Advertisement

ತ್ಯಾಜ್ಯ ಸಮಸ್ಯೆಗೆ ಬಿದ್ದಿಲ್ಲ  ಪೂರ್ಣ ಅಂಕುಶ 

01:05 PM Jun 20, 2018 | |

ನಗರ : ಘನತ್ಯಾಜ್ಯ ವಿಲೇವಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾದಂತೆ ಕಾಣುತ್ತಿಲ್ಲ. ಕೆಲವು ಕಡೆಗಳಲ್ಲಿ ಘನತ್ಯಾಜ್ಯ ಚೆಲ್ಲಾಡು ತ್ತಿದ್ದು, ಕೆಲವು ಅಂಗಡಿಗಳಲ್ಲೂ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

Advertisement

ತಿಂಗಳ ಹಿಂದೆ ಘನತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗದೆ, ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಮನೆ, ಅಂಗಡಿಗಳ ತ್ಯಾಜ್ಯ ರಸ್ತೆ ಬದಿಯ ಡಬ್ಬಿಯಲ್ಲಿ ತುಂಬಿ ತುಳುಕುತ್ತಿತ್ತು. ಹೊಸ ವ್ಯವಸ್ಥೆ ಆಗಿನ್ನೂ ಪ್ರಾರಂಭವಾಗದೆ, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಹೊಸ ವ್ಯವಸ್ಥೆ ಕ್ರಮೇಣ ಸಮಸ್ಯೆ ಬಗೆಹರಿಸುವಲ್ಲಿ ಸಫಲವಾಯಿತು. ಹಾಗೆಂದು ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಅಂಕುಶ ಹಾಕಲು ಯಶಸ್ವಿಯಾಗಿಲ್ಲ.

ಸಕಾಲಿಕ ಸ್ಪಂದನೆ ಅಗತ್ಯ
ಪೇಟೆ ಬೆಳೆದಂತೆ ಘನತ್ಯಾಜ್ಯ ವಿಲೇವಾರಿಯೂ ಬೃಹತ್‌ ಸಮಸ್ಯೆಯಾಗಿ ಕಾಡುವುದು ಸಹಜ. ಸ್ಥಳೀಯಾಡಳಿತ ಸಕಾಲಿಕವಾಗಿ ಸ್ಪಂದಿಸದೇ ಹೋದರೆ, ಸಮಸ್ಯೆ ಕೈಮೀರಿ ಹೋಗುತ್ತದೆ. ಪುತ್ತೂರು ನಗರಸಭೆ ವ್ಯಾಪ್ತಿಯೂ ಇದಕ್ಕೆ ಹೊರತಾಗಿಲ್ಲ. ಒಂದೊಮ್ಮೆ ನಗರಸಭೆಯ ಪೌರಕಾರ್ಮಿಕರೇ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರು. ಬಳಿಕ ಸ್ವಸಹಾಯ ಸಂಘಗಳ ಮೂಲಕ ಪುತ್ತೂರು ಪೇಟೆಯ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಘನತ್ಯಾಜ್ಯ ಸಂಗ್ರಹಕ್ಕೆ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. 7 ವಾಹನಗಳನ್ನು ಟೆಂಡರ್‌ಗೆ ವಹಿಸಿಕೊಂಡು, ಪೌರಕಾರ್ಮಿಕರ ಮೂಲಕವೇ ತ್ಯಾಜ್ಯ ಸಂಗ್ರಹ ಮಾಡಲು ಆರಂಭಿಸಿತು. ಇದು ಒಗ್ಗಿಕೊಳ್ಳಲು ಸ್ವಲ್ಪ ಸಮಯವನ್ನೇ ತೆಗೆದುಕೊಂಡಿತು. ಹಾಗೆಂದು ಇದು ಇಂದಿಗೂ ಸುಸ್ಥಿತಿಗೆ ಬಂದಿಲ್ಲ.

41 ಕಾರ್ಮಿಕರ ನೇಮಕ
ಹೊಸ ಟೆಂಡರ್‌ ವಹಿಸಿಕೊಂಡ ಲಾರಿಗಳಿಗೆ 41 ಹೊಸ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಇವರಿಗೆ ಪುತ್ತೂರಿನ ತ್ಯಾಜ್ಯ ಸಂಗ್ರಹ ವಿಷಯ ಹೊಸದು. ಎಲ್ಲೆಲ್ಲ ತ್ಯಾಜ್ಯ ಡಬ್ಬಿ ಇಟ್ಟಿದ್ದಾರೆ. ಯಾವೆಲ್ಲ ಪ್ರದೇಶದಲ್ಲಿ ಅಂಗಡಿಗಳಿವೆ ಎನ್ನುವ ಮೂಲ ವಿಚಾರವೇ ತಿಳಿದಂತೆ ಕಾಣುತ್ತಿಲ್ಲ. ಪೇಟೆಗಿಂತ ಸ್ವಲ್ಪ ಒಳ ಪ್ರದೇಶಗಳಲ್ಲಿರುವ ತ್ಯಾಜ್ಯ ಡಬ್ಬಿ ಹಾಗೂ ಕೆಲವುಅಂಗಡಿಗಳ ಘನತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ ಎಂಬ ದೂರುಗಳು ಬಂದಿವೆ.

2 ದಿನಗಳಿಗೊಮ್ಮೆ ಸಂಗ್ರಹ
ಪ್ರತಿದಿನ ತ್ಯಾಜ್ಯ ಸಂಗ್ರಹ ಕಷ್ಟ ಎನ್ನುವ ನಿರ್ಣಯಕ್ಕೆ ಪುತ್ತೂರು ನಗರಸಭೆ ಬಂದಿದೆ. ಆದ್ದರಿಂದ 2 ದಿನಗಳಿಗೊಮ್ಮೆ ತ್ಯಾಜ್ಯ ಡಬ್ಬಿಗಳಿಂದ ಘನತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. 2 ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹ ಮಾಡುವುದು ಆಡಳಿತಕ್ಕೆ ಸುಲಭದ ವಿಷಯ. ಆದರೆ ತ್ಯಾಜ್ಯದ ರಾಶಿ ಬೃಹದಾಗಿ ಬೆಳೆದು, ಸ್ಥಳೀಯರಿಗೆ ತಲೆನೋವಾಗಿದೆ. ಡಬ್ಬಿಯಿಂದ ತ್ಯಾಜ್ಯ ಹೊರ ಚೆಲ್ಲುತ್ತಿದ್ದು, ಕಾಗೆ – ನಾಯಿ ಮೊದಲಾದ ಪ್ರಾಣಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಾಡುತ್ತಿವೆ.

Advertisement

ನೇರ ನೇಮಕಾತಿ
ಪುತ್ತೂರು ನಗರಸಭೆಗೆ ನೇರ ನೇಮಕಾತಿ ಮೂಲಕ ಪೌರಕಾರ್ಮಿಕರನ್ನು ತೆಗೆದುಕೊಳ್ಳಲು ಸರಕಾರ ಅನುಮತಿಸಿದೆ. ಇದಕ್ಕೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದರೆ ಮುಗಿಯಿತು. ಇರುವ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಂಡು, ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಈಗ ಟೆಂಡರ್‌ ಕರೆಯಲು ಅನುಮತಿ ಇಲ್ಲದ ಕಾರಣ, ಇಂತಹ ಪರ್ಯಾಯ ಮಾರ್ಗ ಸ್ಥಳೀಯಾಡಳಿತಕ್ಕೆ ಅನಿವಾರ್ಯ ಆಗಿದೆ. ಈ ಪೌರಕಾರ್ಮಿಕರಿಗೆ ನಗರಸಭೆಯೇ ನೇರ ವೇತನ ಪಾವತಿ ಮಾಡಲಿದೆ.

100 ಮಂದಿ ಬೇಕು
ಪುತ್ತೂರು ನಗರಸಭೆ ವ್ಯಾಪ್ತಿಯ ಶುಚಿತ್ವ ಕೆಲಸಕ್ಕೆ ಸುಮಾರು 100 ಮಂದಿ ಪೌರ ಕಾರ್ಮಿಕರ ಅಗತ್ಯವಿದೆಯಂತೆ. ಸದ್ಯ 15
ಮಂದಿ ಮಾತ್ರ ಶಾಶ್ವತ ಪೌರ ಕಾರ್ಮಿಕರಿದ್ದಾರೆ. ಉಳಿದಂತೆ ಹೊಸ ವ್ಯವಸ್ಥೆಯಡಿ 41 ಮಂದಿ ಪೌರ ಕಾರ್ಮಿಕರಿದ್ದಾರೆ. ಇವರನ್ನು ನೇರ ನೇಮಕಾತಿ ಮಾಡಿಕೊಳ್ಳಬಹುದು. ಇವರಿಗೆ ಪಿಎಫ್‌ ಸೌಲಭ್ಯವೂ ಇದೆ. ಹಾಗಿದ್ದು 56 ಪೌರ ಕಾರ್ಮಿಕರನ್ನು ಪುತ್ತೂರು ನಗರಸಭೆ ಶುಚಿತ್ವಕ್ಕೆ ಬಳಸಿಕೊಂಡಂತಾಯಿತು. ಇನ್ನೂ 44ರಷ್ಟು ಪೌರ ಕಾರ್ಮಿಕರ ಅಗತ್ಯವಿದೆ.

ನೇರ ನೇಮಕಾತಿ
ಟೆಂಡರ್‌ ಕರೆಯಲು ಅವಕಾಶ ಇಲ್ಲದ ಕಾರಣ, ನೇರ ನೇಮಕಾತಿಗೆ ಸರಕಾರ ಆದೇಶಿಸಿದೆ. ಇವರಿಗೆ ನಗರಸಭೆ ಆಡಳಿತ ವೇತನ ಪಾವತಿ ಮಾಡಲಿದೆ. ಇವರಿಗೆ ವಾಹನ ಗುತ್ತಿಗೆ ನೀಡಿದ ವ್ಯಕ್ತಿ ಪೇಮೆಂಟ್‌ ನೀಡಬೇಕಾಗಿಲ್ಲ. ಉಳಿದ ವಿಷಯ ಸರಕಾರಕ್ಕೆ ಬಿಟ್ಟದ್ದು.
 - ರೂಪಾ ಶೆಟ್ಟಿ, ಪೌರಾಯುಕ್ತೆ
    ಪುತ್ತೂರು ನಗರಸಭೆ 

Advertisement

Udayavani is now on Telegram. Click here to join our channel and stay updated with the latest news.

Next