ಹೊಸದಿಲ್ಲಿ: ಬಿಜೆಪಿಯನ್ನು 2024ರ ಚುನಾವಣೆ ಯಲ್ಲಿ ಸೋಲಿಸಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ ಮೈತ್ರಿಕೂಟ ರಚನೆಯಾ ಗಿದೆ. 26 ಪಕ್ಷಗಳು ಇರುವ ಮೈತ್ರಿಕೂಟಕ್ಕೆ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎನ್ನುವುದೇ ಸದ್ಯಕ್ಕೆ ನಿರ್ಧಾರವಾಗಿಲ್ಲ. ಸುದ್ದಿವಾಹಿನಿ ಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ವಿಪಕ್ಷಗಳ ಒಕ್ಕೂಟದಲ್ಲಿ ವಯನಾಡ್ ಸಂಸದ ರಾಹುಲ್ ಗಾಂಧಿಯವರು ಪ್ರಧಾನಿ ಹುದ್ದೆಗೆ ಸೂಕ್ತ ಎಂದು ಶೇ.34 ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ವಿಪಕ್ಷಗಳ ಒಕ್ಕೂಟದಲ್ಲಿ ಪ್ರಧಾನಿ ಹುದ್ದೆ ನಮ್ಮ ಪಕ್ಷಕ್ಕೇ ಬೇಕು ಎಂಬ ಬೇಡಿಕೆ ಜೋರಾಗತೊಡಗಿದೆ.
ಐ.ಎನ್.ಡಿ.ಐ.ಎ ಮೈತ್ರಿಕೂಟದ ಪ್ರಧಾನ ಮಿತ್ರ ಪಕ್ಷ ಜೆಡಿಯು ನಾಯಕರು ಮುಂದಿನ ಪ್ರಧಾನಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ನಿತೀಶ್ ಕುಮಾರ್ ಅವರಿಗೆ ವೈಯಕ್ತಿಕವಾಗಿ ಆ ಹುದ್ದೆಯ ಮೇಲೆ ಆಸಕ್ತಿ ಇಲ್ಲದೇ ಇದ್ದರೂ, ದೇಶಾದ್ಯಂತ ಅವರೇ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬ ಚರ್ಚೆ ನಡೆಯುತ್ತಿದೆ ಎಂದು ಬಿಹಾರ ಸಚಿವ ಶ್ರವಣ್ ಕುಮಾರ್ ಹೇಳಲಾರಂಭಿಸಿದ್ದಾರೆ.
ಆದರೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ನಾಯಕರೊಬ್ಬರು “ನಮ್ಮ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಬಯಕೆ” ಎಂದಿದ್ದರು. ಇದಲ್ಲದೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಪದೇ ಪದೆ ರಾಹುಲ್ ಗಾಂಧಿಯವರೇ ಪ್ರಧಾನಿ ಯಾಗಬೇಕು ಎಂದು ಪ್ರತಿಪಾದಿಸುತ್ತಿ ದ್ದಾರೆ. ಹೀಗಾಗಿ ಪ್ರಧಾನಮಂತ್ರಿ ಹುದ್ದೆಗೆ ಪೈಪೋಟಿ ಶುರುವಾಗಿದೆ ಎಂಬ ಚರ್ಚೆ ಶುರುವಾಗಿದೆ.
ನಿತೀಶ್ ಕುಮಾರ್ ಐ.ಎನ್.ಡಿ.ಐ.ಎ ಒಕ್ಕೂಟದ ಪ್ರಧಾನಮಂತ್ರಿಯಾಗಬೇಕು ಎಂಬ ಬೇಡಿಕೆ ಮುಂದಿ ರಿಸಿದ್ದು ಆರ್‌ಜೆಡಿಯ ಒತ್ತಡ ಕಾರಣದಿಂದ ಎನ್ನು ವುದು ಬಿಜೆಪಿಯ ವಾದ. ಒಂದು ವೇಳೆ ನಿತೀಶ್ ಕುಮಾರ್ ಪ್ರಧಾನಮಂತ್ರಿಯಾಗಿ ಹೊಸದಿಲ್ಲಿಗೆ ಹೋದರೆ, ಸದ್ಯ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಯಾದವ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಸಿಗುತ್ತದೆ ಎನ್ನುವುದು ಲಾಲು ಪ್ರಸಾದ್ ಯಾದವ್ ವಾದ. ಆ.31, ಸೆ.1ರಂದು ಮುಂಬಯಿಯಲ್ಲಿ ಮೈತ್ರಿ ಕೂಟದ ಮುಂದಿನ ಸಭೆ ನಡೆಯಲಿದೆ. ಆ ವೇಳೆಗೆ ಇನ್ನಷ್ಟು ಹೊಳಹು ಸಿಗಬಹುದು ಎನ್ನಲಾಗುತ್ತಿದೆ.