Advertisement

ಪಾರಂಪರಿಕ ಜ್ಞಾನದ ಬಗ್ಗೆ ಅಸಡ್ಡೆ ಸಲ್ಲ: ಇಸ್ರೋ ಅಧ್ಯಕ್ಷ

07:45 AM Oct 29, 2017 | Team Udayavani |

ಬೆಂಗಳೂರು: “ಪಾಶ್ಚಿಮಾತ್ಯದ ಜ್ಞಾನವೇ ಶ್ರೇಷ್ಠ ಎಂಬ ಸಮೂಹಸನ್ನಿಗೆ ಒಳಗಾಗಿ ದೇಶದ ಪಾರಂಪರಿಕ ಜ್ಞಾನದ ಬಗೆಗಿನ ಅಸಡ್ಡೆ ಸರಿಯಲ್ಲ’ ಎಂದು ಪ್ರತಿಪಾದಿಸಿದ ಇಸ್ರೋ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌, “ಈ ಧೋರಣೆಯಿಂದ ಹೊರ ಬರುವಂತೆ’ ಯುವ ಸಮುದಾಯಕ್ಕೆ ಕರೆ ನೀಡಿದರು.

Advertisement

ವೇದಾಂತ ಭಾರತಿ ಸಂಸ್ಥೆಯಿಂದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಹಮ್ಮಿಕೊಂಡಿರುವ ಎರಡು ದಿನದ ದಶಮಃ ಸೌದರ್ಯಲಹರಿ ಪಾರಾಯಣೋತ್ಸವ  ಮಹಾಸಮರ್ಪಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಾಶ್ಚಿಮಾತ್ಯದಿಂದ ಬಂದಿದ್ದೆಲ್ಲವೂ ಸರಿ; ನಮ್ಮ ಪರಂಪರೆಯಲ್ಲಿನ ವಿಷಯಗಳು ತಪ್ಪು ಎಂಬ ಭಾವನೆ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದ ಪಾರಂಪರಿಕ ಜ್ಞಾನದ ಬಗ್ಗೆ ಅಸಡ್ಡೆ ಮೂಡಿ, ಪಾಶ್ಚಿಮಾತ್ಯದ ಜ್ಞಾನ, ವಿಜ್ಞಾನವೇ ಶ್ರೇಷ್ಠ ಎಂಬ ಧೋರಣೆ ಬೆಳೆಯುತ್ತಿದೆ. ಇದೊಂದು ತಪ್ಪು ಕಲ್ಪನೆಯಾಗಿದ್ದು ಇದರಿಂದ ಯುವ ಸಮೂಹ ಹೊರ ಬರಬೇಕು. ಪರಂಪರಾಗತವಾಗಿ ಋಷಿಮುನಿಗಳು ಮತ್ತು ಆದಿಶಂಕರರಿಂದ ಅಪಾರ ಜ್ಞಾನ ಪ್ರಾಪ್ತಿಯಾಗಿದೆ. ಇದನ್ನು ಮನನ ಮಾಡಿಕೊಂಡು ಈ ಜ್ಞಾನವನ್ನು ಪಸರಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಜೀವನದುದ್ದಕ್ಕೂ ಕುತೂಹಲ ಕಾಯ್ದುಕೊಂಡವರು ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಕುತೂಹಲದಿಂದ ವಿಜ್ಞಾನದಲ್ಲಿ
ತೊಡಗಿಸಿಕೊಂಡವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಮನುಷ್ಯ ತನ್ನ ಕಣ್ಣಿನಿಂದ ಸೂರ್ಯ, ಚಂದ್ರ, ನಕ್ಷತ್ರಗಳನ್ನು
ನೋಡಬಹುದು. ಆದರೆ, ಆಧುನಿಕ ಸಾಧನಗಳನ್ನು ಬಳಸಿದಾಗ ಆಕಾಶದ ಬೆರಗು ಲೋಕ ಕಂಡಿತು. ಉಪಗ್ರಹಗಳು ಸೇರಿದಂತೆ ಇತರ ಮಾನವ ಶೋಧಿತ ವಸ್ತುಗಳು ವಿಜ್ಞಾನದಲ್ಲಿನ ಬೆರಗುಲೋಕವನ್ನು ಪರಿಚಯಿಸಿದವು. 

ಮೆದುಳಿನ ಕುರಿತಾಗಿಯೂ ಅನೇಕ ಸಂಶೋಧನೆಗಳು ನಡೆಯುತ್ತಿದ್ದು, ಯಾವುದೇ ಸ್ಥಳಕ್ಕೆ ಹೋಗದಿದ್ದರೂ ಅಲ್ಲಿನ ಅನುಭವ ಪಡೆಯುವಂತ ತಂತ್ರಜ್ಞಾನಗಳ ಸಂಶೋಧನೆ ನಡೆಯುತ್ತಿದೆ.

Advertisement

ಕಳೆದ ಕೆಲ ದಶಕಗಳ ಹಿಂದೆ ಮೊಬೈಲ್‌ ಬಗೆಗೆ ಮಾತನಾಡಿದಾಗಲೂ ಯಾರೂ ನಂಬುತ್ತಿರಲಿಲ್ಲ. ಆದರೆ ತಂತ್ರಜ್ಞಾನ ಅದನ್ನು ಸಾಧ್ಯವಾಗಿಸಿದೆ. ವಿಜ್ಞಾನದ ಬಗೆಗಿನ ಕುತೂಹಲಕ್ಕೆ ಇದೇ ಸಾಕ್ಷಿ ಎಂದು ವಿವರಿಸಿದರು.

ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತೀಮಠದ ಶ್ರೀಶಂಕರಭಾರತೀ ಸ್ವಾಮೀಜಿ ಮಾತನಾಡಿ, ವಿದ್ಯೆಯಿದ್ದರೆ ಮೂರು ಲೋಕದ ಒಡೆಯರಿದ್ದಂತೆ ಎಂಬ ಮಾತನ್ನು ಹೇಳಿದ್ದ. ಶಂಕರಾಚಾರ್ಯರು ವಿದ್ಯೆಯ ಮಹತ್ವವನ್ನು ಸಾರಿದ್ದಾರೆ. ಅವರು ರಚಿಸಿದ ಸೌಂದರ್ಯಲಹರಿ ಪಠಣೆಯಿಂದ ಹೆಚ್ಚಿನ ಜ್ಞಾನ ಪ್ರಾಪ್ತಿಯಾಗಲಿದೆ. ಸರಿ, ತಪ್ಪುಗಳನ್ನು ಗುರುತಿಸುವ ಕನಿಷ್ಠ ಜ್ಞಾನವನ್ನೂ ತೋರದ ಮನುಷ್ಯರಿಗೂ ಹಾಗೂ ಪ್ರಾಣಿಗಳ ನಡುವಿನ ವ್ಯತ್ಯಾಸ ಏನೆಂಬುದು ತಿಳಿಯದಾಗಿದೆ. 

ವಿದ್ಯೆಯ ಮೂಲಕ ಜ್ಞಾನ ದೊರೆಯಲಿದ್ದು, ಮಾನವರಾಗಿ ಹುಟ್ಟಿದ ಮೇಲೆ ಜ್ಞಾನಾರ್ಜನೆಗೆ ಮುಂದಾಗದಿದ್ದರೆ, ಮನುಷ್ಯ ಕೂಡ ಪ್ರಾಣಿಯಾಗುತ್ತಾನೆ. ಶಂಕರಾಚಾರ್ಯರು ಸಂಪತ್ತಿನಿಂದ ಶ್ರೀಮಂತರಾಗಿರಲಿಲ್ಲ. ಅವರು ಜ್ಞಾನದಲ್ಲಿ ಶ್ರೀಮಂತರಾಗಿದ್ದರು. ಅದಕ್ಕಾಗಿ ಸಾವಿರಾರು ವರ್ಷಗಳ ನಂತರವೂ ಅವರನ್ನು ಸ್ಮರಿಸಲಾಗುತ್ತಿದೆ ಎಂದು ಹೇಳಿದರು ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ ಹಾರನಹಳ್ಳಿ, ಪಾರಾಯಣೋತ್ಸವ ಸಂಚಾಲನ ಸಮಿತಿಯ ಗೌರವಾಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌, ಅಧ್ಯಕ್ಷ ಎಸ್‌. ಎಸ್‌.ನಾಗಾನಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next