Advertisement

ನೋಟ್‌ ಬ್ಯಾನ್‌ ಖಂಡಿಸಿ ಕರಾಳ ದಿನಾಚರಣೆ

10:19 AM Nov 10, 2018 | Team Udayavani |

ಕಲಬುರಗಿ: ಐನೂರು ಮತ್ತು ಸಾವಿರ ರೂ. ಮೌಲ್ಯದ ನೋಟುಗಳ ಅಮಾನ್ಯಕ್ಕೆ ಎರಡು ವರ್ಷ ತುಂಬಿದ ದಿನವನ್ನು ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕರಾಳ ದಿನವನ್ನಾಗಿ ಆಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.

Advertisement

ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೋಟು ಅಮಾನ್ಯೀಕರಣದ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಕೇಂದ್ರ ಸರ್ಕಾರದ ನೋಟ್‌ ಬ್ಯಾನ್‌ ನೀತಿ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದ್ದು, ಎರಡು ವರ್ಷ ಕಳೆದರೂ ಜನಸಾಮಾನ್ಯರು ಚೇತರಿಸಿಕೊಳ್ಳಲು ಆಗುತ್ತಿಲ್ಲ. ನಿರಂತರ ಬೆಲೆ ಏರಿಕೆಯಿಂದ ಬಡವರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡ ಉದ್ಯಮಿಗಳು ಬ್ಯಾಂಕ್‌ ಸಾಲ ತೀರಿಸಲಾಗದೆ ದೇಶ ಬಿಟ್ಟು ವಿದೇಶಗಳಿಗೆ ಓಡಿ ಹೋಗಿದ್ದಾರೆ. ಇಂತಹ ಉದ್ಯಮಿಗಳ ವಿರುದ್ಧ ಕೇಂದ್ರ ಸರ್ಕಾರದ ಕ್ರಮಗೈಕೊಳ್ಳಲು ವಿಫಲವಾಗಿದೆ. ಇದಕ್ಕೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆ ಸೇರಿದಂತೆ ಹಲವು ಉಪಚುನಾವಣೆಗಳಲ್ಲಿ ಜನತೆಯೇ ಮೋದಿ ಸರ್ಕಾರಕ್ಕೆ ಉತ್ತರ ಕೊಟ್ಟಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಜನತೆ ತಕ್ಕ ಉತ್ತರ ನೀಡಲಿದ್ದು, ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
 
ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ತಮ್ಮ ಭಾಷಣ ಮತ್ತು ಪ್ರಣಾಳಿಕೆಯಲ್ಲಿ ದೇಶದ ಜನತೆಗೆ ನೀಡಿದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ನೋಟು ಬ್ಯಾನ್‌ನಿಂದ ಸರತಿ ಸಾಲಿನಲ್ಲಿ ನಿಂತು ಬಡವರು ಪ್ರಾಣ ಕಳೆದುಕೊಳ್ಳವಂತೆ ಮಾಡಿರುವುದೇ ಮೋದಿ ಮಾಡಿದ ಘನಂದಾರಿ ಕೆಲಸ. ಪ್ರತಿ ವರ್ಷ ದೇಶದ ಯುವಕರಿಗೆ ಎರಡು ಕೋಟಿ ಉದ್ಯೋಗ ನೀಡಲಾಗುವುದು, ರೈತರ ಹಿತ ಕಾಯುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ರಸ ಗೊಬ್ಬರ, ಪೆಟ್ರೋಲ್‌ ದರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಯುದ್ಧ ವಿಮಾನಗಳ ಖರೀದಿಯಲ್ಲಿ ಪ್ರಧಾನಿ ಮೋದಿ ಹಿಟ್ಲರ್‌ ಮಾದರಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಭಿತ್ತಿ ಚಿತ್ರಗಳನ್ನು ಹಿಡಿದು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮೇಯರ್‌ ಮಲ್ಲಮ್ಮ ವಳಕೇರಿ, ಮಾಜಿ ಮೇಯರ್‌ಗಳಾದ ಶರಣಕುಮಾರ ಮೋದಿ, ಸೈಯದ್‌ ಅಹ್ಮದ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಮಲ್ಲಿನಾಥ ಪಾಟೀಲ, ಲತಾ ರವಿ ರಾಠೊಡ, ರೇಣುಕಾ ಸಿಂಗೆ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next