ಭಟ್ಕಳ: ಕಾಮಗಾರಿ ಆರಂಭವಾದ ಇಂದಿರಾ ಕ್ಯಾಂಟೀನ್ ಕಾಮಗಾರಿ ಕುಂಟುತ್ತಾ ಸಾಗಿ ನಂತರ ಕಳೆದ ಒಂದೂವರೆ ವರ್ಷಗಳ ಹಿಂದೆ ಪೂರ್ಣಗೊಂಡಿದ್ದರೂ ಕೂಡಾ ಇನ್ನೂ ತನಕ ಉದ್ಘಾಟನೆ ಭಾಗ್ಯ ಕಾರಣದಿರುವುದು ಬಡವರು, ಕೂಲಿ ಕಾರ್ಮಿಕರು ಸರಕಾರದ ಉತ್ತಮ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದೆ.
ಇಲ್ಲಿನ ಮಧ್ಯವರ್ತಿ ಪ್ರದೇಶವಾದ ಆಸ್ಪತ್ರೆ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಲು ಆರಂಭಿಸಲಾಯಿತು. ಸುಮಾರು ಎರಡು ವರ್ಷ ಕೇವಲ ಸಿವಿಲ್ ಕಾಮಗಾರಿ ಮುಗಿಸುವುದಕ್ಕೆ ಸಮಯ ತೆಗೆದುಕೊಂಡ ಗುತ್ತಿಗೆದಾರ ಕಂಪೆನಿ ಕೊನೆಗೂ ತಮ್ಮ ಕಾರ್ಯ ಮುಗಿಸಿತ್ತು. ಸಿವಿಲ್ ಕಾಮಗಾರಿ ಮುಗಿದ ನಂತರ ಸ್ಥಳೀಯ ಪುರಸಭೆಯವರು ಕ್ಯಾಂಟೀನ್ ಆರಂಭಿಸಲು ಅಗತ್ಯ ನೀರು ಸರಬರಾಜು, ಡ್ರೈನೇಜ್ ವ್ಯವಸ್ಥೆ, ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ, ಅಡುಗೆ ಅನಿಲ ಇತ್ಯಾದಿ ವ್ಯವಸ್ಥೆ ಮಾಡಿಕೊಂಡು ಉದ್ಘಾಟಿಸಬೇಕಿತ್ತು. ಆದರೆ ಸಿವಿಲ್ ಕಾಮಗಾರಿ ಮಾಡಿದ ನಂತರ ಆದರ ಉದ್ಘಾಟನೆಗೆ ದಿನ ನಿಗದಿಯಾಗ ಬೇಕಿತ್ತಾದರೂ ಇನ್ನೂ ತನಕ ದಿನ ನಿಗದಿಯಾಗದೇ ಇರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಹಾರ ದೊರೆಯಲಿ ಎಂದು ಇಂದಿರಾ ಕ್ಯಾಂಟೀನ್ ಆರಂಭಿಸುವ ಯೋಜನೆ ಘೋಷಿಸಿತು. ಅದರಂತೆ ರಾಜ್ಯದಲ್ಲಿ ಒಟ್ಟೂ 249 ಇಂದಿರಾ ಕ್ಯಾಂಟೀನ್ ತೆರೆಯಲು ಯೋಜನೆ ರೂಪಿಸಿದ್ದರೂ ಕೂಡಾ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾಗಿ ಸಮ್ಮಿಶ್ರ ಸರಕಾರ ಬಂದಿರುವುದು ಇಂದಿರಾ ಕ್ಯಾಂಟೀನ್ ತೆರೆಯುವುದಕ್ಕೆ ತೊಡಕಾಯಿತು.
ಆದರೆ ಹಿಂದೆಯೇ ಮಂಜೂರಾಗಿದ್ದ ಇಂದಿರಾ ಕ್ಯಾಂಟೀನ್ ತೆರೆಯಲು ಭಟ್ಕಳ ನಗರದ ಮಧ್ಯವರ್ತಿ ಸ್ಥಳದಲ್ಲಿ ಜಾಗಾ ಗುರುತಿಸಿ ಸಿವಿಲ್ ಕಾಮಗಾರಿ ನಡೆಸುತ್ತಿರುವಾಗಲೇ ವರ್ಷಗಟ್ಟಲೆ ತಡ ಮಾಡಿದ ಸಿವಿಲ್ ಗುತ್ತಿಗೆದಾರರು ಕೊನೆಗೂ ಕೆಲಸ ಮುಗಿಸಿದ್ದರೂ ಸ್ಮಾರಕದಂತೆ ನಿಂತುಕೊಂಡಿದ್ದು ಯಾಕೆ ಎನ್ನುವುದು ಮಾತ್ರಉತ್ತರ ಸಿಗದ ಪ್ರಶ್ನೆಯಾಗಿದೆ. ಅತ್ಯಂತ ಸೂಕ್ತ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಆರಂಭಗೊಂಡಿದ್ದರೆ ಕೋವಿಡ್ -19 ನಿಂದಾಗಿ ಆದಾಯವಿಲ್ಲದೇ, ದಿನದ ದುಡಿಮೆಯೂ ಇಲ್ಲದೇ ತೀವ್ರ ತೊಂದರೆಯಲ್ಲಿರುವ ಕೂಲಿ ಕಾರ್ಮಿಕರು,ಬಡ ವರ್ಗದವರು ಎಲ್ಲರಿಗೂ ಕಡಿಮೆ ದರದಲ್ಲಿ ಊಟ, ಉಪಹಾರ ಸಿಗಲು ಸಾಧ್ಯವಾಗುತ್ತಿತ್ತು.
ದಿನದಿಂದ ದಿನಕ್ಕೆ ಆಹಾರ ಸಾಮಗ್ರಿ ಸೇರಿದಂತೆ ತರಕಾರಿ ಮತ್ತಿತರ ಬೆಲೆಗಳು ಜಾಸ್ತಿಯಾಗಿರುವುದರಿಂದ ಹೊಟೆಲ್ ನಲ್ಲಿ ಉಪಹಾರ, ಊಟದ ದರವೂ ಅನಿವಾರ್ಯವಾಗಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಹಲವು ಕಡೆ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು,ಬಡವರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ಇಂದಿರಾ ಕ್ಯಾಂಟೀನ್‌ನಿಂದ ಬಹಳ ಅನುಕೂಲವಾಗಿದೆ.
ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವವರು,ವಾರದ ಸಂತೆಗೆ ಬರುವವರು, ಬಸ್‌ನಿಲ್ದಾಣ, ಸಹಾಯಕ ಆಯುಕ್ತರ ಕಚೇರಿ, ವಿವಿಧ ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭವಾಗಲಿ ಎನ್ನುವುದು ಜನತೆಯ ಆಶಯವಾಗಿದೆ.