ಗುರುವಾರ ಬೆಳಗ್ಗೆ ಭಾರತೀಯ ಮಹಿಳಾ ಕ್ರಿಕೆಟ್ ವಲಯಕ್ಕೆ ಅತ್ಯಂತ ಸಮಾಧಾನದ ಸುದ್ದಿಯೊಂದು ಲಭಿಸಿತು. ಅದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಿಸಿದರು. ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗರಿಗೆ ಇನ್ನು ಮುಂದೆ ಪ್ರತೀ ಪಂದ್ಯಕ್ಕೂ ಪುರುಷರಿಗೆ ನೀಡುವಷ್ಟೇ ಶುಲ್ಕ ನೀಡಲಾಗುತ್ತದೆ. ಈ ರೀತಿಯ ಸಮಾನತೆಯನ್ನು ತರುವುದು ನನ್ನ ಕನಸಾಗಿತ್ತು, ಅದಕ್ಕೆ ನೆರವು ನೀಡಿರುವ ಎಲ್ಲರಿಗೂ ಧನ್ಯವಾದ ಎಂದು ಜಯ್ ಶಾ ಹೇಳಿಕೊಂಡಿದ್ದಾರೆ. ಇದು ಮಹಿಳೆಯರಿಗೆ ಒಂದು ಹಂತದ ಸಮಾಧಾನ ನೀಡಿದೆ. ಇದನ್ನು ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಕೂಡ ಹೊಗಳಿದ್ದಾರೆ.
ಇದುವರೆಗೆ ಪುರುಷರಿಗೆ ಪ್ರತೀ ಪಂದ್ಯದ ಶುಲ್ಕವಾಗಿ (ಟೆಸ್ಟ್ 15, ಏಕದಿನ 6, ಟಿ20 3 ಲಕ್ಷ ರೂ.) ಭಾರೀ ಮೊತ್ತವನ್ನು ನೀಡಲಾಗುತ್ತಿತ್ತು. ಮಹಿಳೆಯರಿಗೆ ಸಿಗುತ್ತಿದ್ದದ್ದು ಟೆಸ್ಟ್‌ಗೆ 2.5, ಏಕದಿನ ಮತ್ತು
ಟಿ20 ತಲಾ 1 ಲಕ್ಷ ರೂ. ಮಾತ್ರ. ಇನ್ನು ಮುಂದೆ ಈ ವ್ಯತ್ಯಾಸ ಇಲ್ಲವಾಗಲಿದೆ. ಆದರೆ ವಿಷಯ ಇಲ್ಲಿಗೇ ಮುಗಿದಿಲ್ಲ. ವಾಸ್ತವದಲ್ಲಿ ಮಹಿಳೆಯರು ವರ್ಷದಲ್ಲಿ ಆಡುವ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಬಹಳ ಕಡಿಮೆ! ಪುರುಷರು ವರ್ಷಪೂರ್ತಿ ಅತಿಯಾಗಿ ಕ್ರಿಕೆಟ್ ಆಡುತ್ತಾರೆ. ಸಣ್ಣ ಅವಕಾಶ ಸಿಕ್ಕರೂ ಬಿಸಿಸಿಐ ಯಾವುದೋ ಕ್ರಿಕೆಟ್ ಸರಣಿಯನ್ನು ಹಮ್ಮಿಕೊಳ್ಳುತ್ತದೆ. ಅದೇ ಉತ್ಸಾಹವನ್ನು ಮಹಿಳೆಯರ ವಿಚಾರದಲ್ಲಿ ಬಿಸಿಸಿಐ ತೋರಿಲ್ಲ. ಮಹಿಳೆಯರು ಆಡುವ ಪಂದ್ಯ ಜಾಸ್ತಿಯಾದರೆ ಮಾತ್ರ ಅವರಿಗೆ ಸಿಗುವ ಶುಲ್ಕವೂ ಹೆಚ್ಚುತ್ತದೆ!
ಕೊರೊನಾ ಆರಂಭವಾದ ಮೇಲೆ ಮಹಿಳೆಯರಿಗೆ ಆಡಲು ಸಿಕ್ಕ ಕೂಟಗಳೇ ಕಡಿಮೆ. ಈಗೊಂದು ವರ್ಷದಿಂದ ಮಹಿಳಾ ಕ್ರಿಕೆಟ್ ಸ್ವಲ್ಪ ಜಾಸ್ತಿಯಾಗಿದ್ದರೂ ಹೇಳಿಕೊಳ್ಳುವಷ್ಟೇನಲ್ಲ. 2008ರಲ್ಲಿ ಐಪಿಎಲ್ ಆರಂಭವಾದರೂ ಇಲ್ಲಿಯವರೆಗೆ ಮಹಿಳಾ ಐಪಿಎಲ್ ನಡೆದಿರಲಿಲ್ಲ. ಅಂತೂ ಮುಂದಿನ ವರ್ಷದಿಂದ ಅದು ಆರಂಭವಾಗಲಿದೆ. ಟೆಸ್ಟ್ ಪಂದ್ಯಗಳಂತೂ ತೀರಾ ಕಡಿಮೆ ಎಂದೇ ಹೇಳಬೇಕು.
ಇನ್ನು ಮುಖ್ಯವಾಗಿ ಆಗಬೇಕಾಗಿರುವ ವಿಷಯವೊಂದಿದೆ. ಅದು ಸಾಧ್ಯವಾಗಬೇಕಾದರೆ ದೇಶದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯಗೊಳ್ಳಬೇಕು. ಈಗ ಬಿಸಿಸಿಐ ಪಂದ್ಯದ ಶುಲ್ಕದಲ್ಲಿ ಮಾತ್ರ ಸಮಾನತೆ ತಂದಿದೆ. ನಿಜವಾಗಲೂ ಸಮಾನತೆ ಬರಬೇಕಾಗಿರುವುದು ವಾರ್ಷಿಕ ವೇತನದಲ್ಲಿ! ಬಿಸಿಸಿಐ ಕೇಂದ್ರೀಯ ಗುತ್ತಿಗೆ ವ್ಯವಸ್ಥೆಯನ್ನು ಹೊಂದಿದೆ. ಅದನ್ನು ಹೊಂದಿದವರಿಗೆ ವಾರ್ಷಿಕ ವೇತನವನ್ನು ನಿಗದಿ ಮಾಡಿದೆ. ಪುರುಷರಿಗೆ ಎ+, ಎ, ಬಿ,ಸಿ ಎಂಬ ದರ್ಜೆಗಳನ್ನು ಮಾಡಿ, ಆ ದರ್ಜೆಯಲ್ಲಿ ಆಟಗಾರರಿಗೆ ಸ್ಥಾನ ನೀಡುತ್ತದೆ. ಈ ಲೆಕ್ಕಾಚಾರದಲ್ಲಿ ಕ್ರಮವಾಗಿ 7, 5, 3, 1 ಕೋಟಿ ರೂ.ಗಳನ್ನು ವೇತನವಾಗಿ ನೀಡುತ್ತದೆ. ಮಹಿಳೆಯರಿಗೆ ಮೂರು ದರ್ಜೆಯಿದೆ. ಇಲ್ಲಿ ಕ್ರಮವಾಗಿ 50, 30, 10 ಲಕ್ಷ ರೂ.ಗಳನ್ನು ನೀಡಲಾಗುತ್ತದೆ!
ಇಲ್ಲಿರುವ ಅಗಾಧ ವ್ಯತ್ಯಾಸವನ್ನು ಗಮನಿಸಿ. ಇದನ್ನು ಸರಿಮಾಡಬೇಕಾದರೆ ಸ್ವತಃ ಬಿಸಿಸಿಐಗೂ ಕಷ್ಟವಿದೆ. ಕಾರಣ ಮಹಿಳಾ ಕ್ರಿಕೆಟ್‌ಗೆ ಇಲ್ಲದ ಜನಪ್ರಿಯತೆ. ಆದರೆ ಇದನ್ನು ಸರಿ ಮಾಡುವ ಹೊಣೆಯೂ ಬಿಸಿಸಿಐಯದ್ದೇ, ಇದಕ್ಕೆ ಐಸಿಸಿ ಕೂಡ ಕೈಜೋಡಿಸಿ ಮಹಿಳಾ ಕ್ರಿಕೆಟನ್ನು ಜನಪ್ರಿಯ ಮಾಡಿದರೆ ಪರಿಸ್ಥಿತಿ ಬದಲಾಗಲಿದೆ.