ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನ ಹೆಂಡತಿ ಮಾಂಜಿ ಎಂಬ ಹೆಣ್ಣುಮಗುವಿಗೆ ಜನ್ಮ ನೀಡಿ ತೀರಿಕೊಂಡಳು. ರೈತ ಇನ್ನೊಬ್ಬ ಹೆಂಗಸನ್ನು ಮದುವೆಯಾದ. ಅವಳಿಗೆ ಗಂಡನ ಮೊದಲ ಮಗಳನ್ನು ಕಂಡರೆ ಆಗುತ್ತಿರಲಿಲ್ಲ. ತುಂಬ ಹಿಂಸೆ ಕೊಡುತ್ತಿದ್ದಳು. ಊಟವನ್ನು ಹೊಟ್ಟೆ ತುಂಬುವಷ್ಟು ಕೊಡುತ್ತಿರಲಿಲ್ಲ. ಮಗಳು ಅನುಭವಿಸುವ ಕಷ್ಟವನ್ನು ನೋಡಲಾಗದೆ ರೈತನು ವ್ಯಥೆಯಿಂದ ಮನೆ ಬಿಟ್ಟುಹೋದ. ಆಮೇಲೆ ಮಾಂಜಿ ಮಲತಾಯಿಯಿಂದ ಅನುಭವಿಸಿದ ಕಷ್ಟಗಳಿಗೆ ಮಿತಿಯೇ ಇರಲಿಲ್ಲ. ದಿನ ಕಳೆದ ಹಾಗೆ ಮಾಂಜಿ ಕೆಲಸ ಮಾಡುವುದನ್ನು ನಿಲ್ಲಿಸಿದಳು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮನೆಯ ಕಿಟಕಿಯ ಬಳಿ ಕುಳಿತು ಒಣಹುಲ್ಲನ್ನು ಹೊಸೆಯುವ ಕೆಲಸದಲ್ಲೇ ಮಗ್ನಳಾಗುತ್ತಿದ್ದಳು.
ಒಂದು ದಿನ ನೆರೆಯೂರಿನ ಜಮೀನಾªರನ ಸೇವಕ ಹಳ್ಳಿಗೆ ಬಂದ. ಅವನಿಗೆ ಕುಡಿಯಲು ನೀರು ಬೇಕಾಗಿತ್ತು. ಕಿಟಕಿಯ ಬಳಿ ಕುಳಿತಿದ್ದ ಮಾಂಜಿಯ ಬಳಿಗೆ ಹೋಗಿ, “ವಿಪರೀತ ದಾಹವಾಗುತ್ತಿದೆ. ಕುಡಿಯಲು ನೀರು ಕೊಡುವೆಯಾ?’ ಎಂದು ಕೇಳಿದ. ಮಾಂಜಿ ಅವನ ಕಡೆಗೆ ನೋಡಲೇ ಇಲ್ಲ. ಆಗ ಅವಳ ಚಿಕ್ಕಮ್ಮ ಹೊರಗೆ ಬಂದಳು. “ಯಾರು ನೀನು, ಏನು ಬೇಕಾಗಿತ್ತು?’ ಕೇಳಿದಳು. ಸೇವಕ ಅವಳ ಹತ್ತಿರ ಬಂದ. “ನಾನು ನಮ್ಮ ಊರಿನ ಜಮೀನಾªರನ ಮಗನಿಗೆ ಮದುವೆಯಾಗಲು ಸೂಕ್ತವಾದ ಹುಡುಗಿಯನ್ನು ಹುಡುಕಿಕೊಂಡು ಹೊರಟಿದ್ದೇನೆ. ಎಲ್ಲಿಯೂ ರೂಪವತಿಯಾದ ಹುಡುಗಿ ಸಿಗಲಿಲ್ಲ ಆದರೆ ನಿಮ್ಮ ಮನೆಯ ಕಿಟಕಿಯ ಪಕ್ಕ ಕುಳಿತಿರುವ ಹುಡುಗಿ ಸೌಂದರ್ಯದ ಖನಿ. ನಮ್ಮ ಜಮೀನಾªರರ ಮನೆಗೆ ತಕ್ಕವಳೆಂಬುದು ಸತ್ಯ. ಆದರೆ ಅವಳು ಯಾವುದೋ ಹುಲ್ಲನ್ನು ಹೊಸೆಯುವುದರಲ್ಲೇ ತಲ್ಲೀನಳಾಗಿದ್ದಾಳಲ್ಲ. ಏನು ಕೇಳಿದರೂ ಮಾತೇ ಆಡುವುದಿಲ್ಲ, ಯಾಕೆ?’ ಎಂದು ಕೇಳಿದ.
ಮಾಂಜಿಯ ಚಿಕ್ಕಮ್ಮನಿಗೆ ಅವಳನ್ನು ಶಾಶ್ವತವಾಗಿ ಮನೆಯಿಂದ ಓಡಿಸಲು ಇದು ಸದವಕಾಶ ಎಂದು ಅರ್ಥವಾಯಿತು. “ಅಯ್ಯೋ ಅವಳು ತುಂಬ ಒಳ್ಳೆಯ ಹುಡುಗಿ. ಸೌಂದರ್ಯ ಮಾತ್ರ ಅವಳಲ್ಲಿ ಇರುವುದಲ್ಲ, ವಿಶೇಷ ಶಕ್ತಿಯೂ ಇದೆ. ಅವಳು ಸುಮ್ಮನೆ ಹುಲ್ಲು ಹೊಸೆಯುತ್ತಾಳೆಂದು ಭಾವಿಸಿದೆಯಾ? ರಾತ್ರೆ ಬೆಳಗಾಗುವುದರೊಳಗೆ ಬೆಟ್ಟದಷ್ಟೆತ್ತರ ರಾಶಿ ಹಾಕಿದ ಹುಲ್ಲನ್ನೆಲ್ಲ ಬಂಗಾರದ ನೂಲನ್ನಾಗಿ ಬದಲಾಯಿಸಿ ಅದರಿಂದ ಚೆಲುವಾದ ಸೀರೆಯೊಂದನ್ನು ನೇಯುತ್ತಾಳೆ. ಈ ಸೀರೆ ಕೋಟಿ ವರಹಗಳಿಗೆ ಮಾರಾಟವಾಗುತ್ತದೆ. ಅವಳು ಮನೆಯಲ್ಲಿದ್ದರೆ ಸಾಕು, ತಾನಾಗಿ ಸಂಪತ್ತು ತುಂಬುತ್ತದೆ. ಅವಳನ್ನು ಕರೆದುಕೊಂಡು ಹೋಗಿ ಜಮೀನಾªರನ ಮುಂದೆ ನಿಲ್ಲಿಸು. ಅವಳಿಗೆ ಬಂಗಾರದ ನೂಲು ತೆಗೆಯುವ ಶಕ್ತಿ ಇದೆಯೋ ಎಂಬುದನ್ನು ಪರೀಕ್ಷಿಸಿ ನೋಡಲಿ. ಹೌದು ಅಂತ ಕಂಡುಬಂದರೆ ಮದುವೆಯಾಗಲಿ’ ಎಂದು ಹಸೀ ಸುಳ್ಳೊಂದನ್ನು ಹೇಳಿದಳು.
ಸೇವಕ ಹೆಂಗಸು ಹೇಳಿದ ಮಾತನ್ನು ನಂಬಿದ. ಮಾಂಜಿಯನ್ನು ಕರೆದುಕೊಂಡು ಜಮೀನಾªರನ ಮನೆಯತ್ತ ಹೊರಟ. ದಾರಿಯಲ್ಲಿ ಒಂದು ಕಾಡು ಇತ್ತು. ಅಲ್ಲಿ ಹೋಗುವಾಗ ಸೇವಕನಿಗೆ ಆಯಾಸದಿಂದ ನಿದ್ರೆ ಬಂತು. ಒಂದು ಮರದ ಕೆಳಗೆ ಮಲಗಿಕೊಂಡ. ಮಾಂಜಿ ತನ್ನ ದುರ್ದೆಸೆಗೆ ಮರುಗುತ್ತ ಕುಳಿತುಕೊಂಡಳು. ಆಗ ಯಾವುದೋ ಪಕ್ಷಿಯ ಆರ್ತನಾದ ಕೇಳಿಸಿತು. ಎದ್ದು ಹೋಗಿ ನೋಡಿದಾಗ ಒಂದು ಗಂಡು ನವಿಲು ಬೇಟೆಗಾರರು ಒಡ್ಡಿದ ಬಲೆಯಲ್ಲಿ ಸಿಲುಕಿ ಹೊರಬರಲು ಪ್ರಯತ್ನಿಸುತ್ತ ಇರುವುದು ಕಾಣಿಸಿತು. ಅವಳು ಕನಿಕರದಿಂದ ಬಲೆಯನ್ನು ಕತ್ತರಿಸಿ ನವಿಲನ್ನು ಬಿಡುಗಡೆ ಮಾಡಿದಳು. ನವಿಲು ಸುಮ್ಮನೆ ಹೋಗಲಿಲ್ಲ. ತನ್ನ ಒಂದು ಗರಿಯನ್ನು ಅವಳ ಮುಂದೆ ಉದುರಿಸಿತು. “ಈ ಗರಿಯನ್ನು ಜೋಪಾನವಾಗಿ ಇರಿಸಿಕೋ. ಕಷ್ಟ ಬಂದಾಗ ಅದನ್ನು ಒಂದು ಸಲ ಸವರು. ನಿನಗೆ ನೆರವಿನ ಬೆಳಕು ಕಾಣಿಸುತ್ತದೆ’ ಎಂದು ಹೇಳಿ ಹೊರಟುಹೋಯಿತು.
ಸೇವಕ ನಿದ್ರೆಯಿಂದ ಎಚ್ಚರಗೊಂಡ. ಮಾಂಜಿಯನ್ನು ಕರೆದುಕೊಂಡು ಅರಮನೆಗೆ ಬಂದ. ಅವಳ ಸೌಂದರ್ಯ ನೋಡಿ ಜಮೀನಾªರನ ಮಗನಿಗೆ ತುಂಬ ಸಂತೋಷವಾಯಿತು. ಆದರೆ ಸೇವಕ ಅವನನ್ನು ಬಳಿಗೆ ಕರೆದ. ಅವನ ಕಿವಿಯಲ್ಲಿ ಗುಟ್ಟಾಗಿ, “ಬಡವರ ಮನೆಯ ಹುಡುಗಿ. ಮದುವೆಯಾಗಲು ಅವಸರಿಸಬೇಡಿ. ಅವಳಿಗೆ ಒಂದು ವಿಶೇಷ ಕೌಶಲವಿದೆ. ಬೆಟ್ಟದಷ್ಟು ಎತ್ತರ ರಾಶಿ ಹಾಕಿದ ಒಣಹುಲ್ಲನ್ನು ರಾತ್ರೆ ಬೆಳಗಾಗುವುದರೊಳಗೆ ಬಂಗಾರದ ನೂಲನ್ನಾಗಿ ಬದಲಾಯಿಸುತ್ತಾಳಂತೆ. ಮೊದಲು ಬಂಗಾರದ ನೂಲನ್ನು ಮಾರಾಟ ಮಾಡಿ ಹಣ ಸಂಪಾದಿಸಿಕೊಳ್ಳಿ. ಮತ್ತೆ ಅವಳನ್ನು ಮದುವೆಯಾಗಲು ಯೋಚಿಸಿ’ ಎಂದು ಹೇಳಿದ. ಬಂಗಾರವೆಂದ ಕೂಡಲೇ ಜಮೀನಾªರನ ಮಗನಿಗೆ ನಾಲಿಗೆಯಲ್ಲಿ ನೀರೂರಿತು. ಮನೆಯ ಕೊಣೆಯೊಳಗೆ ಒಣ ಹುಲ್ಲಿನ ದೊಡ್ಡ ರಾಶಿ ಪೇರಿಸಿದ. ಮಾಂಜಿಯನ್ನು ಕರೆದ. “ಕೋಣೆಯೊಳಗೆ ಹೋಗು. ರಾತ್ರೆ ಕಳೆಯವುದರೊಳಗೆ ಹುಲ್ಲನ್ನೆಲ್ಲ ಬಂಗಾರದ ಎಳೆಗಳನ್ನಾಗಿ ಬದಲಾಯಿಸು. ಈ ಪರೀಕ್ಷೆಯಲ್ಲಿ ಗೆದ್ದರೆ ನೀನು ಈ ಮನೆಯ ಸೊಸೆಯಾಗುವೆ. ತಪ್ಪಿದರೆ ಶಿಕ್ಷೆ ಅನುಭವಿಸುವೆ’ ಎಂದು ಹೇಳಿ ಅವಳನ್ನು ಒಳಗೆ ಕಳುಹಿಸಿ ಕೋಣೆಯ ಬಾಗಿಲು ಭದ್ರಪಡಿಸಿದ.
ಒಳಗೆ ಕುಳಿತಿದ್ದ ಮಾಂಜಿಗೆ ಕಳವಳವುಂಟಾಯಿತು. ಚಿಕ್ಕಮ್ಮ ಹೇಳಿದ ಸುಳ್ಳಿನಿಂದ ತಾನೀಗ ಬಂಗಾರದ ನೂಲು ತೆಗೆಯುವ ಶಿಕ್ಷೆಗೆ ಗುರಿಯಾಗಿರುವುದು ಅವಳಿಗೆ ಅರ್ಥವಾಯಿತು. ಆಗ ನವಿಲು ಕೊಟ್ಟ ಗರಿಯ ನೆನಪು ಬಂದಿತು. ಅದನ್ನು ಸವರಿ, ನವಿಲನ್ನು ಸ್ಮರಿಸಿಕೊಂಡಳು. ಮರುಕ್ಷಣವೇ ನೆಲದವರೆಗೆ ಬಿಳಿಯ ಗಡ್ಡವಿರುವ ಒಬ್ಬ ಮುದುಕ ಅವಳೆದುರು ಕಾಣಿಸಿಕೊಂಡ. “ನಿನಗೆ ಬಂದಿರುವ ಕಷ್ಟ ಏನೆಂಬುದು ನನಗೆ ಗೊತ್ತಿದೆ. ಇಷ್ಟು ಹುಲ್ಲನ್ನು ಬಂಗಾರದ ನೂಲನ್ನಾಗಿ ಬದಲಾಯಿಸಿ ಕೊಡುತ್ತೇನೆ. ಅದಕ್ಕಾಗಿ ನಾನು ಏನು ಕೇಳಿದರೂ ಕೊಡುತ್ತೀಯಾ?’ ಎಂದು ಕೇಳಿದ. ಮಾಂಜಿ ಕಣ್ಣೀರು ತುಂಬಿ ಅವನಿಗೆ ಕೈ ಮುಗಿದಳು. “ಖಂಡಿತ ಕೊಡುತ್ತೇನೆ. ನನಗೆ ಬಂದ ಕಷ್ಟವನ್ನು ಪರಿಹರಿಸು’ ಎಂದು ಹೇಳಿದಳು. ತಕ್ಷಣ ಮುದುಕ ಹುಲ್ಲನ್ನೆಲ್ಲ ಕೈಯಿಂದ ಸ್ಪರ್ಶಿಸಿ ಬಂಗಾರದ ನೂಲುಗಳಾಗಿ ಮಾರ್ಪಡಿಸಿದ. ಬೆಳಗಾಯಿತು. ಜಮೀನಾªರನ ಮಗ ಕೋಣೆಯ ಕದ ತೆರೆದ. ಚಿನ್ನದ ನೂಲಿನ ರಾಶಿ ನೋಡಿ ಅಚ್ಚರಿಯಿಂದ ಕುಣಿದಾಡಿದ. “ಬಾ, ನಾವಿಬ್ಬರೂ ಮದುವೆಯಾಗೋಣ’ ಎಂದು ಹೇಳಿದ.
ಆಗ ಮಾಂಜಿಗೆ ಉಪಕಾರ ಮಾಡಿದ ಮುದುಕ ಪ್ರತ್ಯಕ್ಷನಾದ. “ನಾನು ಏನು ಕೇಳಿದರೂ ಕೊಡುವುದಾಗಿ ಒಪ್ಪಿಕೊಂಡ ನೀನು ನನ್ನನ್ನು ಮದುವೆಯಾಗಬೇಕು’ ಎಂದು ಹೇಳಿದ. ಮಾಂಜಿ, “ನನಗೆ ಸಹಾಯ ಮಾಡಿದ ನೀವು ದೇವರಿಗಿಂತ ದೊಡ್ಡವರು. ನಾನು ನಿಮ್ಮ ಮಡದಿಯಾಗುತ್ತೇನೆ’ ಎಂದು ಹೇಳಿ ಅವನ ಕೈ ಹಿಡಿದುಕೊಂಡಳು. ಆಗ ಮುದುಕ ಒಬ್ಬ ಸುಂದರ ರಾಜಕುಮಾರನಾಗಿ ಬದಲಾಯಿಸಿದ.
“ನಾನು ಈ ದೇಶದ ಯುವರಾಜ. ಒಂದು ಸಲ ನವಿಲುಗಳಿಗೆ ಹಿಂಸೆ ಕೊಟ್ಟು ಕೊಂದುಹಾಕಿದೆ. ಆಗ ಪಕ್ಷಿಗಳ ರಾಣಿ ನನ್ನ ಯೌವನವನ್ನು ಕಸಿದುಕೊಂಡು ಮುದುಕನನ್ನಾಗಿ ಮಾಡಿದಳು. ಅವಳ ಕಾಲು ಹಿಡಿದುಕೊಂಡು ಕ್ಷಮೆ ಬೇಡಿದೆ. ಅವಳು ಸುಂದರ ಯುವತಿಯೊಬ್ಬಳು ಮನ ಮೆಚ್ಚಿ ನನ್ನ ಕೈ ಹಿಡಿದರೆ ಮೊದಲಿನಂತಾಗುವುದಾಗಿ ಹೇಳಿದಳು. ನನಗೆ ಹುಲ್ಲನ್ನು ನೂಲುಗಳಾಗಿ ಬದಲಾಯಿಸಬಲ್ಲ ಶಕ್ತಿ ನೀಡಿ, ವೃದ್ಧಾಪ್ಯದಿಂದ ಪಾರಾಗಲು ನೆರವಾದವಳು ಪಕ್ಷಿಗಳ ರಾಣಿ. ಬಾ, ನನಗೆ ಹೊಸ ಜನ್ಮ ನೀಡಿದ ನೀನು ನನ್ನ ರಾಣಿಯಾಗಿರು’ ಎಂದು ಹೇಳಿ ರಾಜಕುಮಾರ ಅವಳನ್ನು ಅರಮನೆಗೆ ಕರೆದುಕೊಂಡು ಹೋದ.
ಪ. ರಾಮಕೃಷ್ಣ ಶಾಸ್ತ್ರಿ