Advertisement

ವ್ಯಕ್ತಿಯ ಕಥೆಯಲ್ಲ; ಊರಿನ ಕಥೆ

03:45 PM Apr 27, 2018 | |

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘದ ಕಾರ್ಯಗಳಿಂದ ಪ್ರೇರೇಪಿತವಾಗಿ ತಯಾರಾಗಿರುವ “ಕಾನೂರಾಯಣ’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಿರಿಯ ನಿರ್ದೇಶಕ ಟಿ.ಎಸ್‌.ನಾಗಾಭರಣ ಈ ಚಿತ್ರದ ನಿರ್ದೇಶಕರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್‌ನ ವತಿಯಿಂದ ಈ ಚಿತ್ರ ನಿರ್ಮಾಣವಾಗಿದೆ.

Advertisement

ಸಂಘದ 20 ಲಕ್ಷ ಸದಸ್ಯರು, ತಲಾ ತಲಾ 20 ರೂಪಾಯಿ ಹಾಕಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗ್ರಾಮೀಣ ಭಾಗದಲ್ಲಿ ಆರ್ಥಿಕ ಶಿಸ್ತು ಸಾಧಿಸುವುದು ಹೇಗೆ ಎಂಬ ಅಂಶದ ಕುರಿತು ಹೇಳಲಾಗಿದೆ. ತಮ್ಮ ಸಿನಿಪಯಣದಲ್ಲಿ “ಕಾನೂರಾಯಣ’ದಂತಹ ಸಿನಿಮಾ ಮಾಡಿದ ಬಗ್ಗೆ ನಿರ್ದೇಶಕ ನಾಗಾಭರಣ ಅವರಿಗೂ ಖುಷಿ ಇದೆ. “ಕಾನೂರಾಯಣ’ ಒಂದು ಅದ್ಭುತ ಅನುಭವ ಕೊಟ್ಟ ಸಿನಿಮಾ.

ಇದಕ್ಕೆ ಕಾರಣವಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು. ನನ್ನ ಜೀವನದ ಅತ್ಯಮೂಲ್ಯ ಅವಕಾಶವಿದು. ಕ್ಷೇತ್ರ ಮಾಡುತ್ತಿರುವ ಗ್ರಾಮಾಭಿವೃದ್ಧಿಯ ಕಾರ್ಯವನ್ನು ಇತರ ಕಡೆಯೂ ತಲುಪಿಸಬೇಕು, ಈ ಮೂಲಕ ಮತ್ತಷ್ಟು ಜನರಿಗೆ ಪ್ರೇರಣೆಯಾಗಬೇಕೆಂಬ ಆಸೆ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್‌ ಅವರದ್ದಾಗಿತ್ತು. ಅದರಂತೆ ಈಗ ಸಿನಿಮಾ ತಯಾರಾಗಿದೆ. ಇಲ್ಲಿ ಇದು ಎಲ್ಲಾ ರೀತಿಯ ಭಾವನೆಗಳುಳ್ಳ ಸಿನಿಮಾ’ ಎಂದು ಚಿತ್ರದ ಬಗ್ಗೆ ಹೇಳಿದರು ನಾಗಾಭರಣ.

ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ಆರ್ಥಿಕ ಶಿಸ್ತು ಸಾಧಿಸುವುದು ಹೇಗೆ ಎಂಬ ಬಗ್ಗೆ ಹೇಳಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಮಹಿಳೆಯರು ಹೇಗೆ ಆರ್ಥಿಕ ಶಿಸ್ತನ್ನು ಕಾಪಾಡಬಹುದೆಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. “ಎಲ್ಲರಿಗೂ ಹಣ ಮುಖ್ಯ. ಆದರೆ, ಅನೇಕರಿಗೆ ಹಣವನ್ನು ಹೇಗೆ ಬಳಸಬೇಕೆಂಬುದು ಗೊತ್ತಿರೋದಿಲ್ಲ. ಆರ್ಥಿಕ ಶಿಸ್ತನ್ನು ಕಲಿತರೆ ಅದು ಬದುಕಿನ ಶಿಸ್ತಾಗಿ ಮಾರ್ಪಾಡಾಗುತ್ತದೆ. ಈ ಅಂಶವನ್ನು “ಕಾನೂರಾಯಣ’ದಲ್ಲಿ ಹೇಳಲಾಗಿದೆ’ ಎಂದು ವಿವರ ಕೊಟ್ಟರು ನಾಗಾಭರಣ.

ಅಂದಹಾಗೆ, ಇದು ಯಾವುದೇ ವ್ಯಕ್ತಿಯ ಕಥೆಯಲ್ಲ, ಊರಿನ ಕಥೆ. ಊರಿನ ಹಲವರ ಕಥೆ. ಕಾನೂರು ಎಂಬ ಕಾಲ್ಪನಿಕ ಊರಿನ ಕಥೆ ಇದೆ. ಇಲ್ಲಿ ಊರಿನ ಹೆಸರು ಮಾತ್ರ ಕಾಲ್ಪನಿಕ. ಆದರೆ, ಇದು ಯಾವುದೇ ಊರಿನಲ್ಲಾದರೂ ನಡೆಯಬಹುದಾದ ಕಥೆ. ಇಡೀ ಕುಟುಂಬ ಕೂತು ನೋಡಬಹುದಾದ ಕಥೆ ಇದಾಗಲಿದೆ ಎನ್ನುವುದು ನಾಗಾಭರಣ ಅವರ ಮಾತು. ಚಿತ್ರದ ಪ್ರಮುಖ ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ. ಇಲ್ಲಿ ಗೌರಿ ಎಂಬ ಬಡಕುಟುಂಬದ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ.

Advertisement

ಈ ಚಿತ್ರದ ಮೂಲಕ ಅವರ ಎರಡು ಕನಸುಗಳು ನನಸಾಗಿವೆಯಂತೆ. ಒಂದು ಒಳ್ಳೆಯ ಪಾತ್ರ ಹಾಗೂ ನಿರ್ದೇಶಕ ನಾಗಾರಭರಣ ಅವರ ಚಿತ್ರದಲ್ಲಿ ನಟಿಸಬೇಕೆಂಬ ಕನಸು. ಚಿತ್ರದಲ್ಲಿ ನಟಿಸಿರುವ ಮನು, ಕಿರಣ್‌, ಜಾಹ್ನವಿ, ಕರಿಸುಬ್ಬು ತಮ್ಮ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹರೀಶ್‌ ಹಾಗಲವಾಡಿ ಕಥೆ ಬರೆದರೆ, ನಾಗಾಭರಣ ಮತ್ತು ಪನ್ನಗಾಭರಣ ಚಿತ್ರಕಥೆ ರಚಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ. ಚಿತ್ರವನ್ನು ಜಾಕ್‌ ಮಂಜು ವಿತರಣೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next