್ತಾನೆ, ಅದರ ಹಿಂದಿನ ಕಾರಣಗಳೇನು ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ.
ಇದೊಂದು ಮಧ್ಯಮ ವರ್ಗದ ಹುಡುಗನ ಕಥೆ. ತನ್ನ ಕನಸು ಸಾಕಾರಗೊಳಿಸಲು ಸಾಲ ಅಗತ್ಯ. ಜೊತೆಗೆ ಸಾಲಗಾರನ ಕಾಟವನ್ನು ಸಹಿಸಿಕೊಳ್ಳಲೇಬೇಕು. ಒಂದು ಹಂತಕ್ಕೆ ಸಹಿಸಿಕೊಳ್ಳುವ ಯುವಕ ಅದು ಅತಿಯಾದಾಗ “ಬೇರೆ’ ದಾರಿ ಯೋಚನೆ ಮಾಡಲೇಬೇಕು… ಯೋಚನೆ ಮಾಡುತ್ತಾನೆ ಕೂಡಾ. ಅಲ್ಲಿಂದ ಸಿನಿಮಾದ ಕಲರ್ ಬದಲಾಗುತ್ತದೆ. ಅದೇನು ಎಂಬುದೇ ಇಡೀ ಸಿನಿಮಾದ ಕಥೆ. ಇಲ್ಲಿ ನಾಯಕ ಆ್ಯಂಬ್ಯುಲೆನ್ಸ್ ಚಾಲಕ. ಸ್ವಂತಃ ಆ್ಯಂಬ್ಯುಲೆನ್ಸ್ ತೆಗೆದುಕೊಳ್ಳಲು ಫೈನಾನ್ಷಿಯರ್ ಬಳಿ ಸಾಲ ಪಡೆದಿದ್ದಾನೆ. ಆದರೆ, ಆತನ ದುರಾದೃಷ್ಟ, ಆ್ಯಂಬ್ಯುಲೆನ್ಸ್ ಕಳ್ಳತನವಾಗಿದೆ. ಆದರೆ, ಫೈನಾನ್ಷಿಯರ್ ಸಾಲ ಕಟ್ಟಲೇಬೇಕು. ನಾಯಕ ಅಸಹಾಯಕ. ನೋಡ ನೋಡುತ್ತಲೇ ಕಷ್ಟಗಳು ಬಂದು ಆತನಿಗೆ “ಸನ್ಮಾನ’ ಮಾಡಿ ಬಿಡುತ್ತವೆ… ಹೀಗೆ ಸಾಗುವ ಕಥೆಯಲ್ಲಿ ಕಷ್ಟಗಳ ಜೊತೆಗೆ ಕಾಮಿಡಿಗೂ ಜಾಗವಿದೆ. ನಿರ್ದೇಶಕ ಅಂಬರೀಶ್ ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ನಾಯಕ ಅಜಯ್ ಪೃಥ್ವಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸೀದಾಸಾದಾ ಹುಡುಗನಾಗಿ ಪಾತ್ರವನ್ನು ಆವರಿಸಿಕೊಂಡಿದ್ದಾರೆ. ನರ್ಸ್ ಆಗಿ ರಚನಾ ನಟಿಸಿದ್ದಾರೆ. ಉಳಿದಂತೆ ಕಾಕ್ರೋಚ್ ಸುಧಿ, ರವಿಶಂಕರ್ ಸೇರಿದಂತೆ ಇತರರು ಗಮನ ಸೆಳೆಯುತ್ತಾರೆ.