Advertisement

ಮಳೆಗಾಲದಲ್ಲಿ ಮಾತ್ರವಲ್ಲ, ವರ್ಷದ 365 ದಿನವೂ ಮೀನು ಬೇಟೆ

02:49 PM Jun 07, 2017 | |

ಮಲ್ಪೆ: ಪ್ರತೀವರ್ಷ ಮಳೆಗಾಲ ಆರಂಭವಾದಾಗ ಹೊಲ ಗದ್ದೆಗಳಲ್ಲಿ ಮೀನು ಬೇಟೆ ಮಾಮೂಲಿ. ಆದರೆ ಮಲ್ಪೆ ಮೀನುಗಾರಿಕಾ ಬಂದರು ಸಮೀಪದ ಬ್ರೇಕ್‌ವಾಟರ್‌ ಬಳಿ ವರ್ಷದ 365 ದಿನವೂ ಗಾಳ ಹಾಕಿ ಮೀನು ಹಿಡಿಯುವುದು ನಡೆಯುತ್ತದೆ.

Advertisement

ಗಾಳ ಹಾಕೋದು ಒಂಥರ ಚಟ
ಬಂದರು ಸಮೀಪ  ಸುಮಾರು ಒಂದು ಕಿ. ಮೀ. ಉದ್ದದ ಬ್ರೇಕ್‌ವಾಟರ್‌ನ ಊದ್ದಕ್ಕೂ ಕುಳಿತು ವರ್ಷಪೂರ್ತಿ ಗಾಳ ಹಾಕುವ ಮಂದಿ ಕಾಣಸಿಗುತ್ತಾರೆ. ಮಳೆಗಾಲ ಶುರುವಾದ ಅನಂತರ ಇಲ್ಲಿಗೆ ಮೀನು ಹಿಡಿಯಲು ಬರುವವರ ಸಂಖ್ಯೆ ವೃದ್ಧಿಗೊಳ್ಳುತ್ತದೆ. ಗಾಳ ಹಾಕೋದು ಒಂಥರ ಚಟವಿದ್ದಂತೆ, ಮೀನು ಸಿಗಲಿ ಸಿಗದಿರಲಿ ನೀರಿಗೆ ಗಾಳ ಬಿಟ್ಟು ಕೂರೋದ್ರಲ್ಲೂ ಒಂಥರ ಸುಖವಿದೆ. ನಗರ ಪ್ರದೇಶದ ಮಂದಿಗೆ  ಗಾಳ ಹಾಕಿ ಮೀನು ಹಿಡಿಯುವಲ್ಲಿ  ಆಸಕ್ತಿ ಹೆಚ್ಚು.  ಕಾಲೇಜು ವಿದ್ಯಾರ್ಥಿಗಳು, ಸರಕಾರಿ /ಖಾಸಗಿ ಕಚೇರಿಯ ಉನ್ನತ ಹುದ್ದೆಗಳಲ್ಲಿರುವವರೂ ಇಲ್ಲಿರುತ್ತಾರೆ. ಸ್ಥಳೀಯರ ಜತೆಗೆ ಅನಿವಾಸಿ ಭಾರತೀಯರೂ ಸೇರಿದಂತೆ ಹೊರಜಿಲ್ಲೆಯ, ನಗರ ಪ್ರದೇಶದ ಮಂದಿ ಹೆಚ್ಚಾಗಿ ಗಾಳ ಹಾಕಲು ಇಲ್ಲಿಗೆ ಬರುತ್ತಾರೆ, ವಿವಿಧ ತರಹದ ಗಾಳದಲ್ಲಿ  ಬಗೆ ಬಗೆಯ  ಮೀನು ಹಿಡಿದು ಸಂಭ್ರಮ ಪಡುತ್ತಾರೆ.

ಮಳೆಗಾಲದ ಉಬರ ಮೀನುಗಳು
ಮುಂಗಾರು ಮಳೆ ಜೋರಾಗುತಿದ್ದಂತೆ ತುಂಬಿ ಹರಿಯುವ ಹಳ್ಳ ಕೊಳ್ಳ, ಗದ್ದೆ ತೋಡುಗಳಲ್ಲಿ ಮೀನು ಹಿಡಿಯುವವರ ಭರಾಟೆ ಜೋರಾಗಿ ಕಂಡು ಬರುತ್ತದೆ. ಹೊಳೆ, ಸಮುದ್ರತೀರದಲ್ಲಿ ಗಾಳಹಾಕಿ ಮೀನು ಹಿಡಿಯವವರ ದಂಡೆ ಇರುತ್ತದೆ. ಮಳೆನೀರು ಮೇಲೇರಿ ಬರುತ್ತಿದ್ದಂತೆ ಉಬರ ಮೀನುಗಳು  ಜಾಡು ಹಿಡಿದು ಮೇಲೇರಿ ಬರುತ್ತವೆ. ಈ ಮೀನು ಹಿಡಿಯಲು ಮತ್ಸéಪ್ರಿಯರು ಹಗಲು ರಾತ್ರಿ ಎನ್ನದೆ ಬಲೆ ಕತ್ತಿ ಹಿಡಿದು ಅಲೆದಾಡುತ್ತಾರೆ.  ನೀರಿನ ಅಡಿಯಲ್ಲಿ ವೇಗವಾಗಿ ಚಲಿಸುವ ಬೇರೆ ಬೇರೆ ಜಾತಿಯ ಮೀನನ್ನು ನೋಟವಿಟ್ಟು ಕಡಿಯುವುದು ಒಂದು ರೋಮಾಂಚಕ ಅನುಭವ. ಬರಾಯಿ, ಕುಲೇಜ್‌, ಆಂಬಾಯಿ, ಇಪೆì, ಚೀಂಕಡೆ,  ಮಾಲಯಿ, ಕಂಡಿಕೆ, ಬಯ್ಯ ,ಕೆಂಬೆರಿ, ಮೊದಲಾದ ರುಚಿ ರುಚಿಯಾದ ಮೀನುಗಳು ಸಿಗುತ್ತವೆ.  ಹೊಳೆ ಮೀನಿನ ರುಚಿ ತಿಂದವರಿಗೆ ಗೊತ್ತು. ಮೀನು ಸಿಕ್ಕಾಗ ಇವರಿಗಾಗುವ  ಖುಷಿ ಅಷ್ಟಿಷ್ಟಲ್ಲ. ಮೀನು ತಿನ್ನುವುದಕ್ಕಿಂತ ಮೀನು ಹಿಡಿಯುವುದೇ ಒಂದು ರೀತಿಯ ರೋಮಾಂಚನ, ಖುಷಿ.

ಬಹಳ ಟೇಸ್ಟ್‌
ಮಳೆಗಾಲದಲ್ಲಿ ಗಾಳದ ಮೀನು ಕೆಲವು ಮಂದಿಗೆ ಬದುಕನ್ನು ಕಲ್ಪಿಸಿ ಕೊಟ್ಟರೂ ಖುಷಿಗಾಗಿ ಮೀನು ಹಿಡಿಯುವವರೇ ಜಾಸ್ತಿ. ಏನೇ ಆಗಲಿ ಹೊಳೆ ಮೀನು ಬಹಳ ಟೇಸ್ಟ್‌ .. ಇನ್ನು ಅದನ್ನು ಹಿಡಿಯುವಾಗ ಸಿಗೋ ಮಜಾ ಇನ್ನೂ ಟೇಸ್ಟ್‌.

ಗಾಳಹಾಕಿ ಮೀನು ಹಿಡಿಯುವುದಕ್ಕೆ ಏಕಾಗ್ರತೆ ಬೇಕು. ಸ್ವಲ್ಪ ಅಲ್ಲಾಡಿದರೂ ಮೀನಿಗೆ ಸಂಶಯ ಬಂದು ಗಾಳಕ್ಕೆ ಸಿಕ್ಕಿಸಿದ ಆಹಾರಕ್ಕೆ ಬಾಯಿ ಹಾಕದಿರಬಹುದು. ಮಳೆಗಾಲದಲ್ಲಿ ಮೀನಿಗೆ ಬರವಾದ್ದರಿಂದ ಒಂದು ಹೊತ್ತಿನ ಊಟಕ್ಕಾದರೂ ಮೀನು ಬೇಕೇ ಬೇಕು. ಬಾಯಿ ಚಪಲ ತೀರಿಸಿಕೊಳ್ಳಲು ಇಲ್ಲಿಗೆ ಗಾಳ ಹಾಕಲು ಬರುತ್ತೇವೆ.
– ಬಸಂತ್‌ ಕುಮಾರ್‌ ಬೈಲಕರೆ, ಅನಿವಾಸಿ ಭಾರತೀಯ

Advertisement

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next