Advertisement
ಇತ್ತ ಇಡೀ ದೇಶ ದೇಹಪ್ರೇಮಕ್ಕೆ ಮೀಸಲಾದ ಪ್ರೇಮಿಗಳ ದಿನಾಚರಣೆ ಸಂಭ್ರಮದ ಮತ್ತಿನಲ್ಲಿ ಮಿಂದೇಳುತ್ತಿದ್ದರೆ ಅತ್ತ ದೇಶ ಪ್ರೇಮಕ್ಕೆ ಮೀಸಲಾದ ಸಾಧನೆಗೈಯಲು ಹೊರಟ ಭಾರತೀಯ ಯೋಧರಲ್ಲಿ 42 ಮಂದಿಯ ದೇಹವೇ ಸ್ಫೋಟಗೊಂಡು ಅವರು ಭಾರತಾಂಬೆಯ ಪದತಲಕ್ಕೆ ರಕ್ತ ತರ್ಪಣ ನೀಡಿ ಅಸುನೀಗಿದರು. ನೂರೊಂದು ಕನಸುಗಳ ಬುತ್ತಿ ಕಟ್ಟಿ ಅದನ್ನು ಮನೆಮಂದಿ ಬಂಧುಗಳೊಡನೆ ಹಂಚಿ ಸವಿಯುಣ್ಣುತ್ತಾ ರಜೆಯನ್ನು ಕಳೆದು ಮರಳಿ ದೇಶ ಸೇವೆಯ ಕರೆಗೆ ಓಗೊಟ್ಟು ತೆರಳುತ್ತಿದ್ದ ಇವರು ಕಾಲನ ಕರೆಗೇ ಓಗೊಡಬೇಕಾಗಿ ಬಂತು. ದೇಶಕ್ಕಾಗಿ ಪರಮಾತ್ಮ ಪಾದ ಸೇರಿ ಮಹಾತ್ಮರ ಪದವನ್ನಲಂಕರಿಸಿದ ಹುತಾತ್ಮರಿಗೆ ಹೃತೂ³ರ್ವಕ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಈ ದುರ್ಘಟನೆಯನ್ನು ಒಂದು ವಿಪರ್ಯಾಸ ಎನ್ನುವುದಕ್ಕಿಂತ ಈ ದೇಶದ ದೌರ್ಬಲ್ಯದಿಂದಾದ ಎಡವಟ್ಟು ಎನ್ನಬಹುದು.
Related Articles
Advertisement
ಇಂದು ಕರ್ತವ್ಯನಿಷ್ಠೆ , ಪ್ರಾಮಾಣಿಕತೆ ಮತ್ತು ನೆಲದ ಋಣ ತೀರಿಸುವ ಹಂಬಲವನ್ನು ಕೃಷಿ ಮಾಡುವ ರೈತರಲ್ಲಿ ಮತ್ತು ಪಹರೆ ಕಾಯುವ ಸೈನಿಕರಲ್ಲಿ ಮಾತ್ರ ಕಾಣಬಹುದು. ಭಾರತದಲ್ಲಿ ಈ ಎರಡು ವರ್ಗಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಫೆ.14ರ ಉಗ್ರರ ದಾಳಿಯಲ್ಲಿ ಮಡಿದ ಯೋಧರ ಮನೆಯ ಪರಿಸ್ಥಿತಿಯನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡುವಾಗ ಬಹಳ ಖೇದವೆನಿಸಿತು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯ ಮೇಲೆ ಜುಗುಪ್ಸೆಯೂ ಮೂಡಿತು. ಮಂಡ್ಯದ ಹುತಾತ್ಮ ಯೋಧ ಗುರು ಅವರಿಗೆ ಸ್ಮಾರಕ ಕಟ್ಟಲು ಆ ತಾಲೂಕಿನಲ್ಲಿ ಎಲ್ಲೂ ಸರಕಾರಿ ಜಾಗವಿಲ್ಲ ಎಂಬ ತಾಲೂಕು ತಹಶೀಲ್ದಾರರ ಹೇಳಿಕೆ ಹಾಸ್ಯಾಸ್ಪದವೆನಿಸಿತು. ಸೈನಿಕರು ದೇಶ ಹಿತ ರಕ್ಷಣೆ ಮಾಡುವ ಘನವೆತ್ತ ಹೊಣೆ ಹೊತ್ತು ಅದನ್ನು ಕಾಯಾ ವಾಚಾ ಮನಸಾ ಮಾಡುತ್ತಿದ್ದರೂ ಅವರಿಗೆ ಸಿಗುವ ಪ್ರತಿಫಲ ಅತ್ಯಲ್ಪ. ಕರ್ತವ್ಯದ ಸಂದರ್ಭದಲ್ಲಿ ಅಧಿಕಾರಿಗಳಿಂದ ಅಥವಾ ಸರಕಾರದಿಂದ ಆಗುವ ಕಿರುಕುಳವನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳುವಂತೆಯೂ ಇಲ್ಲ.
ಅವರು ಸೇವೆಯಲ್ಲಿರುವಾಗ ನಿಧನರಾದರೆ ಮಾತ್ರ ಮಂತ್ರಿ ಮಹೋದಯರು, ಅಧಿಕಾರಿ ವರ್ಗದವರು ಗೌರವ ತೋರ್ಪಡಿಸುತ್ತಾರೆ. ಅವರನ್ನು ಆಶ್ರಯಿಸಿದ್ದವರಿಗೆ ಸವಲತ್ತು ಮತ್ತು ಪರಿಹಾರ ಧನ ಘೋಷಿಸುತ್ತಾರೆ. ಆದರೆ ಇದೊಂದು ತೋರಿಕೆಯ ನಟನೆ ಮಾತ್ರ. ಆ ಸಂತ್ರಸ್ತರು ಘೋಷಿತ ಪರಿಹಾರ ಸವಲತ್ತುಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕಾಗುತ್ತದೆ. 2016ರಲ್ಲಿ ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ದುರ್ಮರಣವನ್ನಪ್ಪಿದ ಹುಬ್ಬಳ್ಳಿಯ ಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಪೂರ್ತಿಯಾಗಿ ಇನ್ನೂ ಸಿಕ್ಕಿಲ್ಲ. ಸಂಸದರು, ಶಾಸಕರು ಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕರ್ಮಕಾಂಡಗಳ ಬಗ್ಗೆ ಕಚ್ಚಾಡುವ ವಿಧಾನ ಮಂಡಲ ಅಧಿವೇಶನಕ್ಕೆ ಜನ ಕಟ್ಟಿದ ತೆರಿಗೆಯ ಕೋಟಿಗಟ್ಟಲೆ ಹಣವನ್ನು ಸರಕಾರ ಖರ್ಚು ಮಾಡುತ್ತದೆ. ಆದರೆ ದೇಶ ಕಾಯುವ ಓರ್ವ ಸಿಪಾಯಿಗೆ ನ್ಯಾಯಯುತವಾದ ಪರಿಹಾರ ನೀಡಲು ಅದಕ್ಕೆ ತಾಕತ್ತಿಲ್ಲದಿರುವುದು ಈ ದೇಶದ ವಿಪರ್ಯಾಸ. ಜನಪ್ರತಿನಿಧಿಗಳು ವಿಧಾನ ಮಂಡಲ ಅಧಿವೇಶನಗಳಲ್ಲಿ ಸೈನಿಕರಿಗೆ ಒದಗಿಸಿದ ವಿಮಾನ, ಶಸ್ತ್ರಾಸ್ತ್ರವೇ ಅಲ್ಲದೆ ಶವಪೆಟ್ಟಿಗೆಯಲ್ಲೂ ನಡೆಸಿದ ಹಗರಣಗಳ ಬಗ್ಗೆ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತಾರೆ. ಸೈನಿಕರ ಸ್ಥಿತಿಗತಿಯನ್ನು ಉತ್ತಮ ಪಡಿಸುವ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಹಿಮದ ಹೆಬ್ಬಂಡೆಗಳ ನಡುವೆ ಕನಿಷ್ಟ ಡಿಗ್ರಿ ಉಷ್ಣತೆಯ ಸಿಯಾಚಿನ್‌ನಂತಹ ಪ್ರದೇಶದಲ್ಲಿ ಮೈಯಲ್ಲಾ ಕಣ್ಣಾಗಿ ಗಡಿ ಕಾವಲು ಕಾಯುವ ಯೋಧರ ಸುಖ ದುಃಖವನ್ನು ಹವಾನಿಯಂತ್ರಿತ ಕೋಣೆಯೊಳಗೆ ಕುಳಿತ ಜನಪ್ರತಿನಿಧಿಗಳು ಅರ್ಥೈಸಲಾರರು. ದೇಶಕ್ಕಾಗಿ ದುಡಿಯುತ್ತಿರುವಾಗ ಯಾರೂ ಸೈನಿಕರಿಗೆ ಸಲ್ಯೂಟ್ ಹೊಡೆಯುವುದಿಲ್ಲ. ಮಡಿಯುವಾಗ ಸಲ್ಯೂಟ್ ಹೊಡೆದು ಕಣ್ಣೀರು ಸುರಿಸುವ ನಟನೆ ಮಾಡುತ್ತಾರೆ ಅಷ್ಟೆ . ಇದು ಈ ದೇಶದ ಸೈನಿಕರ ದುರಂತ ಕತೆ.
ಕಾಶ್ಮೀರದ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಧಾರ್ಮಿಕ ಮೂಲಭೂತವಾದದೊಂದಿಗೆ ರಾಜಕೀಯವನ್ನು ಕಲಸುಮೇಲೋ ಗರಗೊಳಿಸಿ ಈ ರಾಜ್ಯದ ಜನತೆಯನ್ನು ಗುರಾಣಿಯಂತೆ ಬಳಸಿ ಕೊಂಡು ಪಾಕಿಸ್ತಾನ ಇಲ್ಲಿ ಉಗ್ರವಾದದ ವಿಷಬೀಜವನ್ನು ಬಿತ್ತುತ್ತಿದೆ. ಇದನ್ನು ಹತ್ತಿಕ್ಕಲು ಭಾರತೀಯ ಪ್ರಜೆಯೆನಿಸಿದ ಪ್ರತಿಯೊಬ್ಬರೂ ಹಾಳು ರಾಜಕೀಯವನ್ನು ಬದಿಗಿಟ್ಟು ನಿಸ್ವಾರ್ಥ ಮನೋಭಾವ ದಿಂದ, ಸಮಚಿತ್ತದಿಂದ ಪ್ರಯತ್ನಿಸಬೇಕಿದೆ. ಯಾವನೇ ಭಾರತೀಯ ಯೋಧನಿಗೆ ಉಗ್ರರ ದಾಳಿಯನ್ನು ಎದುರಿಸುವ ಪರಿಸ್ಥಿತಿ ಮುಂದೆಂದೂ ಬರಬಾರದು. ಅಂಥದ್ದೊಂದು ಬದಲಾವಣೆಗೆ ಅವಂತಿಪೋರಾ ಉಗ್ರ ದಾಳಿ ಕಾರಣವಾಗಲಿ; ಬದಲಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರತಂತ್ರವಾಗದಿರಲಿ ಎಂಬುದು ಭಾರತೀಯರೆಲ್ಲರ ಹಾರೈಕೆ.
ಭಾಸ್ಕರ ಕೆ. ಕುಂಟಪದವು