Advertisement

ಕೇಂದ್ರದ್ದು ಮೋದಿ ಬಚಾವೋ ಬಜೆಟ್

07:08 AM Feb 03, 2019 | Team Udayavani |

ಹರಪನಹಳ್ಳಿ: ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಮೋದಿ ಬಚಾವೋ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಟೀಕಿಸಿದರು.

Advertisement

ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷದ ಅಂಗ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಗ್ರಾಮೀಣ ಪ್ರದೇಶದ ಜನ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಳೆದ 5 ವರ್ಷದ ಅಧಿಕಾರದಲ್ಲಿ ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದ ಯಾವುದೇ ಯೋಜನೆ ಅನುಷ್ಠಾನ ಮಾಡಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಇದೀಗ ರೈತರಿಗೆ ವಾರ್ಷಿಕ 6000 ರೂ. ನೀಡುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಕೈ ಹಾಕಿದ್ದಾರೆ. ದಿನಕ್ಕೆ 16 ರೂ. ರೈತರ ಯಾವ ಉಪಯೋಗಕ್ಕೆ ಬರುತ್ತದೆ ಎಂಬುವುದು ಕೇಂದ್ರ ಸರ್ಕಾರವೇ ಉತ್ತರಿಸಬೇಕು ಎಂದರು.

ಕಾರ್ಯಗಾರ ಉದ್ಘಾಟಿಸಿದ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಿರಿಯ ವಕೀಲ ನಾಗಭೂಷಣ್‌ರಾವ್‌ ಮಾತನಾಡಿ, ಸಾಮಾಜಿಕ ಹಿಂದುಳಿದ ವರ್ಗದ ಜನರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರನ್ನು ಒಗ್ಗೂಡಿಸಿಕೊಂಡು ಗ್ರಾಪಂ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಬೇಕು. ಇಂದಿನ ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಹಣ, ಹೆಂಡ ಹಂಚಿ ಗೆದ್ದ ನಂತರ ಹಣಗಳಿಸುವ ಹೆಬ್ಬಯಕೆಯಿಂದ ಭ್ರಷ್ಟಾಚಾರದ ದಾರಿ ಹಿಡಿದಿದ್ದಾರೆ. ಅಂತಹವರ ವಿರುದ್ಧ ಹೋರಾಟದ ಜೊತೆಗೆ ಆಡಳಿತ ನಡೆಸುವ ಸಮರ್ಥ ನಾಯಕರಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡುವ ಅನಿವಾರ್ಯತೆ ಇದೆ ಎಂದರು. ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್‌ ಮಾತನಾಡಿ, ಗ್ರಾಮೀಣ ಮಟ್ಟದಿಂದಲೇ ಜನ ಜಾಗೃತರಾದರೆ ಸಮೃದ್ಧ ನಾಡು ಕಟ್ಟಲು ಸಾಧ್ಯ. ಹಣದಿಂದ ಬದಲಾಯಿಸಲು ಒಪ್ಪದವರನ್ನು ಸಂಘಟಿತರಾಗಿ ಬದಲಾಯಿಸಲು ಒಗ್ಗೂಡಿ ಶ್ರಮಿಸಬೇಕು. ರಾಜಕೀಯ ವ್ಯವಸ್ಥೆಯು ಸ್ವಾರ್ಥತೆಗೆ ಸೀಮಿತವಾಗಿದೆ. ಕುಟುಂಬ ರಾಜಕಾರಣದಿಂದ ಮುಕ್ತಿ ಪಡೆದು ನಿತ್ಯ ಚಾಲನಾ ಸ್ಥಿತಿಯಲ್ಲಿರುವ ರೈತರಿಗೆ, ಕಾರ್ಮಿಕರಿಗೆ ಅಧಿಕಾರ ಸಿಗುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್‌, ಸಹ ಕಾರ್ಯದರ್ಶಿ ಎಚ್.ಎಂ.ಸಂತೋಷ್‌, ರಮೇಶನಾಯ್ಕ, ಬಿಸಿಯೂಟ ಕಾರ್ಯಕರ್ತೆಯರ ತಾಲೂಕು ಸಂಚಾಲಕಿ ವಿಶಾಲಮ್ಮ, ಎಐಎಸ್‌ಎಫ್‌ ಜಿಲ್ಲಾ ಅಧ್ಯಕ್ಷ ಮಾದಿಹಳ್ಳಿ ಮಂಜುನಾಥ್‌, ಎಸ್‌.ಸುರೇಶ್‌, ನಿವೃತ್ತ ಶಿಕ್ಷಕ ಬಸಪ್ಪ, ಮುಖಂಡ ಗುರುಮೂರ್ತಿ, ಮಹಬೂಬ್‌ಬಾಷಾ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next