ಕೊಹಿಮಾ : ನ್ಯಾಶನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN-K ) ಇದರ ಖಾಪ್‌ಲಾಂಗ್ ಬಣ ರಾಷ್ಟ್ರೀಯತೆಯ ವಿಚಾರವಾಗಿ ಹೋಳಾಗುವ ಸಾಧ್ಯತೆಗಳು ತೋರಿ ಬರುತ್ತಿದ್ದು ಇದರಿಂದಾಗಿ ಬಹುಕಾಲದಿಂದ ಕಾಡುತ್ತಿರುವ ಕಗ್ಗಂಟಿನ ನಾಗಾ ಸಮಸ್ಯೆ ಬೇಗನೆ ಪರಿಹಾರವಾಗುವ ಆಶಾಕಿರಣ ಕಂಡು ಬಂದಿದೆ. ಪರಿಣಾಮವಾಗಿ ಈಶಾನ್ಯದಲ್ಲಿ ಶಾಶ್ವತ ಶಾಂತಿ ನೆಲೆಸುವ ಸಾಧ್ಯತೆಗಳು ಉಜ್ವಲವಾಗಿವೆ.
NSCN-K ಇದರ ಬಣದ ಬಹುಪಾಲು ಸದಸ್ಯರಿಗೆ ಅಧ್ಯಕ್ಷ ಖಾಂಗೋ ಕೊನ್ಯಾಕ್ ಅವರ ವಿರುದ್ಧ ಈಚೆಗೆ ಕೈಗೊಳ್ಳಲಾದ ವಾಗ್ಧಂಡನೆ ಕ್ರಮದಿಂದ ಅಸಮಾಧಾನ ಉಂಟಾಗಿದೆ. ಪರಿಣಾಮವಾಗಿ ಭಾರತೀಯ ಮತ್ತು ಮ್ಯಾನ್ಮಾರ್ ಮೂಲದ ನಾಯಕರಲ್ಲಿ ಸಂಪೂರ್ಣ ಪ್ರತ್ಯೇಕತೆಯನ್ನು ಉಂಟುಮಾಡಿದೆ.
ಈ ವಿದ್ಯಮಾನದಿಂದಾಗಿ ಈ ವರೆಗೂ ಮಾತುಕತೆಯಿಂದ ಹೊರಗುಳಿದಿದ್ದ ಎನ್‌ಎಸ್‌ಸಿಎನ್-ಕೆ ಬಣ ಈಗಿನ್ನು ಭಾರತ ಸರಕಾರದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗುವ ಸಾಧ್ಯತೆ ತೋರಿ ಬಂದಿದೆ.
ಎನ್‌ಎಸ್‌ಸಿಎನ್-ಕೆ ಕಳೆದ ಆಗಸ್ಟ್ 17ರಂದು ತನ್ನ ಅಧ್ಯಕ್ಷ ಖಾಂಗೋ ಕೊನ್ಯಾಕ್ ವಿರುದ್ಧ ಮಹಾಭಿಯೋಗವನ್ನು ಕೈಗೊಂಡಿತ್ತು. ಪರಿಣಾಮವಾಗಿ ಖಾಂಗೋ ಅವರ ಸ್ಥಾನಕ್ಕೆ 45ರ ಹರೆಯದ ಯುಂಗ್ ಆಂಗ್ ಅವರನ್ನು ಹೊಸ ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಖಾಂಗೋ ಅವರು ಭಾರತದಲ್ಲಿನ ನಾಗಾ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಆಂಗ್ ಅವರು ಎನ್‌ಎಸ್‌ಸಿಎನ್-ಕೆ ಸ್ಥಾಪಕ ದಿ. ಎಸ್ ಎಸ್ ಖಾಪ್‌ಲಾಂಗ್ ಅವರ ಸೋದರ ಸಂಬಂಧಿಯೂ ಮ್ಯಾನ್ಮಾರ್ ನ ಹೇಮಿ ನಾಗಾ ಸಮುದಾಯದವರೂ ಆಗಿದ್ದಾರೆ.
ಆಂಗ್ ಅವರು ತನ್ನ ಶಿಕ್ಷಣವನ್ನು ಮಣಿಪುರದಲ್ಲಿ ನಡೆಸಿದ್ದರು ಮತ್ತು ಸಮರ ಕಲೆ ಮತ್ತು ಪೋಲೋ ಪರಿಣತರೆಂದು ಖ್ಯಾತಿವೆತ್ತವವರು.