Advertisement

ಸುಗ್ರೀವಾಜ್ಞೆ ತರವಲ್ಲ; ಸದ್ದು ಗದ್ದಲಕ್ಕೆ ಒಲವಿಲ್ಲ:ಪ್ರಣವ್‌ ಮುಖರ್ಜಿ

07:25 AM Jul 24, 2017 | Harsha Rao |

ಹೊಸದಿಲ್ಲಿ: “ಕಾನೂನು ತರಲು ಅಧ್ಯಾದೇಶದ ಮೊರೆ ಹೋಗುವುದನ್ನು ನಿಲ್ಲಿಸಿ. ಅನಿವಾರ್ಯ ಪರಿಸ್ಥಿತಿಯಿದ್ದಾಗ ಮಾತ್ರವೇ ಈ ದಾರಿಯನ್ನು ಅನುಸರಿಸಿ’ ! ತನ್ನ ಅಧಿಕಾರಾವಧಿಯಲ್ಲಿ ಹಲವು “ಅಧ್ಯಾದೇಶ’ಗಳ ಕಡತಗಳಿಗೆ ಸಾಕ್ಷಿಯಾಗಿರುವ ನಿರ್ಗಮಿಸುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ 
ನೀಡಿದ ಸಲಹೆಯಿದು.

Advertisement

ರವಿವಾರ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಹೃದಯಸ್ಪರ್ಶಿ ಬೀಳ್ಕೊಡುಗೆ ವೇಳೆ ಮಾತನಾಡಿದ ಪ್ರಣವ್‌, “ಭಾರತದ ಸಂವಿಧಾನ ಕೋಟ್ಯಂತರ ಮಂದಿಯ ಭರವಸೆ ಮತ್ತು ಆಕಾಂಕ್ಷೆಯಾಗಿದೆ. ಅದನ್ನು ರಕ್ಷಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ’ ಎಂದರು. “ಸಂವಿಧಾನವನ್ನು ಎತ್ತಿ ಹಿಡಿವ ಕೆಲಸ ಮಾಡಬೇಕು. ಪ್ರತಿ ಶಾಸನ ಮಂಡನೆಗೂ ಮೊದಲು ಸೂಕ್ತ ರೀತಿಯಲ್ಲಿ ಅದರ ಕುರಿತು ಚರ್ಚೆ ಯಾಗಬೇಕು. ಒಂದು ವೇಳೆ ನಾವು ಇದರಲ್ಲಿ ವಿಫ‌ಲವಾದದ್ದೇ ಆದಲ್ಲಿ ದೇಶದ ನಂಬಿಕೆ ಕಳೆದುಕೊಂಡಂತೆ’ ಎಂದು ಎಚ್ಚರಿಸಿದರು.

ಇದೇ ವೇಳೆ ವಿಪಕ್ಷಗಳಿಗೂ ಕಿವಿಮಾತು ಹೇಳಿದ ಅವರು, ಸಂಸತ್‌ ಕಲಾಪಕ್ಕೆ ಆಗಾಗ್ಗೆ ತಡೆ ಉಂಟು ಮಾಡಬಾರದು. ಕಲಾಪಕ್ಕೆ ಅಡ್ಡಿಯಾದರೆ, ದೇಶದ ಜನರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ಆಗಬೇಕಾದ ಸಮಯವನ್ನು ಕಿತ್ತುಕೊಂಡಂತೆ. ಇದರಿಂದ ವಿಪಕ್ಷಗಳಿಗೇ ಹೆಚ್ಚು ಹಾನಿ ಎಂದು ಎಚ್ಚರಿಸಿದರು. ಸಮಾಜದಲ್ಲಿ ಇತ್ತೀಚೆಗೆ ಹಿಂಸಾಚಾರಗಳು ಹೆಚ್ಚಾಗುತ್ತಿರುವುದನ್ನೂ ಪ್ರಸ್ತಾವಿಸಿದ ಅವರು, “ಬಹುತ್ವ ಮತ್ತು ವೈವಿಧ್ಯತೆ ನಮ್ಮ ದೇಶದ ಬಹುದೊಡ್ಡ ಶಕ್ತಿಯಾಗಿದೆ’ ಎಂದು ಹೇಳಿದರು.

ಇಂದಿರಾ, ಮೋದಿ, ಸೋನಿಯಾಗೆ ಅಭಿನಂದನೆ
ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಪ್ರಣವ್‌ ಮರೆಯಲಿಲ್ಲ. ತಮ್ಮ ಮುಂದೆಯೇ ಆಸೀನರಾಗಿದ್ದ ಪ್ರಧಾನಿ ಮೋದಿ ಅವರನ್ನು ತೋರಿಸುತ್ತಾ, “ದೇಶವೀಗ ಬದಲಾವಣೆಯ ಕಾಲಘಟ್ಟದಲ್ಲಿದೆ. ಜಿಎಸ್‌ಟಿ ಮಂಡನೆ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿನ ಸಹಕಾರವನ್ನು, ಭಾರತೀಯ ಸಂಸತ್ತಿನ ಪಕ್ವತೆಯನ್ನು ತೋರಿಸುತ್ತದೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಅತೀ ದೊಡ್ಡ ಬದಲಾವಣೆ ತರಲು ಹೊರಟಿದ್ದಾರೆ. ಅವರು ನನ್ನ ಪ್ರತಿ ಹೆಜ್ಜೆಯಲ್ಲೂ ನೀಡಿದ ಸಹಕಾರ ಮತ್ತು ಸಲಹೆಯಿಂದ ನನಗೆ ಬಹಳ ಅನುಕೂಲವಾಗಿದೆ. ಅವರ ಪ್ರೀತಿ ಮತ್ತು ಸೌಜನ್ಯದ ವರ್ತನೆಯ ನೆನಪು ಸದಾಕಾಲ ನನ್ನೊಂದಿಗಿರುತ್ತದೆ’ ಎಂದು ಹೇಳಿದರು. ಜತೆಗೆ ತಾವು ರಾಜಕೀಯದಲ್ಲಿ ಮಿಂಚಲು ಕಾರಣರಾದ ಇಂದಿರಾ ಗಾಂಧಿಯವರನ್ನು ತಮ್ಮ “ಆದಿಗುರು, ಮಾರ್ಗದರ್ಶಕಿ’ ಎಂದು ಬಣ್ಣಿಸಿದರು. ಬಿಜೆಪಿ ನಾಯಕ ಎಲ್‌.ಕೆ. ಆಡ್ವಾಣಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೂ ಪ್ರಣವ್‌ ತಮ್ಮ ಭಾಷಣದಲ್ಲಿ ನೆನಪಿಸಿಕೊಂಡು ಶ್ಲಾ  ಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಸ್ಪೀಕರ್‌ ಸುಮಿತ್ರಾ ಮಹಾಜನ್‌, ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನ ಎರಡೂ ಸದನದ ಸದಸ್ಯರು, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎಚ್‌.ಡಿ. ದೇವೇಗೌಡ ಸಹಿತ ಗಣ್ಯರು ಉಪಸ್ಥಿತರಿದ್ದರು.

Advertisement

ಅಧ್ಯಾದೇಶ ವಿಚಾರ ಏಕೆ ಮಹತ್ವದ್ದು?
ಪ್ರಧಾನಿ ಮೋದಿ ನೇತೃತ್ವದ ಸರಕಾರವು ಕಳೆದ 3 ವರ್ಷಗಳಲ್ಲಿ 1968ರ ಶತ್ರು ಆಸ್ತಿ ತಿದ್ದುಪಡಿ ಕಾಯ್ದೆಯ ಅಧ್ಯಾದೇಶಕ್ಕೆ ಅಂಕಿತ ಪಡೆಯಲು ನಿರಂತರ ಯತ್ನಿಸುತ್ತಿದ್ದರೂ ಅದಕ್ಕೆ ಪ್ರಣವ್‌ ಅವರು ಅಂಕಿತ ಹಾಕಿಲ್ಲ. ಮಾರ್ಚ್‌ನಲ್ಲಿ ಈ ಮಸೂದೆಯು ಸಂಸತ್‌ನಲ್ಲಿ ಅಂಗೀಕಾರಗೊಂಡಿದೆ. ಸರಕಾರವು 5 ಬಾರಿ ಈ ಕುರಿತು ಅಧ್ಯಾದೇಶ ತಂದಿತ್ತು. ಕೇಂದ್ರದ ಹಿರಿಯ ಸಚಿವರೇ ಸ್ವತಃ ಪ್ರಣವ್‌ರನ್ನು ಭೇಟಿಯಾಗಿ ಅಂಕಿತ ಹಾಕುವಂತೆ ಮನವೊಲಿಸಲು ಯತ್ನಿಸಿದ್ದರೂ ಪ್ರಣವ್‌ ಒಪ್ಪಿಲ್ಲ. ಈ ವಿಚಾರವನ್ನೇ ಮುಂದಿಟ್ಟುಕೊಂಡು ರವಿವಾರ ಪ್ರಣವ್‌ ಅವರು ಅಧ್ಯಾದೇಶ ವಿಚಾರದಲ್ಲಿ  ಸರಕಾರಕ್ಕೆ ಬುದ್ಧಿಮಾತು ಹೇಳಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next