Advertisement

ಪದವಿಗಳಿಂದ ಶಿಕ್ಷಿತರಲ್ಲ: ಮೃತ್ಯುಂಜಯ ಮಹಾಪಾತ್ರ

12:30 AM Jan 19, 2019 | Team Udayavani |

ಉಡುಪಿ: “ನಾವು ಶಿಕ್ಷಿತರು’ ಎಂದು ಪರಿಗಣಿಸಿಕೊಳ್ಳುವವರು ವಾಸ್ತವದಲ್ಲಿ ಶಿಕ್ಷಿತರಾಗಿರುವುದಿಲ್ಲ ಎಂದು ಸಿಂಡಿಕೇಟ್‌ ಬ್ಯಾಂಕ್‌ ಆಡಳಿತ ನಿರ್ದೇಶಕ ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ ವಿಶ್ಲೇಷಿಸಿದರು. ಮಣಿಪಾಲದ ಕೆಎಂಸಿ ಡಾ| ಟಿಎಂಎ ಪೈ ಸಭಾಭವನದಲ್ಲಿ ಟಿ.ಎ. ಪೈ ಮ್ಯಾನೇಮೆಂಟ್ ಇನ್‌ಸ್ಟಿಟ್ಯೂಟ್‌ ಮತ್ತು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ವತಿಯಿಂದ ಶುಕ್ರವಾರ ಸ್ಥಾಪಕರ ದಿನಾಚರಣೆ ಮತ್ತು ಟಿ.ಎ. ಪೈ ಸ್ಮಾರಕ ಉಪನ್ಯಾಸ ವನ್ನು ಅವರು ನೀಡಿದರು. “ಬೀಯಿಂಗ್‌ ಆ್ಯಂಡ್‌ ಸ್ಟೇಯಿಂಗ್‌ ಎಜುಕೇಟೆಡ್‌ ಇನ್‌ ದಿ ಡಿಜಿಟಲ್‌ ಏಜ್‌’ ಅವರ ಉಪನ್ಯಾಸ ವಿಷಯವಾಗಿತ್ತು. 

Advertisement

ನಡವಳಿಕೆ, ಕ್ರಿಯಾಶೀಲತೆ, ಮನೋಪ್ರವೃತ್ತಿಯಿಂದ ನಾವು ಶಿಕ್ಷಿತರು ಎಂದು ಗುರುತಿಸಿಕೊಳ್ಳುತ್ತೇವೆ. ಪಡೆಯುವ ಶಿಕ್ಷಣ, ಸಂವಹನ, ನಿರಂತರ ಕಲಿಕೆ, ಪ್ರವಾಸ, ಇತಿಹಾಸದ ಗತಿಳನ್ನು ವೈಜ್ಞಾನಿಕ ವಿಮರ್ಶೆಯಿಂದ ಕಾಣುವುದು, ಉತ್ತಮ ಕೆಲಸಗಳಿಗೆ ತತ್‌ಕ್ಷಣವೇ ಮೆಚ್ಚುಗೆ ವ್ಯಕ್ತಪಡಿಸುವುದು, ವೈಜ್ಞಾನಿಕ ವಿಮರ್ಶಾ ಗುಣಗಳಿಂದ ವ್ಯಕ್ತಿ ಶಿಕ್ಷಿತ ಎನಿಸಿ ಕೊಳ್ಳುತ್ತಾನೆ. ಪರೀಕ್ಷೆ, ಪದವಿಗಳಿಂದ ಮಾತ್ರವೇ ಶಿಕ್ಷಿತರಾಗುವುದಿಲ್ಲ. ಮೌಲ್ಯ, ವ್ಯಕ್ತಿತ್ವ ಹಿಂದಿ ನಿಂದಲೂ ಶಿಕ್ಷಿತನಿಗಿರುವ ಅರ್ಹತೆಗಳಾಗಿವೆ. ಸಮೂಹ ನಿರ್ವಹಣೆ, ಇತರರನ್ನು ಗೌರವದಿಂದ ಕಾಣುವುದು, ವೈಚಾರಿಕ ಭೇದಗಳಿದ್ದರೂ ಅಂತಹ ಸಂದರ್ಭ ಗೌರವ ತೋರುವುದು, ವೈಯಕ್ತಿಕ ನೋವುಗಳಿಗೆ ಸ್ಪಂದಿಸುವ ಗುಣಗಳು ಶಿಕ್ಷಿತನನ್ನು ಮೌಲ್ಯವರ್ಧಿತನನ್ನಾಗಿಸುತ್ತದೆ ಎಂದರು. 

ಹಿಂದೆ ಶೋಧನೆಗಳು ಶೋಧನೆಗಳಿಗಾಗಿ ಇದ್ದರೆ ಈಗ ನಿರಂತರ ಅಭಿವೃದ್ಧಿಗಾಗಿ ನಡೆಯುತ್ತಿವೆ. ಪಾವತಿಸಿ ಬಳಸುವ ಪ್ರವೃತ್ತಿ ಈಗ ಬೆಳೆದಿದೆ. ಕಮ್ಯುನಿಕೇಶನ್‌ ನೆಟ್‌ವರ್ಕ್‌, ಕೌಡ್‌, ಡಾಟಾ ವಿಜ್ಞಾನ, ಬಿಗ್‌ ಡಾಟಾಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ಕ್ರಿಯಾಶೀಲವಾಗಿ ಚಿಂತನೆ ನಡೆಸು ವುದು, ಉದ್ಯಮಶೀಲತೆ, ಸಮೂಹ ಕಾರ್ಯ, ನೈತಿಕ ಬದುಕು, ಅಂತರ್‌ಶಿಸ್ತೀಯ ಅಧ್ಯಯನಗಳ ವಿಷಯಗಳಲ್ಲಿ ಕೌಶಲ, ಇತ್ತೀಚಿನ ಬೆಳವಣಿಗೆಗಳ ಅರಿವು, ಆಳವಾದ ತಾಂತ್ರಿಕ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ. ಈಗ ಬಹುಮುಖಗಳ ಒತ್ತಡವನ್ನು ನಿರ್ವಹಿಸಬೇಕಾಗುತ್ತದೆ ಎಂದು ಮಹಾಪಾತ್ರ ಹೇಳಿದರು. 

ಟಿ.ಎ. ಪೈಯವರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಬಳಿಕ ಬಹು ಎತ್ತರಕ್ಕೇರಿದ ಬಗೆಯನ್ನು ವಿಶ್ಲೇಷಿಸಿದ ಮಹಾಪಾತ್ರ, ಸಾಮಾನ್ಯವಾಗಿ ಅಸಾಧಾರಣ ಶಕ್ತಿ ಹೊಂದಿರುವವರು ಅಲ್ಪಾಯುಗಳಾಗಿರುತ್ತಾರಂತೆ. ನನಗೂ ಅವರು ಬದುಕಿದಷ್ಟೇ ವಯಸಾಗಿದೆಯಾದರೂ ಅವರ ಶಕ್ತಿಯ ಎದುರು ನಾನೇನೂ ಅಲ್ಲ ಎಂದರು. ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿದರು. ಮಣಿಪಾಲ ಮಾಹೆ ವಿವಿ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಉಪಸ್ಥಿತರಿದ್ದರು. 

ಯಾರು ಅಶಿಕ್ಷಿತರು?
ಕೆಲಸದಲ್ಲಿ ಬದ್ಧತೆ ಇಲ್ಲದಿರುವವರು, ಪ್ರಾಕ್ಟಿಕಲ್‌ ಆಗಿರದೆ ಬದುಕುವವರು, ಕೆಟ್ಟ ಸುದ್ದಿಗಳು- ಗಾಸಿಪ್‌ಗ್ಳನ್ನು ಹರಡುವವರು, ಶಿಸ್ತುಬದ್ಧ ಜೀವನ ನಡೆಸದವರು, ಖಾಸಗಿ ತನಕ್ಕೆ ಗೌರವ ನೀಡದಿರುವವರು, ಕೃತಿ ಚೋರರು, ತಪ್ಪುಗಳನ್ನು-ಆರೋಪಗಳನ್ನು ಇತರರ ಮೇಲೆ ವರ್ಗಾಯಿಸುವವರು, ಬಡಾಯಿಗಾರರು ಅಶಿಕ್ಷಿತರು ಎಂದು ಮೃತ್ಯುಂಜಯ ಮಹಾಪಾತ್ರ ಬಣ್ಣಿಸಿದರು. 

Advertisement

ಊಟಕ್ಕಿಂತ  ಜೀರ್ಣಶಕ್ತಿ ಮುಖ್ಯ
ಎಷ್ಟು ಊಟ ಮಾಡುತ್ತೇವೆಂಬುದಕ್ಕಿಂತ ಎಷ್ಟು ಜೀರ್ಣಶಕ್ತಿ ಇದೆ ಎಂಬುದನ್ನು ನೋಡಬೇಕು. ಓದಿದರೆ ಸಾಲದು, ನೆನಪಿನಲ್ಲಿ ಇರಿಸಿಕೊಳ್ಳಬೇಕು. ಎಷ್ಟು ಓದಿದ್ದೇನೆ ಎನ್ನುವುದಕ್ಕಿಂತ ಅದರಿಂದ ಎಷ್ಟು ಕಲಿತಿದ್ದೇನೆ ಎನ್ನುವುದು ಮುಖ್ಯ. ಆತ್ಮಾವಲೋಕನ ಪ್ರಮುಖ ಎಂದು ಮಹಾಪಾತ್ರ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next