Advertisement

Team India; ‘ಓಡಿ ಹೋಗುವವನಲ್ಲ…’: ಕಷ್ಟದ ದಿನಗಳ ಬಗ್ಗೆ ಮಾತನಾಡಿದ ಹಾರ್ದಿಕ್

11:16 AM Jun 02, 2024 | Team Udayavani |

ನ್ಯೂಯಾರ್ಕ್: ಮುಂಬೈ ಇಂಡಿಯನ್ಸ್ ನಾಯಕ, ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಳೆದ ಕೆಲವು ತಿಂಗಳಿನಿಂದ ಆಟದಲ್ಲಿ ಉತ್ತಮ ದಿನಗಳನ್ನು ಕಾಣುತ್ತಿಲ್ಲ. ಐಪಿಎಲ್ ನಲ್ಲಿ ಅಚ್ಚರಿಯ ರೀತಿಯಲ್ಲಿ ಮುಂಬೈ ತಂಡ ಸೇರಿದ ಹಾರ್ದಿಕ್ ನಾಯಕತ್ವ ವಹಿಸಿಕೊಂಡ ಬಳಿಕ ಭಾರೀ ಟೀಕೆಗಳನ್ನು ಎದುರಿಸಿದ್ದರು. ಅಲ್ಲದೆ ಐಪಿಎಲ್ ಪ್ರದರ್ಶನವು ಗಾಯದ ಮೇಲೆ ಉಪ್ಪು ಸುರಿದಂತೆ ಆಗಿತ್ತು.

Advertisement

ಹಾರ್ದಿಕ್ ಪಾಂಡ್ಯ 18ರ ಸರಾಸರಿಯಲ್ಲಿ ಕೇವಲ 216 ರನ್ ಗಳಿಸಿದ್ದು, 11ರ ಎಕಾನಮಿಯಲ್ಲಿ ಕೇವಲ 11 ವಿಕೆಟ್ ಮಾತ್ರ ಪಡೆದಿದ್ದಾರೆ. ಅಲ್ಲದೆ ತಂಡದ ಪ್ರದರ್ಶನವೂ ಸಂಪೂರ್ಣ ಕೆಳಮಟ್ಟಕ್ಕೆ ತಲುಪಿದ್ದು, ಹಾರ್ದಿಕ್ ಪಾಲಿಗೆ ಸಂಕಷ್ಟದ ಮೇಲೆ ಸಂಕಷ್ಟ ತಂದಿಟ್ಟಿತ್ತು.

ಬಾಂಗ್ಲಾದೇಶದ ವಿರುದ್ಧ ಭಾರತದ ಟಿ20 ವಿಶ್ವಕಪ್ 2024 ಅಭ್ಯಾಸ ಪಂದ್ಯದ ಮೊದಲು ಆಲ್‌ರೌಂಡರ್ ಕೊನೆಗೂ ಮೌನ ಮುರಿದರು, ತಾನು ಹೋರಾಟದಿಂದ ಓಡಿ ಹೋಗುವವನಲ್ಲ ಎಂದು ಹೇಳಿದರು.

“ನೀವು ಯುದ್ಧದಲ್ಲಿ ಉಳಿಯಬೇಕು. ಕೆಲವೊಮ್ಮೆ ಜೀವನವು ನಿಮ್ಮನ್ನು ಕಠಿಣ ಪರಿಸ್ಥಿತಿಗಳಲ್ಲಿ ಇರಿಸುತ್ತದೆ, ಆದರೆ ನೀವು ಆಟ ಅಥವಾ ಮೈದಾನವನ್ನು ತೊರೆದರೆ, ಕ್ರೀಡೆಯಿಂದ ನೀವು ಬಯಸಿದ್ದನ್ನು ಅಥವಾ ನೀವು ಹುಡುಕುತ್ತಿರುವ ಫಲಿತಾಂಶಗಳನ್ನು ಪಡೆಯುವುದಿಲ್ಲ ಎಂದು ನಾನು ನಂಬುತ್ತೇನೆ” ಎಂದು ವಿಶೇಷ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

“ಹೌದು, ಅದು ಕಷ್ಟಕರವಾಗಿತ್ತು, ಆದರೆ ಅದೇ ಸಮಯದಲ್ಲಿ, ನಾನು ಪ್ರಕ್ರಿಯೆಗಳನ್ನು ಪಾಲಿಸುತ್ತಿದ್ದೇನೆ. ನಾನು ಈ ಹಿಂದೆ ಅನುಸರಿಸುತ್ತಿದ್ದ ಅದೇ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಿದೆ” ಎಂದು ಹಾರ್ದಿಕ್ ಹೇಳಿದರು.

Advertisement

“ಇಂತಹುದು ಜೀವನದಲ್ಲಿ ನಡೆಯುತ್ತಿರುತ್ತದೆ. ಒಳ್ಳೆಯ ಸಮಯವೂ ಬರುತ್ತದೆ, ಕೆಟ್ಟದೂ ಬರುತ್ತದೆ. ಇಂತಹ ಹಂತಗಳು ಬಂದು ಹೋಗುತ್ತದೆ. ನಾನು ಈ ಹಂತಗಳಲ್ಲಿ ಹಲವು ಬಾರಿ ಸಾಗಿದ್ದೇನೆ. ಅದರಿಂದ ಹೊರಬಂದಿದ್ದೇನೆ ಕೂಡಾ. ನಾನು ಯಶಸ್ಸನ್ನು ಎಂದೂ ಗಂಭೀರವಾಗಿ ತೆಗೆದುಕೊಂಡವನಲ್ಲ. ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಕೂಡಲೇ ಮರೆತು ಮುಂದಕ್ಕೆ ಸಾಗಿದ್ದೇನೆ. ಕೆಟ್ಟ ಸಮಯದ ಬಗ್ಗೆಯೂ ಹಾಗೆಯೇ ಇರುತ್ತೇನೆ” ಎಂದು ಆಲ್ ರೌಂಡರ್ ಹೇಳಿದರು.

“ನಾನು ಹೋರಾಟದಿಂದ ಓಡಿ ಹೋಗುವವನಲ್ಲ. ಎಲ್ಲವನ್ನೂ ತಲೆ ಎತ್ತಿ ಎದುರಿಸುತ್ತೇನೆ. ಎಲ್ಲವೂ ಕಳೆದುಹೋಗುತ್ತದೆ. ಕೌಶಲಗಳು ಉತ್ತಮವಾಗಬೇಕು ಎಂದು ಗೊತ್ತಿದೆ. ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಪರಿಶ್ರಮ ಎಂದೂ ವ್ಯರ್ಥವಾಗುವುದಿಲ್ಲ, ಸದಾ ನಗುತ್ತಿರಿ” ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next