Advertisement

ಸಕಲಕ್ಕೂ ಸಕಾಲ ಮದ್ದಲ್ಲ, ನಾವು ಸಕಾಲದ ಜನಕರಲ್ಲ!

12:10 PM Aug 07, 2017 | |

ಗ್ರಾಹಕ ಹಕ್ಕುಗಳ ಬಗ್ಗೆ ಮುಖ್ಯವಾಗಿ ಇತರೆ ದೇಶಗಳಲ್ಲಿ ಇರುವ ಜಾಗೃತಿಯ ಗುಣಮಟ್ಟ ಜಾಗತೀಕರಣದ ನೆಪದಲ್ಲಿ ಭಾರತದಲ್ಲೂ ನುಸುಳಿತು ಎಂಬುದು ಉತ್ಪ್ರೇಕ್ಷೆಗಳಿಲ್ಲದ ಸತ್ಯ. ಜನ ದೇಶಿ ಕಂಪನಿಗಳು ಬೇರೆ ದೇಶದಲ್ಲಿ ಅಳವಡಿಸಿಕೊಂಡಿರುವ ನೀತಿ ನಿಯಮಗಳನ್ನು ಗಮನಿಸಿದರು. ಭಾರತದಲ್ಲೂ ಜಾರಿಗೆ ಆಗ್ರಹಿಸಿದರು. ಒತ್ತಾಯವೂ ಬಂತು, ಕೆಲ ಮಟ್ಟಿನ ಜಾರಿ ಸಾಧ್ಯವಾಯಿತು.

Advertisement

ಈ ನಿಟ್ಟಿನಲ್ಲಿ ಮೊದಲು ಬಂದಿದ್ದು ನಾಗರಿಕ ಸನದು. ನಾಗರಿಕ ಸನದು ಹಲವು ಇಲಾಖೆಗಳಿಂದ ಜಾರಿಗೆ ಬಂದಾಗ ಗ್ರಾಹಕ ವಲಯದಲ್ಲಿ ಒಂದು ಖುಷಿಯ ವಾತಾವರಣ ಮೂಡಿದ್ದು ಸುಳ್ಳಲ್ಲ. ಕಂಪನಿಗಳು, ಇಲಾಖೆಗಳು ತಾವು ತಾವಾಗಿಯೇ ಬಳಕೆದಾರರಿಗೆ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಮುಂದಾದಾಗ ಅವು ತಮ್ಮ ಮಾತನ್ನೇ ಕೈಬಿಡುವುದಿಲ್ಲ, ನಡೆಸುತ್ತವೆ ಎಂಬ ಹುಂಬ ವಿಶ್ವಾಸವನ್ನು ಭಾವಿಸಿಕೊಂಡುಬಿಟ್ಟೆವು. ಇಂದು ಒಂದೆಡೆ ದೇಶದ ಬಹುಸಂಖ್ಯಾತರಿಗೆ ನಾಗರಿಕ ಸನದಿನ ವ್ಯಾಖ್ಯಾನವೇ ಗೊತ್ತಿಲ್ಲ. ಕಂಪನಿ, ಇಲಾಖೆಗಳಿಗೆ ತಾವು ಭರವಸೆ ಇತ್ತ ಸವಲತ್ತುಗಳ ಕುರಿತು ವ್ಯವಸ್ಥೆಗಳಿಗೆ ನೆನಪೇ ಇಲ್ಲ.

ಅವತ್ತು ಇಲಾಖೆಗಳು ಅರ್ಜಿದಾರ ಕೋರಿದ ದಾಖಲೆಗಳನ್ನು ಇಂತಿಷ್ಟು ದಿನದಲ್ಲಿ ಕೊಡುತ್ತೇವೆ ಎಂದು ಹೇಳಿಕೊಳ್ಳುವ ಮಾತು ನಾಗರಿಕ ಸನದಿನಲ್ಲಿ ಬಂದಿತ್ತು. ಗರಿಷ್ಠ ದಿನಗಳನ್ನು ಸನದು ಸೂಚಿಸಿದ್ದರೆ ಕೊನೆಗೆ ಆ ದಿನಸೂಚಿ ದಾಖಲೆ ಒದಗಿಸಲು ಇಲಾಖೆಗಿರುವ ಸಮಯಾವಕಾಶ ಎನ್ನಿಸಿಬಿಟ್ಟಿತು. ಪೆಟ್ರೋಲ್‌ ಬಂಕ್‌ ಒಂದರಲ್ಲಿ ಉಚಿತವಾಗಿ ಗಾಳಿ ಹಾಕಿಕೊಡಬೇಕು, ಉಚಿತ ಶೌಚಾಲಯ, ಕುಡಿಯುವ ನೀರು ಒದಗಿಸಬೇಕು ಎಂದು ತಯಾರಕ ಕಂಪನಿಯೇ ಸುಮೋಟೋ ಆಗಿ ತನ್ನ ನಾಗರಿಕ ಸನದಿನಲ್ಲಿ ಹೇಳಿದೆ. ಈ ಸೌಲಭ್ಯ ಎಷ್ಟು ಬಂಕ್‌ಗಳಲ್ಲಿ ಜಾರಿಯಲ್ಲಿದೆ ಹೇಳಿ?

ಮಾಹಿತಿ ಹಕ್ಕು ಕೊಲೆ, ಸಕಾಲಕ್ಕೂ ಚೂರಿ!
ಒಂದರ್ಥದಲ್ಲಿ ವ್ಯವಸ್ಥೆಯನ್ನು ನಿರ್ವಹಿಸುವವರು ಹೊಸತಕ್ಕೆ ತೆರೆದುಕೊಳ್ಳದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಬಹುಶಃ ಮಾಹಿತಿ ಹಕ್ಕು ಕಾಯ್ದೆ ದೇಶದ ಭ್ರಷ್ಟತೆಗೆ ಪ್ರಭಾವಯುತ ಚುಚ್ಚುಮದ್ದು ಕೊಡಬಹುದಾಗಿದ್ದ ಅಸ್ತ್ರ. ಬ್ಲಾಕ್‌ಮೇಲ್ ರ್‌ಗಳ ಕೈಗೆ ಸಿಕ್ಕಿದೆ ಎಂಬ ಆರೋಪ  ಭಾಗಶಃ ಸತ್ಯ. ಅಧಿಕಾರಿಗಳು ಪ್ರಾಮಾಣಿಕ ಆಡಳಿತ ನಡೆಸಿದ್ದಲ್ಲಿ ಬ್ಲಾಕ್‌ಮೇಲ್ ರ್‌ಗಳಿಗೆ ಭಯ ಪಡಯಬೇಕಿಲ್ಲ. ಅದಕ್ಕಿಂತ ಮುಖ್ಯವಾಗಿ, ಮಾಹಿತಿ ನಿರಾಕರಿಸಲು ಅಧಿಕಾರಿಗಳು ಸಾವಿರ ತಂತ್ರ ಕಂಡುಕೊಂಡಿರುವುದು ಮತ್ತು ಮಾಹಿತಿ ಕೊಡದ ಪ್ರಸಂಗಗಳಲ್ಲಿ ದಂಡ, ಶಿಕ್ಷೆ ಅವಕಾಶಗಳನ್ನು ಜಾರಿಗೊಳಿಸಲು ಪ್ರಥಮ ಮೇಲ್ಮನವಿ ಪ್ರಾಧಿಕಾರ ಹಾಗೂ ಮಾಹಿತಿ ಆಯೋಗ ನಿರಾಸಕ್ತವಾಗಿರುವುದು ಮಾಹಿತಿ ಹಕ್ಕನ್ನು ಕೊಂದಿದೆ.

ಇದೇ ಸಾಲಿನಲ್ಲಿ ರಾಜ್ಯ ಸರ್ಕಾರದ “ಸಕಾಲ’ ಅಪರೂಪದ ಮಾದರಿ ಎನ್ನಿಸಬೇಕಿತ್ತು. ಭ್ರಷ್ಟಾಚಾರ ತನ್ನ ಗರಿಷ್ಠ ಪರಾಕ್ರಮವನ್ನು ತೋರಿಸುತ್ತಿರುವ ಈ ದಿನಗಳಲ್ಲಿ ಕರ್ನಾಟಕ ಸರ್ಕಾರದ “ಸೇವಾ ಹಕ್ಕು ನಿಯಮ 2011′ ಸಾಮಾನ್ಯರ ಪಾಲಿಗೆ ನೆಮ್ಮದಿಯ ಸಂಜೀನಿಯಾಗಬಲ್ಲದು ಎಂದು ವರ್ಣಿಸಲಾಗಿತ್ತು. ಇಂದು 61 ಇಲಾಖೆಗಳ 731 ಸರ್ಕಾರಿ ಸೇವೆಗಳು ಸಕಾಲದ ವ್ಯಾಪ್ತಿಗೆ ಬರುತ್ತವೆ. ಅಂದರೆ ಇಷ್ಟು ಪ್ರಮಾಣದ ಸೇವೆ ಪಡೆಯಲು ಜನ ಅಧಿಕಾರಿಗಳ ವಿಳಂಬ, ಲಂಚ ಬೇಡಿಕೆಯನ್ನು ಧಿಕ್ಕರಿಸಬಹುದು ಎಂದು ಭಾವಿಸಬೇಕಿತ್ತು. ಆದರೆ ಆಗಿದ್ದೇ ಬೇರೆ.

Advertisement

ಸೇವಾ ಹಕ್ಕು ನಿಯಮವನ್ನು ಸರಳವಾಗಿ ವಿವರಿಸುವುದಾದರೆ, ಸರ್ಕಾರ ನಾಗರಿಕ ಕೋರುವ ಎಲ್ಲ ದಾಖಲೆಗಳನ್ನು ಒದಗಿಸಲು ಗರಿಷ್ಠ ಸಮಯವನ್ನು ನಿಗದಿಪಡಿಸುತ್ತದೆ. ಒಂದೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಈ ಲಕ್ಷ್ಮಣರೇಖೆಯೊಳಗೆ ಕೋರಿಕೆಯ ದಾಖಲೆ ಒದಗಿಸದಿದ್ದರೆ ಆಗ ಸಾರ್ವಜನಿಕರಿಗೆ ಅಧಿಕಾರಿಗಳಿಂದಲೇ ದಂಡ ಪರಿಹಾರ ಪಡೆಯುವ ಅವಕಾಶವನ್ನು ಕಾಯ್ದೆಯ ಮೂಲಕ ನೀಡಲಾಗುತ್ತದೆ. 

ಬೇರೆ ರಾಜ್ಯಗಳಲ್ಲೂ ಇದೆ ಸಕಾಲ!
ಹಾಗೆ ನೋಡಿದರೆ ಇದು ರಾಜ್ಯ ಸರ್ಕಾರದ ಏಕಮೇವಾದ್ವಿತೀಯ ಕ್ರಾಂತಿಕಾರಕ ಕ್ರಮ ಎನ್ನುವಂತೇನೂ ಇಲ್ಲ. ಈಗಾಗಲೇ ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್‌, ಕೇರಳ, ದೆಹಲಿ, ಜಾರ್ಖಂಡ್‌, ಹರಿಯಾಣ, ಒಡಿಶಾ, ಮಾಚಲ ಪ್ರದೇಶ ರಾಜ್ಯಗಳಲ್ಲಿ ಒಂದೋ ಈ ಕಾಯ್ದೆ ಜಾರಿಗೊಂಡಿದೆ ಅಥವಾ ಜಾರಿಯ ಕೊನೆಯ ಹಂತದ ಪ್ರಕ್ರಿಯೆ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ 2010ರ ಆಗಸ್ಟ್‌ನಲ್ಲಿಯೇ ಈ ಕಾಯ್ದೆ ಜಾರಿಗೆ ಬಂದಿದೆ. ಬಿಹಾರದಲ್ಲಿ ರೈಟ್‌ ಟು ಸರ್ವೀಸ್‌ ಕಾಯ್ದೆ 2011ರಲ್ಲಿ ಜಾರಿಗೊಂಡಿದೆ. ಅಲ್ಲಿ 30 ಸೇವೆಗಳು ಹಾಗೂ 10 ಇಲಾಖೆಗಳು ಈ ಕಾಯ್ದೆಯ ಕಣ್ಗಾವಲಿನೊಳಗೆ ಬರುತ್ತವೆ. ಸಂಪೂರ್ಣ ಕಂಪ್ಯೂಟರ್‌ ಸಾಫ್ಟ್ವೇರ್‌ ನೆರವು ಪಡೆದು ರೂಪಿಸಿರುವ “ಅಧಿಕಾರ್‌’ ಹಾಗೂ “ಸಮಾಧಾನ್‌’ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಸದರಿ ಕಾಯ್ದೆಯ ಜಾರಿಗೆ ಪೂರಕವಾಗಬಹುದು. ಲಭ್ಯ ಮಾಹಿತಿಯ ಪ್ರಕಾರ, ಅಲ್ಲೂ ಮೊದಲ ತಿಂಗಳು ಸ್ವೀಕರಿಸಲಾದ 15,74,989 ಅರ್ಜಿಗಳಲ್ಲಿ 8,63,373 ವಿಲೇವಾರಿಯಾಗಿವೆ. ವಾಸ್ತವವಾಗಿ ಇತ್ಯರ್ಥವಾದ ಅರ್ಜಿಗಳದ್ದು ತಕರಾರೇ ಇರುವುದಿಲ್ಲ. ಫೈಲ್‌ನಿಂದ ಮುಂದೆ ಸಾಗದ ಅರ್ಜಿಗಳ ವಿಚಾರದಲ್ಲಿಯೇ ಈ ಕಾಯ್ದೆ ಸಹಾಯ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸ್ಪಷ್ಟ ಫ‌ಲಿತಾಂಶವನ್ನು ಬಿಹಾರದ ಮಟ್ಟಿಗೆ ಹೇಳುವುದು ತಪ್ಪಾದೀತು.

ಕೇರಳ ಸರ್ಕಾರ ಕೂಡ “ಸೇವಾ ಖಾತರಿ ಕಾಯ್ದೆ 2011’ನ್ನು ಜಾರಿಗೆ ತಂದಿದೆ. ನಿಗದಿತ ಅವಧಿಯ ನಂತರವೂ ಬಯಸಿದ ಸೇವೆ ಸಿಗದಿದ್ದರೆ ಅಥವಾ ಕೊಟ್ಟ ಸೇವೆ ತೃಪ್ತಿದಾಯಕವಾಗಿರದಿದ್ದರೆ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಇದೇ ರೀತಿ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಮೊರೆ ಹೋದಾಗ ಸೇವೆಯಲ್ಲಿ ದೋಷ ಕಂಡುಬಂದರೆ 250 ರೂ.ಗೆ ಕಡಿಮೆ ಇಲ್ಲದಂತೆ, 25 ಸಾವಿರ ರೂ.ಗೆ ಕಡಿಮೆ ಇಲ್ಲದಂತೆ ದಂಡ ವಿಧಿಸಬಹುದು.  ಈ ದಂಡ ಅಧಿಕಾರಿಯ ವೇತನದಿಂದ ಕಡಿತಗೊಳ್ಳುತ್ತದೆ ಎಂಬುದು ನಾಣ್ಯದ ಒಂದು ಪಾರ್ಶ್ವವಾದರೆ, ದಾಖಲೆ ಪಡೆಯಬೇಕಾದವನು ಆಶಿಸಿದ ದಾಖಲೆಯನ್ನು ಪಡೆಯದೆ ಬರೀ ದಂಡದ ಮೊತ್ತ ಪಡೆಯುವುದು ಸೂಕ್ತವಾಗುತ್ತದೆಯೇ? ಕೊನೆಗೂ ಬೇಕಾದ ದಾಖಲೆಯನ್ನು ಪಡೆಯಲಾಗದ ಅರ್ಜಿದಾರ ಕೇವಲ ದಂಡದ ಮೊತ್ತ ಪಡೆದು ಹರ್ಷಚಿತ್ತನಾಗುವ ಸಾಧ್ಯತೆ ಕಡಿಮೆ.

ಬಿಹಾರ, ಮಧ್ಯಪ್ರದೇಶ, ದೆಹಲಿ ಮೊದಲಾದೆಡೆ ಯೋಜಿಸಿರುವ ಕಾಯ್ದೆಗಳ ಮೂಲ ಸ್ವರೂಪವೂ ಕೇರಳದ ಮಾದರಿಯಲ್ಲಿಯೇ ಇದೆ. ದಂಡದ ಮೊತ್ತದಲ್ಲಿ ವ್ಯತ್ಯಯವಿದೆ. ಮಧ್ಯಪ್ರದೇಶದಲ್ಲಿ ಕನಿಷ್ಠ 500 ರೂ. ಎನ್ನಲಾಗಿದ್ದರೆ, ದೆಹಲಿ 200 ರೂ. ಎನ್ನುತ್ತದೆ. ಆ ಮಟ್ಟಿಗೆ ದೆಹಲಿಯ ರೈಟ್‌ ಆಫ್ ಸಿಟಿಝೆನ್‌ ಟು ಟೈಮ್‌ ಬೌಂಡ್‌ ಡೆಲಿವರಿ ಆಫ್ ಸರ್ವೀಸಸ್‌ ಆ್ಯಕ್ಟ್ ಇನ್ನಷ್ಟು ಸಾಧ್ಯತೆಗಳನ್ನು ಸೇರಿಸಿದೆ.

ಪರಿಹಾರದ ಮೊತ್ತವನ್ನು ಪ್ರಥಮ ಮೇಲ್ಮನವಿ ಅಧಿಕಾರಿಯೇ ಅರ್ಜಿದಾರನಿಗೆ ಒದಗಿಸಿದ ಮೇಲೆ ಸಂಬಂಧಿಸಿದ ಗುಮಾಸ್ತರಿಗೆ ನೊಟೀಸ್‌ ಕೊಡಲಾಗುತ್ತದೆ. ವಿಳಂಬವೇ ಚಟವಾಗಿರುವ ಸಿಬಂದಿಯ ವಿರುದ್ಧ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ವಾರ್ಷಿಕ ಇಂತಹ ಗರಿಷ್ಠ 25 ಪ್ರಕರಣಗಳಿಗೆ ಕಾರಣನಾದವನನ್ನು ಚಟದ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ಇದೇ ಕಾಯ್ದೆಯಲ್ಲಿ ವರ್ಷಕ್ಕೆ ಒಂದೇ ಒಂದು ಆರೋಪವಿಲ್ಲದೆ ಸಾರ್ವಜನಿಕರ ಸೇವೆ ಕಲ್ಪಿಸಿದವನಿಗೆ ಐದು ಸಾವಿರಕ್ಕೆ ಮೀರದಂತೆ ನಗದು ಪುರಸ್ಕಾರಕ್ಕೆ ಶಿಫಾರಸು ಮಾಡಬಹುದು. ಸರ್ಕಾರ ಅಥವಾ ಸ್ಥಳೀಯ ಆಡಳಿತ ಮೆಚ್ಚುಗೆ ಪತ್ರ ಸತತವಾಗಿ ಶಿಫಾರಸಾದ ಮೊತ್ತವನ್ನು ನೀಡಬೇಕಾಗುತ್ತದೆ. ದೆಹಲಿ ಈ ಕಾಯ್ದೆಯೊಳಗೆ ಬರುವ 33 ಸೇವೆಗಳನ್ನು ಗುರ್ತಿಸಿ ಸಾರ್ವಜನಿಕ ಪ್ರಕಟಣೆ ನೀಡಿದೆ. 

ಮೇಲಿನ ಎಲ್ಲ ಉದಾಹರಣೆಗಳಲ್ಲಿ ಕಾನೂನಿನ ಹಲವು ಅಂಶಗಳು ತಿದ್ದುಪಡಿ ಗೊಳಗಾಗಿರಬಹುದು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತೊಂದರೆ ಕೊಡುವ ನಿಯಮಗಳು ಇದ್ದರೆ ಅದನ್ನು ತಿದ್ದುಪಡಿ ಮೂಲಕ ನಿವಾರಿಸಿಕೊಳ್ಳಲು ಮೇಲಿನ ಎರಡೂ ವರ್ಗ ಕಾತರದಿಂದಿರುತ್ತದೆ. ಆ ಕಾರಣಕ್ಕಾಗಿಯೇ ಮಾತಿ ಹಕ್ಕು ಕಾಯ್ದೆ ಆ ಪರಿ ತಿದ್ದುಪಡಿಗೊಳಗಾಗಿದೆ. 

ಕೆಇಆರ್‌ಸಿ ಸೇವಾ ಗುಣಮಟ್ಟ ನಿಯಮ ಗೊತ್ತೇ?
ಕೆಲವರಿಗಾದರೂ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಕೆಇಆರ್‌ಸಿ ಈ ಹಿಂದೆಯೇ ಹೊರಡಿಸಿದ ಒಂದು ನಿರ್ದೇಶನ ನೆನಪಾಗಬಹುದು. ಸೇವಾ ಗುಣಮಟ್ಟದ ನಿಯಮ, ಎಸ್‌ಓಪಿ ಅಡಿಯಲ್ಲಿ ಕೆಲವು ಸೇವೆಗಳನ್ನು ಸಮಮಿತಿಯಲ್ಲಿ ಪೂರೈಸಲು ಎಸ್ಕಾಂಗಳಿಗೆ ಆದೇಶ ನೀಡಲಾಗಿತ್ತು. ಉದಾಹರಣೆಗೆ ಹಾಳಾದ ಟ್ರಾನ್ಸ್‌ಫಾರರ್‌ ಹಾಕಲು ಗರಿಷ್ಠ ಸಮಯ ಗುರುತಿಸಲಾಗಿತ್ತು. ಒಂದೊಮ್ಮೆ ಅವಧಿ ಮೀರಿಯೂ ಕೆಲಸ ಆಗದಿದ್ದಲ್ಲಿ ಆ ಭಾಗದ ವಿದ್ಯುತ್‌ ಗ್ರಾಹಕ ಅರ್ಜಿ ಸಲ್ಲಿಸಿದರೆ ದಿನಕ್ಕೆ 50 ರೂ.ನಂತೆ ಪರಿಹಾರ ಪಡೆಯಲು ಅವಕಾಶವಿದೆ. ಅದೇ ರೀತಿ ಮನೆಯ ವಿದ್ಯುತ್‌ ಸಂಪರ್ಕ ಪಡೆಯಲು ತಮ್ಮ ಭಾಗದ ಎಲ್ಲ ಕೆಲಸ ಮುಗಿಸಿ ಎಸ್ಕಾಂಗೆ ಅರ್ಜಿ ಸಲ್ಲಿಸಿದ 30 ದಿನಗಳ ಬಳಿಕವೂ ಸಂಪರ್ಕ ಲಭಿಸದಿದ್ದರೆ ಪ್ರತಿದಿನ 200 ರೂ. ಪರಿಹಾರ ಕೇಳಲು ಕಾನೂನಿನಲ್ಲಿ  ಸಾಧ್ಯವಿದೆ. ಪ್ರಶ್ನೆ ಇರುವುದು, ಈ ನಿಯಮದ್ದೂ ಎಷ್ಟು ಜನ ಗ್ರಾಹಕರು ಇದನ್ನು ಬಳಸಿ ಪರಿಹಾರ ಪಡೆದಿದ್ದಾರೆ? ಕೊನೆಪಕ್ಷ ಎಸ್ಕಾಂನವರನ್ನು ಹೆದರಿಸಲಾದರೂ ಈ ಅಸ್ತ್ರ ಬಳಸಿದ್ದಾರೆ? ಈ ನಿರಾಶೆಯೇ ಸಕಾಲ ವಿಚಾರದಲ್ಲೂ ವಾಸ್ತವವಾಗಿದೆ. 

ಈ ಹಿನ್ನೆಲೆಯಲ್ಲಿ ಎಲ್ಲ ವಿಳಂಬ ಪ್ರಕರಣಗಳಲ್ಲಿ ಅರ್ಜಿದಾರನ ಕೋರಿಕೆ ಇಲ್ಲದೆಯೇ ಪರಿಹಾರ ಒದಗಿಸಲೇಬೇಕಾದ ಕಾನೂನು ಸೂತ್ರವನ್ನು ಅಳವಡಿಸಬೇಕು. ಅರ್ಜಿ ವಿಲೇವಾರಿ ಯಾಗುತ್ತಿದ್ದಂತೆಯೇ ವಿಳಂಬ ಮೊತ್ತದ ಜೊತೆಗೆ ಅದು ಅರ್ಜಿದಾರರ ಖಾತೆಗೆ ಜಮಾಗೊಳ್ಳುವುದು ಕೂಡ ಅವಶ್ಯಕ. ಅರ್ಜಿದಾರ ಈ ಪರಿಹಾರ ಮೊತ್ತಕ್ಕೆ ಮತ್ತೆ ಸರ್ಕಾರಿ ಕಚೇರಿಯ ಕಂಬ ಸುತ್ತುವ ಪ್ರಮೇಯ ಬರಬಾರದು.

ಯಾವುದೇ ಅರ್ಜಿದಾರ ಅಧಿಕಾರಿಗಳಿಂದ ದಂಡ ಕೇಳಿ ಬೆಂಕಿಗೆ ಬೀಳುವ ಸಾಹಸಕ್ಕೆ ಇಳಿಯುತ್ತಾನಾ, ಸಂಶಯ. ಪ್ರತಿಯೊಬ್ಬರ ಬದುಕು, ವ್ಯವಹಾರದಲ್ಲಿ ಒಂದಲ್ಲಾ ಒಂದು ಅರೆಕೊರೆಗೊಳಿರುವ ಹಿನ್ನೆಲೆಯಲ್ಲಿ ಅದನ್ನು ಅಧಿಕಾರ ಬಳಸಿ ಆಡಳಿತ ಕಿರುಕುಳಕೊಟ್ಟರೆ ಎಂಬ ಭಾವ, ಭಯ ಕಾಡುವುದು ತಾರ್ಕಿಕ ಎನ್ನಿಸುತ್ತದೆ. ಆಗ ಮೇಲಿನ ನೇರ ಪಾವತಿ ಬೇಡಿಕೆಯೇ ಗಟ್ಟಿ ಪರಿಹಾರವಾದೀತು. 

ಕರ್ನಾಟಕದಲ್ಲಿ ಸಕಾಲ ಕಲರವ!
ಕರ್ನಾಟಕದಲ್ಲಿ ಸಕಾಲ ಜಾರಿಗೊಂಡಿದ್ದು 2012ರಲ್ಲಿ. ಸಕಾಲದ ಜಾರಿಯಲ್ಲಿ, ಸಕಾಲ ವೆಬ್‌ಸೈಟ್‌ನ ಸ್ವರೂಪದಲ್ಲಿ ಮತ್ತು ಕೇವಲ ಅಂಕಿಅಂಶಗಳ ಸಂಗ್ರಹದಲ್ಲಿ ತೋರಿದ ಉತ್ಸಾಹವನ್ನು ರಾಜ್ಯ ಸರ್ಕಾರ ಅದರ ವಾಸ್ತವ ಜಾರಿಯಲ್ಲಿ ಪ್ರದರ್ಶಿಸಿಯೇ ಇಲ್ಲ. ಪ್ರತಿ ವರ್ಷದ ವರದಿ, ಎಲ್ಲ ತಿಂಗಳ ಮಾಹಿತಿ, ಸಕಾಲದ ಗಡಿಯಾರ, ಓಹ್‌, ನೋಡಲೆರಡು ಕಣ್ಣು ಸಾಲದು! ಇಂತಿಪ್ಪ ದಿನಗಳಲ್ಲಿ ಮಾಹಿತಿ ಹಕ್ಕಿನಡಿ ಹಾಕಿದ ಅರ್ಜಿಯೊಂದಕ್ಕೆ ಉತ್ತರಿಸಿದ ಸಾಗರ ನಗರಸಭೆ ಸಕಾಲ ಸೇವೆಯಲ್ಲಿ 2016-17ರಲ್ಲಿ ಒಂದು ಅರ್ಜಿಯನ್ನೂ ಸ್ವೀಕರಿಸಿಲ್ಲ ಎಂದು ಘೋಷಿಸಿದೆ.  ಸಕಾಲದ ಹೊರತಾಗಿಯೂ ಅರ್ಜಿ ಸ್ವೀಕರಿಸಲು ಅವಕಾಶ ಕೊಡುವುದೇ ತಪ್ಪು ಎಂದವನೇ ದಡ್ಡ. ಕರ್ನಾಟಕದ ಸಕಾಲದ ಬಗ್ಗೆಯೇ ಪ್ರತ್ಯೇಕವಾಗಿ ಬರೆಯಬೇಕಿದೆ. ಆದರೆ ಅದು ಸಾಗುತ್ತಿರುವ ದಾರಿಯ ಬಗ್ಗೆ ಒಂದು ದೃಷ್ಟಾಂತದ ಮೂಲಕ ಝಲಕ್‌ ನೀಡಬಹುದೇನೋ. ಆರಕ್ಷಕ ಇಲಾಖೆಯ ಹಲವು ಸೇವೆಗಳು ಸಕಾಲದಡಿ ಲಭ್ಯ. ಎಫ್ಐ ಆರ್‌ ಪಡೆಯಲು ಇರುವ ಗರಿಷ್ಠ ಕಾಲಾವಧಿ ಒಂದು ದಿವಸ. ಈ ಸೇವೆ ಸಂಪೂರ್ಣವಾಗಿ ಉಚಿತ. ಇಂದಿಗೂ ಪೊಲೀಸ್‌ ಠಾಣೆಯಿಂದ ಎಫ್ಐಆರ್‌ ಪ್ರತಿ ಪಡೆಯುವುದಿರಲಿ, ದೂರು ಸಂಬಂಧಿತ ಮಾಹಿತಿಯನ್ನು ಪಡೆಯುವುದು ಪತ್ರಕರ್ತರಿಗೂ ಕಷ್ಟ. ಇನ್ನು ಎಫ್ಐಆರ್‌ ಪ್ರತಿ ಪಡೆಯಲು ನಾಗರಿಕರಿಗೆ ಸಕಾಲದಲ್ಲಿ ಅವಕಾಶವಿದೆ ಎಂಬುದು ಸತ್ಯ, ಶತಾಯಗತಾಯ ಸಿಗುವುದಿಲ್ಲ ಎಂಬುದು ಪರಮಸತ್ಯ!

“ಸಕಾಲ’ ಸಂಪರ್ಕ
ಯಾವುದೇ ಅರ್ಜಿ ಸಕಾಲದಡಿ ಸ್ವೀಕಾರಾರ್ಹವಾಗಿದೆ ಎಂದಾದರೆ ಕೂಡಲೇ ನಾವು ಅರ್ಜಿಯಲ್ಲಿ ತಿಳಿಸಿದ ಮೊಬೈಲ್‌ ನಂಬರ್‌ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ತಿಳಿಸಲಾಗುತ್ತದೆ. ರಸೀದಿಯಲ್ಲಿ ಅರ್ಜಿಯ ಲೇವಾರಿಗೆ ತೆಗೆದುಕೊಳ್ಳುವ ಪರಮಾವಧಿ ಅವಧಿಯನ್ನೂ ತೋರಿಸಿರಲಾಗುತ್ತದೆ. ಅರ್ಜಿಯ ಸ್ಥಿತಿಗತಿಯ ಬಗ್ಗೆ 9731979899 ಅಥವಾ 07738299899R ನಮ್ಮ ಅರ್ಜಿಯ ಜಿಎಸ್‌ಸಿ ನಂಬರ್‌ ಟೈಪ್‌ ಮಾಡಿ ರವಾನಿಸಿದರೆ ಮಾಹಿತಿ ತಿಳಿಯುತ್ತದೆ (ಎಸ್‌ಎಂಎಸ್‌ ಮಾದರಿ: GSC SS099 00000 66423) ಸಾಮಾನ್ಯವಾಗಿ ದಾಖಲೆ ಸಿದ್ಧ ಎಂತಾದಲ್ಲಿ ಸಕಾಲ ವೆಬ್‌ಸೈಟ್‌ನಿಂದಲೇ ನಮಗೆ ಆ ಮಾಹಿತಿ ಲಭಿಸುತ್ತದೆ. ನಾವು ಕೇಳಿದ ಸೇವೆಯ ಬಗ್ಗೆ ಸಕಾಲ ವೆಬ್‌ನಿಂದಲೂ ಮಾಹಿತಿ ಪಡೆಯಬಹುದು. ವೆಬ್‌ ವಿಳಾಸ://kgsc.kar.nic.in/

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next