Advertisement

ಹೂಳೆತ್ತಿಲ್ಲ, ಕೆಲವು ರಸ್ತೆಗಳಿಗೆ ಚರಂಡಿಯೇ ಇಲ್ಲ

06:10 AM Jun 09, 2018 | Team Udayavani |

ಕುಂದಾಪುರ: ಇಲ್ಲಿನ ಬರೆಕಟ್ಟೆ ವಾರ್ಡ್‌ ಶುರುವಾಗೋದು ಪಾರಿಜಾತ ಹೊಟೇಲ್‌ ಹತ್ತಿರದಿಂದ ಸಣ್ಣ ದಾರಿಯಲ್ಲಿ ಸಾಗಿದಾಗ. ಇದರಲ್ಲಿ ರಿಕ್ಷಾ ಹಾಗೂ ಸಣ್ಣ ಕಾರುಗಳಷ್ಟೇ ಸಾಗಬಹುದು. ರಸ್ತೆ ಪಕ್ಕ ಚರಂಡಿಯಿದ್ದು, ಅದರಲ್ಲೇ ವಿದ್ಯುತ್‌ ಕಂಬಗಳಿವೆ. ಇವುಗಳು ನೀರಿನ‌ಹರಿವಿಗೆ ಅಡ್ಡಿ ಮಾಡುವುದು ಗೋಚರವಾಗುತ್ತದೆ.  

Advertisement

ಮಳೆ ಸಂಕಷ್ಟ 
ಶುಕ್ರವಾರ ಮುಂಜಾನೆ 4.45ರ ಹೊತ್ತಿಗೆ ಸುರಿದ ಭಾರೀ ಮಳೆಯ ವೇಳೆ ಕಾಂಕ್ರೀಟ್‌ ರಸ್ತೆಯಲ್ಲಿ ತುಂಬಿ ಹರಿದ ನೀರು ಸ್ಥಳೀಯ ನಿವಾಸಿ ನೇತ್ರಾವತಿ ಅವರ ಮನೆಗೆ ನುಗ್ಗಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಿದ್ದು, ಮೆಟ್ಟಿಲುವರೆಗೆ ಬಂದಿತ್ತು. ಇಲ್ಲಿನ ಸಮಸ್ಯೆ ಎಂದರೆ ರಸ್ತೆಯ ನೀರು ನೇತ್ರಾವತಿ ಅವರ ಮನೆ ಅಂಗಳಕ್ಕೇ ನುಗ್ಗಿ ಬಳಿಕ ಬೇರೆಡೆಗೆ ಹರಿಯುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಇನ್ನೂ ಆಗಿಲ್ಲ. ಸದ್ಯ ಪುರಸಭಾ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಅವರು ಬಂದು ಪುರಸಭೆಯ ಯಂತ್ರದ ಮೂಲಕ ಅಂಗಳದಲ್ಲಿ ತುಂಬಿದ್ದ ನೀರು ತೆಗೆಸಿದರು ಎನ್ನುತ್ತಾರೆ ನೇತ್ರಾವತಿ ಅವರು.


ಚರಂಡಿಯೇ ಕುಸಿಯುವ ಆತಂಕ 
ಇದೇ ಭಾಗದಲ್ಲಿ ಮುಂದಕ್ಕೆ ಚರಂಡಿಯೇ ಕುಸಿಯುವ ಸಾಧ್ಯತೆ ದಟ್ಟ ವಾಗಿವೆ. ಕಲ್ಲುಗಳು ಶಿಥಿಲಗೊಂಡಿದ್ದು, ಮಳೆಗಾಲ ದಲ್ಲಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ. ಮುಂದಕ್ಕೆ ಸಾಗಿದಾಗ ಚರಂಡಿಯೇ ನಾಪತ್ತೆಯಾಗಿದೆ. ಕೆಲವೆಡೆ ಚರಂಡಿ ಭಾಗ ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ. ಶುಕ್ರವಾರದ ಮಳೆಗೆ ನೀರು ನಿಂತು ತೊಂದರೆಯಾಗಿದೆ ಎಂದು ಪುರಸಭೆ ಯವರು ಒಂದಷ್ಟು ಕಡೆ ಚರಂಡಿಯನ್ನು ಸ್ವತ್ಛಗೊಳಿಸಿ ನೀರು ಹರಿಯಲು ಅನುವು ಮಾಡಿದ್ದರು. ಆದರೆ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.
  
ತೋಡಿಗೆ ನೀರು 
ಬರೆಕಟ್ಟೆ ವಾರ್ಡ್‌ನಲ್ಲಿ ಚರಂಡಿ ಸಮಸ್ಯೆಯಿಂದ ಪಾದಚಾರಿ ಮಾರ್ಗ ಜಲಾವೃತವಾಗಿದೆ. ಅಲ್ಲಿನ ತೋಡಿಗೆ ನಗರದ ಪ್ರಮುಖ ಕಡೆಗಳ ಚರಂಡಿ ನೀರು ಬಂದು ಸೇರುತ್ತದೆ. ಪಾರಿಜಾತ ಸರ್ಕಲ್‌ನಿಂದ, ಚಿನ್ಮಯ ಆಸ್ಪತ್ರೆ ಕಡೆಯಿಂದ, ಪೂರ್ಣಿಮಾ ಟಾಕೀಸ್‌ ಕಡೆಯಿಂದ ಬರುವ ನೀರೆಲ್ಲ ಇದರ ಮೂಲಕವೇ ಸಾಗುತ್ತದೆ. ಇದಕ್ಕೆ ಕಾಯಕಲ್ಪ, ಚರಂಡಿ ನೀರು ಸೇರದಂತೆ ತಡೆ ಇತ್ಯಾದಿಗಳು ಆಗಿಲ್ಲ. 

ತುರ್ತು ಆದ್ಯತೆ  ಮೇರೆಗೆ ಅನುದಾನ 
ಒಂದು ತಿಂಗಳಲ್ಲಿ ಅನುದಾನ  ಚರಂಡಿ ಕಾಮಗಾರಿಗೆ ಮುಂದಿನ ಸಭೆಯಲ್ಲಿ ತುರ್ತು ಆದ್ಯತೆ ಮೇರೆಗೆ ಅನುದಾನ ನೀಡಲು  ಆಗ್ರಹಿಸುತ್ತೇನೆ.    
– ಗೀತಾ, ಪುರಸಭಾ ಸದಸ್ಯೆ

ತಡೆಗೋಡೆ ಅಗತ್ಯ
ಪ್ರತಿವರ್ಷ ಚರಂಡಿಯ ಹೂಳೆತ್ತಿದರೆ ನೀರು ಹರಿಯುತ್ತದೆ. ಕಲ್ಲು ಕುಸಿಯುತ್ತಿದ್ದು ಚರಂಡಿಗೆ ತಡೆಗೋಡೆ ಅತಿ ಅನಿವಾರ್ಯವಾಗಿದೆ. ಮಳೆ ಬಂದಅನಂತರ ಕೆಲಸ ಮಾಡುವುದಲ್ಲ, ಮೊದಲೇ ಮಾಡಬೇಕಿತ್ತು. 
– ರಕ್ಷಿತ್‌, ಸ್ಥಳೀಯ ನಿವಾಸಿ 

– ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next