Advertisement

ತಾಪಮಾನ ಏರಿಕೆಯಲ್ಲ, ಕುದಿಯುವ ಘಟ್ಟ!- 12 ಸಾವಿರ ವರ್ಷಗಳಲ್ಲೇ ಅತ್ಯಧಿಕ ತಾಪಮಾನ ದಾಖಲು

11:00 PM Jul 28, 2023 | Team Udayavani |

ವಾಷಿಂಗ್ಟನ್‌: “ಜಾಗತಿಕ ತಾಪಮಾನ ಏರಿಕೆಯ ಯುಗ ಅಂತ್ಯವಾಗಿದೆ. ನಾವೀಗ ಕುದಿಯುವ ಕಾಲಘಟ್ಟಕ್ಕೆ ಕಾಲಿಟ್ಟಿದ್ದೇವೆ…”

Advertisement

ಇಂಥದ್ದೊಂದು ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌.

ಪ್ರಸಕ್ತ ಜುಲೈ ತಿಂಗಳು ಜಾಗತಿಕವಾಗಿ “ಗರಿಷ್ಠ ತಾಪಮಾನ”ದ ಮಾಸ ಎಂಬ ಸಾರ್ವಕಾಲಿಕ ದಾಖಲೆ ಬರೆದಿರುವ ಹಿನ್ನೆಲೆಯಲ್ಲಿ ಗುಟೆರಸ್‌ ಜಗತ್ತನ್ನು ಎಚ್ಚರಿಸಿದ್ದಾರೆ. ಹವಾಮಾನ ಬದಲಾವಣೆ ಭಯಾನಕ ಸತ್ಯ. ಪಳೆಯುಳಿಕೆ ಇಂಧನ ದಹನ ಜಾಗತಿಕ ತಾಪಮಾನವನ್ನು ಹಿಂದೆಂದೂ ಕಂಡರಿಯದ ಎತ್ತರಕ್ಕೆ ಒಯ್ದಿದ್ದು, ಪರಿಸರ ಮತ್ತು ಹವಾಮಾನಕ್ಕೆ ಅಪಾರ ಹಾನಿ ಉಂಟುಮಾಡಿದೆ. ಹೀಗಾಗಿ ಜಗತ್ತಿನಲ್ಲಿ ಬಿಸಿಯೇರುವ ಯುಗ ಮುಗಿದಿದೆ. ನಾವು ಕುದಿಯುವ ಕಾಲಘಟ್ಟಕ್ಕೆ ಕಾಲಿಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.

12 ಸಾವಿರ ವರ್ಷಗಳಲ್ಲೇ ಮೊದಲು

ಪ್ರಸಕ್ತ ತಿಂಗಳಿನ ತಾಪಮಾನ ಏರಿಕೆಯು ಬರೋಬ್ಬರಿ 12 ಸಾವಿರ ವರ್ಷಗಳಲ್ಲೇ ಭೂಮಿಯಲ್ಲಿ ಅನುಭವಕ್ಕೆ ಬಂದಿರುವ ಗರಿಷ್ಠ ತಾಪಮಾನವಾಗಿದೆ ಎಂದು ಹಾಸ್ಟೀನ್‌ ಸಂಸ್ಥೆ ವಿಶ್ಲೇಷಿಸಿದೆ. ಏರುತ್ತಿರುವ ತಾಪವು ವಿದ್ಯುತ್‌ ಗ್ರಿಡ್‌ಗಳು, ಮೂಲಸೌಕರ್ಯಗಳು, ಮಾನವನ ಶರೀರದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜತೆಗೆ ಕಾಳ್ಗಿಚ್ಚು, ಪ್ರವಾಹ, ಬಿಸಿಗಾಳಿ ಮುಂತಾದ ಪ್ರಾಕೃತಿಕ ವಿಕೋಪಗಳಿಗೂ ಕಾರಣವಾಗುತ್ತಿವೆ ಎಂದು ಸಂಸ್ಥೆ ಹೇಳಿದೆ.

Advertisement

ಜುಲೈ ಬಿಸಿ

ಜುಲೈ ತಿಂಗಳಿನಲ್ಲಿ ದಾಖಲಾದ ತಾಪಮಾನವು ವಿಜ್ಞಾನಿಗಳಿಗೆ ತಲೆನೋವು ಉಂಟುಮಾಡಿದೆ. ಜಾಗತಿಕವಾಗಿ ಹಿಂದೆಂದೂ ದಾಖಲಾಗದಷ್ಟು ಹಾಗೂ ಮಾನವ ನಾಗರಿಕತೆಯ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನ ಜುಲೈ ತಿಂಗಳಿನಲ್ಲಿ ದಾಖಲಾಗಿದೆ. ಅತಿಯಾದ ಬಿಸಿಲಿನ ಬೇಗೆಯು ಉತ್ತರ ಅಮೆರಿಕ, ಯುರೋಪ್‌ ಮತ್ತು ಏಷ್ಯಾದಲ್ಲಿ ತೀವ್ರತರಹದ ಬಿಸಿಗಾಳಿಗೆ ಕಾರಣವಾದದ್ದು ಮಾತ್ರವಲ್ಲದೆ ಪ್ರವಾಹ, ಕಾಳ್ಗಿಚ್ಚನ್ನೂ ಉಂಟುಮಾಡಿದೆ.

ಕೊಪರ್ನಿಕಸ್‌ ಕ್ಲೈಮೇಟ್‌ ಚೇಂಜ್‌ ಸರ್ವೀಸ್‌ ನೀಡಿರುವ ಮಾಹಿತಿಯ ಪ್ರಕಾರ ಜುಲೈ ತಿಂಗಳಿನ ಮೊದಲ 23 ದಿನಗಳಲ್ಲಿ ಭೂಮಿಯ ತಾಪಮಾನವು 16.95 ಡಿಗ್ರಿ ಸೆ. ಆಗಿತ್ತು. ಅಂದರೆ 2019ರ ಜುಲೈ ತಿಂಗಳಿನಲ್ಲಿ ದಾಖಲಾದ ತಾಪಮಾನಕ್ಕಿಂತ ಮೂರನೇ ಒಂದು ಡಿಗ್ರಿ ಸೆ. ಹೆಚ್ಚು. ಅಷ್ಟೇ ಅಲ್ಲದೆ ಈ 23 ದಿನಗಳ ಪೈಕಿ 21 ದಿನಗಳ ತಾಪ ಈ ಹಿಂದೆ ದಾಖಲಾದ ಅತೀ ಹೆಚ್ಚು ತಾಪದ ದಿನಗಳನ್ನು ಮೀರಿಸುವಂತಿತ್ತು. ಇದೆಲ್ಲವೂ ಜುಲೈ ತಿಂಗಳಿನ ಗಂಭೀರತೆಯನ್ನು ಎತ್ತಿ ತೋರಿಸಿದೆ ಎಂದಿದ್ದಾರೆ ವಿಜ್ಞಾನಿಗಳು.

ಕಾರಣವೇನು?

– ಶಾಂತ ಸಾಗರದ ಕೇಂದ್ರ ಭಾಗದಲ್ಲಿ ಎಲ್‌ ನಿನೋ ಪರಿಣಾಮ

– ಅಟ್ಲಾಂಟಿಕ್‌ ಸಾಗರದಲ್ಲಿ ಹೆಚ್ಚಿದ ತಾಪಮಾನ

– ಅಂಟಾರ್ಟಿಕಾದಲ್ಲಿ ಕರಗುತ್ತಿರುವ ಮಂಜಿನ ಹೊದಿಕೆ

– ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆ

Advertisement

Udayavani is now on Telegram. Click here to join our channel and stay updated with the latest news.

Next