ದಾವಣಗೆರೆ: ಕನಿಷ್ಠ ವೇತನ ಜಾರಿ, ಕಾರ್ಮಿಕರೆಂದು ಪರಿಗಣನೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 8,250 ಪೂರ್ಣ, 3,331 ಮಿನಿ ಅಂಗನವಾಡಿ ಕಾರ್ಯಕರ್ತೆರು, ಸಹಾಯಕಿಯರು ಒಳಗೊಂಡಂತೆ ದೇಶದ್ಯಾಂತ ಲಕ್ಷಾಂತರ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಕ್ಷರಶಃ ಮೋಸ ಮಾಡಿದೆ. ಕೇಂದ್ರ ಸರ್ಕಾರವೇ ರೂಪಿಸಿರುವ ಮಾಸಿಕ 18 ಸಾವಿರ ರೂಪಾಯಿ ಕನಿಷ್ಠ ವೇತನ ಕಾಯ್ದೆಯನ್ನು ತಾನೇ ಮುರಿಯುತ್ತಿದೆ. ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್ ಸೌಲಭ್ಯ ನೀಡಲಾಗಿದೆ ಎಂಬುದು ಹಸಿ ಸುಳ್ಳು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆಸಿದ್ದ ಸಂವಾದದಲ್ಲಿ ಗೌರವಧನ ಹೆಚ್ಚಳದ ಭರವಸೆ ನೀಡಿದ್ದರು. ಬಜೆಟ್‌ನಲ್ಲಿ ಅದರ ಅರ್ಧ ಭಾಗದಷ್ಟು ಗೌರವಧನ ಹೆಚ್ಚಳ ಆಗಿರುವುದನ್ನೇ ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ. 50ರಷ್ಟು ಗೌರವಧನ ಹೆಚ್ಚಿಸುವ ಮೂಲಕ ಬಂಪರ್ ಸೌಲಭ್ಯ ನೀಡಲಾಗಿದೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ ಪೈಸೆಯಷ್ಟು ಗೌರವಧನವೂ ಹೆಚ್ಚಳವಾಗಿಲ್ಲ ಎಂದು ದೂರಿದರು.
ಮಹಿಳೆಯರ ಬಗ್ಗೆ ಭಾರೀ ಮಾತನಾಡುವ ಕೇಂದ್ರ ಸರ್ಕಾರ, ಕಾರ್ಯಕರ್ತೆಯರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಬರದೇ ಇದ್ದಲ್ಲಿ ವೇತನವನ್ನೇ ನಿಲ್ಲಿಸುತ್ತದೆ. ಅಸಲಿಗೆ ಇವರನ್ನು ಕಾರ್ಮಿಕರು ಎಂದೇ ಪರಿಗಣಿಸಿಲ್ಲ. ಹಾಗಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೆ ಆರೋಗ್ಯ ವಿಮೆ, ಭವಿಷ್ಯನಿಧಿ ಇತರೆ ಸಾಮಾಜಿಕ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಅಧಿಕಾರಕ್ಕೆ ಬರುವ ಮುನ್ನ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕಾಯಂ, ಮಾಸಿಕ 6000 ಪಿಂಚಣಿ ಸೌಲಭ್ಯ ಇತರೆ ಭರವಸೆ ನೀಡಿದ್ದರು. ಫೆ. 8ರಂದು ಮಂಡಿಸಿರುವ ಬಜೆಟ್‌ನಲ್ಲಿ 500 ರೂ. ಮಾತ್ರ ಹೆಚ್ಚಿಸಿದ್ದಾರೆ. ಇನ್ನುಳಿದಂತೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡಿಯುವ ಮಹಿಳೆಯರಿಗೆ ಶೋಷಣೆ ಮಾಡುವಲ್ಲಿ, ಸುಳ್ಳು ಹೇಳುವಲ್ಲಿ ಒಂದೇ ಆಗಿವೆ. ರಾಜ್ಯ, ರಾಷ್ಟ್ರ ಸಮಿತಿಯಲ್ಲಿ ಚರ್ಚಿಸಿ, ಮುಂದಿನ ಹಂತದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಫೆಡರೇಷನ್ ರಾಜ್ಯ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಆವರಗೆರೆ ಚಂದ್ರು, ಎಂ.ಬಿ. ಶಾರದಮ್ಮ, ವಿಶಾಲಾಕ್ಷಿ ಮೃತ್ಯುಂಜಯ, ಸರ್ವಮ್ಮ, ಎಸ್.ಎಸ್. ಮಲ್ಲಮ್ಮ, ಕೆ. ಸುಧಾ, ಐರಣಿ ಚಂದ್ರು, ಎಚ್.ಎಸ್. ನೀಲಮ್ಮ, ರೇಣುಕಮ್ಮ, ಐರಣಿ ಚಂದ್ರು, ಗದಿಗೇಶ್, ಆವರಗೆರೆ ರಂಗನಾಥ್, ಅಂಬುಜಾ, ಗೌರಮ್ಮ, ಸಾಕಮ್ಮ, ನೀಲಮ್ಮ ಇತರರು ಇದ್ದರು.