ಕಲಬುರಗಿ: ಗುಣಮಟ್ಟದ ಹಾಲು ಪೂರೈಕೆಯಲ್ಲಿ ಹೆಸರು ಮಾಡಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಂದಿನಿ ಹಾಲಿನ ಜತೆಗೆ ಇನ್ಮುಂದೆ ನಂದಿನಿ ಆಕ್ವಾ ಪ್ಯಾಕೇಜ್ಡ್ ಬಾಟಲ್ ನೀರು ಪೂರೈಕೆ ಮಾಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ನಂದಿನಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಸ್ವೀಟ್ ಸೇರಿ ಇತರ ಉತ್ಪನ್ನಗಳಿವೆ. ಇದರ ಜತೆ ಇನ್ಮುಂದೆ ನಂದಿನಿ ಆಕ್ವಾ ಪ್ಯಾಕೇಜ್ಡ್ ಬಾಟಲ್ ನೀರು ದೊರೆಯಲಿದೆ. ನಂದಿನ ಉತ್ಪನ್ನಗಳ ಮಳಿಗೆಯಲ್ಲದೇ ಖಾಸಗಿಯಾಗಿ ಎಲ್ಲ ಅಂಗಡಿಗಳಲ್ಲೂ ಈ ನೀರು ದೊರೆಯಲಿದೆ.
ಬಾಟಲ್ ನೀರಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿರುವುದನ್ನು ಮನಗಂಡ ಕೆಎಂಎಫ್ ಪ್ಯಾಕೇಜ್ಡ್ ಬಾಟಲ್ ನೀರು ಉತ್ಪಾದಿಸಿ ಪೂರೈಸಲು ಮುಂದಾಗಿದ್ದು, ಎರಡೂರು ದಿನದಲ್ಲಿ ರಾಜ್ಯಾದ್ಯಂತ ಮಾರು ಕಟ್ಟೆಗೆ ಬರಲಿದೆ. ಎರಡು ಲೀಟರ್, ಒಂದು ಲೀಟರ್, ಅರ್ಧ ಹಾಗೂ ಕಾಲು ಲೀಟರ್ ಬಾಟಲಿಗಳನ್ನು ಒಳಗೊಂಡ ನಂದಿನಿ ಆಕ್ವಾ ಗ್ರಾಹಕರ ಅಭಿಲಾಷೆ ಹಾಗೂ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. ಬೆಂಗಳೂರಿನ ಕುಂಬಳಗೋಡು ಪ್ರದೇಶದಲ್ಲಿ ನೀರು ಉತ್ಪಾದನಾ ಘಟಕ ಹೊಂದಿದ್ದು, ಅಲ್ಲಿಂದ ರಾಜ್ಯಾದ್ಯಂತ ಮಾರುಕಟ್ಟೆಗೆ ಬಹು ಮುಖ್ಯವಾಗಿ ನಂದಿನಿ ಮಾರಾಟ ಮಳಿಗೆಗಳಿಗೆ ಬಿಡುಗಡೆಯಾಗಲಿದೆ. ಈಗಾಗಲೇ ಬಾಟಲ್ ನೀರು ಉತ್ಪಾದನೆ ಹಾಗೂ ಮಾರಾಟಕ್ಕೆ ಕೆಎಂಎಫ್ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ.
ಮಾರುಕಟ್ಟೆಯಲ್ಲಿ ಉಳಿದ ಕಂಪನಿಗಳ ನೀರಿನ ಬಾಟಲ್‌ಗಳ ದರ ಹಾಗೂ ಗುಣಮಟ್ಟ ಎದುರಿಸಲು ಜತೆಗೆ ಏಜೆಂಟ್ ಕಮಿಷನ್ ಅನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀಡುವುದು ಸೇರಿ ವಿವಿಧ ಕ್ರಮ ಕೈಗೊಂಡಿದೆ. ಮಾರುಕಟ್ಟೆಯಲ್ಲಿರುವ ಈಗಿನ ಬಾಟಲ್ ನೀರಿಗಿಂತ ಕನಿಷ್ಠ 1ರೂ. ಕಡಿಮೆಯಾಗಿ ನೀಡಲು ಮುಂದೆ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಂದಿನಿ ಆಕ್ವಾ ಬಾಟಲ್ ನೀರು ಮನೆ ಮಾತಾಗಲಿದೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿಂದು ವಿವಿಧ ಬಗೆಯ ಹಾಲು ಬಂದಿದ್ದರೂ ಬಹುತೇಕ ಜನ ನಂದಿನಿ ಹಾಲನ್ನೇ ನೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ನಂದಿನಿ ಹಾಲಿನಲ್ಲಿ ಯಾವುದೇ ಮಿಶ್ರಿತ ಇಲ್ಲ ಎನ್ನುವ ನಂಬಿಕೆ ಹೊಂದಿರುವುದೇ ನಂದಿನಿ ಆಕ್ವಾ ಬಾಟಲ್ ನೀರು ಮಾರುಕಟ್ಟೆಗೂ ಸಹಕಾರಿಯಾಗಲಿದೆ.
ರಾಯಭಾರಿ: ಕೆಎಂಎಫ್ ಉತ್ಪನ್ನಗಳಿಗೆ ಖ್ಯಾತ ಚಲನಚಿತ್ರ ತಾರೆ ಪುನೀತ್ ರಾಯಭಾರಿಯಾಗಿದ್ದು, ನಂದಿನಿ ಆಕ್ವಾ ಬಾಟಲ್ ನೀರಿಗೂ ಅವರನ್ನೇ ಇಲ್ಲವೇ ಬೇರೆಯೊಬ್ಬರನ್ನು ಹಾಕಿಕೊಂಡು ಜಾಹೀರಾತು ನಿರ್ಮಿಸಬೇಕೆಂಬುದರ ಕುರಿತು ಕೆಎಂಎಫ್ ಚಿಂತನೆ ನಡೆಸಿದೆ.
ವರದಾನ: ಕರ್ನಾಟಕ ಹಾಲು ಮಹಾಮಂಡಳಿ ಆರ್ಥಿಕವಾಗಿ ಬಲವರ್ಧನೆ ಹೊಂದಲು ಈ ಬಾಟಲು ನೀರು ಉತ್ಪಾದನೆ ಹಾಗೂ ಮಾರಾಟ ಸಹಕಾರಿ ಯಾಗಲಿದೆ. ಅಲ್ಲದೇ ರಾಜ್ಯದಲ್ಲಿರುವ ಹಾಲು ಉತ್ಪಾದಕರ ಒಕ್ಕೂಟಗಳು ಬಹುತೇಕ ನಷ್ಟದಲ್ಲಿವೆ. ಕೆಲ ಒಕ್ಕೂಟಗಳು ಹೆಸರಿಗೆ ಎನ್ನುವಂತಿವೆ. ನೀರು ಉತ್ಪಾದನೆ ಹಾಗೂ ಮಾರಾಟ ಕಾರ್ಯ ಒಕ್ಕೂಟಗಳ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ. ಒಟ್ಟಾರೆ ನಂದಿನಿ ಹಾಲಿನಂತೆ ನಂದಿನಿ ಬಾಟಲ್ ನೀರು ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾದಲ್ಲಿ ಕೆಎಂಎಫ್ ನೀರು ರಾಜ್ಯಾದ್ಯಂತ ಮಾರುಕಟ್ಟೆ ಹಿಡಿಯಲಿದೆ.
ಕೆಎಂಎಫ್‌ನ ನಂದಿನಿ ಆಕ್ವಾ ಬಾಟಲ್ ನೀರು ಉತ್ಪಾದನೆ ಹಾಗೂ ಮಾರುಕಟ್ಟೆ ಪೂರೈಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2 ದಿನದೊಳಗೆ ರಾಜ್ಯಾದ್ಯಂತ ಪೂರೈಕೆ ಯಾಗಲಿದೆ. ಲೀಟರ್ ಬಾಟಲ್ ಸೇರಿ ಎಲ್ಲ ಬಾಟಲ್‌ಗಳಿಗೆ ದರ ಹಾಗೂ ಕಮಿಷನ್ ನಿಗದಿಗೊಳಿಸಿ ಎಲ್ಲ ಒಕ್ಕೂಟಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
● ಪ್ರಕಾಶಕುಮಾರ್ ಜಂಟಿ ನಿರ್ದೇಶಕರು (ವಾಣಿಜ್ಯ ವಿಭಾಗ), ಕೆಎಂಎಫ್
ಹನುಮಂತರಾವ ಬೈರಾಮಡಗಿ