Advertisement

ಈಶಾನ್ಯ ಸಾರಿಗೆ ರಜೆ ಮಂಜೂರಿ ಬಯೋಮೆಟ್ರಿಕ್‌ಗೆ ತಿಲಾಂಜಲಿ

07:00 AM Jun 08, 2020 | Suhan S |

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಬಸ್‌ ನಿರ್ವಾಹಕರು-ಚಾಲಕರು ಮತ್ತು ಮೆಕ್ಯಾನಿಕ್‌ ಗಳ ರಜೆಗಾಗಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿಗೆ ತರಲಾಗಿದ್ದ ಬಯೋಮೆಟ್ರಿಕ್‌ ವ್ಯವಸ್ಥೆಗೆ ತಿಲಾಂಜಲಿ ನೀಡಲಾಗಿದೆ.

Advertisement

2013ರಲ್ಲಿ ಆಗ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ ಜಿ.ಎನ್‌. ಶಿವಮೂರ್ತಿ ಆಸಕ್ತಿ ಮೇರೆಗೆ ಈ ರಜೆ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದಕ್ಕಿಂತ ಮುಂಚೆ ರಜೆಗಾಗಿ ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಾಗಿತ್ತು. ನಂತರ ಬಯೋಮೆಟ್ರಿಕ್‌ ನಿಂದಾಗಿ ಈ ವ್ಯವಸ್ಥೆ ಬದಲಾಗಿತ್ತು. ಆದರೀಗ ಬಯೋಮೆಟ್ರಿಕ್‌ಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದ್ದು, ಮತ್ತೆ ದಶಕದ ಹಿಂದಿನ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ.

ಈ ವ್ಯವಸ್ಥೆಯಿಂದ ಸಿಬ್ಬಂದಿ ರಜೆ ಪಡೆಯುವಲ್ಲಿ ತಾರತಮ್ಯವಾಗುತ್ತಿದ್ದು, ಲಂಚ ಕೊಟ್ಟವರಿಗೆ ರಜೆ ಎನ್ನುವಂತಾಗಿದೆ. ಈ ನಡುವೆ ಬಯೋಮೆಟ್ರಿಕ್‌ ಆಧಾರದ ಮೇಲೆ ಮತ್ತೂಂದು ವ್ಯವಸ್ಥೆ ಜಾರಿ ತರಲಾಗಿತ್ತು. ಅದನ್ನು ಸಹ ಕೈಬಿಡಲಾಗಿದ್ದು, ಮ್ಯಾನುವೆಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ.

ಎನ್‌ಇಕೆಆರ್‌ಟಿಸಿಯಲ್ಲಿ ಸಿಬ್ಬಂದಿ ಅನುಕೂಲಕ್ಕಾಗಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ತಂದಿದ್ದರಿಂದ ಆಗ ಸಂಸ್ಥೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿತ್ತು. ಸಂಸ್ಥೆಯಲ್ಲಿ ಒಂದು ಕೇಂದ್ರ ಕಚೇರಿ, ಒಂಭತ್ತು ವಿಭಾಗಗಳು ಇವೆ. 22 ಸಾವಿರ ನೌಕರರು ಇದ್ದಾರೆ. ಹೀಗಿದ್ದರೂ ಸಂಸ್ಥೆ ಸುಧಾರಣೆಯತ್ತ ಹೆಜ್ಜೆ ಇಡದೇ, ಹಿಂದಿನ ವ್ಯವಸ್ಥೆಗೆ ಹೋಗಿರುವುದು ವಿಪರ್ಯಾಸವಾಗಿದೆ.

ನೆರೆ ರಾಜ್ಯದಿಂದ ಬಸ್‌ ಖರೀದಿ: ಸಂಸ್ಥೆಯಡಿ ಎರಡು ಪ್ರಾದೇಶಿಕ ಕಾರ್ಯಾಗಾರಗಳಿವೆ. ಏಳು ವರ್ಷಗಳ ಹಿಂದೆ ಸ್ಲಿàಪರ್‌ ಬಸ್‌ಗಳನ್ನು ಈ ಕಾರ್ಯಾಗಾರದಲ್ಲಿಯೇ ತಯಾರಿಸಲಾಗಿತ್ತು. ಆದರೀಗ ಸಂಸ್ಥೆ ಹೊಸ ಬಸ್‌ಗಳನ್ನು ಪಕ್ಕದ ತೆಲಂಗಾಣದ ಸಂಸ್ಥೆಯೊಂದರಿಂದ ಪಡೆಯುತ್ತಿದೆ. ಇದು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಬಸ್‌ಗಳನ್ನು ಸಂಸ್ಥೆಯಡಿಯೇ ತಯಾರಿಸಿದರೆ ನಷ್ಟ ತಗ್ಗಿಸಬಹುದು. ಆದರೆ ಈ ಕುರಿತು ಹಿರಿಯ ಅಧಿಕಾರಿಗಳಾÂರೂ ಆಸಕ್ತಿ ವಹಿಸುತ್ತಿಲ್ಲ.

Advertisement

ವಿಲೇವಾರಿಯಾಗದ ಬಸ್‌: ಸಂಸ್ಥೆಯ ಯಾದಗಿರಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ನೂರಾರು ಹೆಚ್ಚು ನಿರುಪಯುಕ್ತ ಬಸ್‌ಗಳನ್ನು ವಿಲೇವಾರಿ ಮಾಡದೇ ಹಾಗೆ ಬಿಡಲಾಗಿದೆ. ಒಂದು ವೇಳೆ ಈ ಬಸ್‌ಗಳನ್ನೆಲ್ಲ ವಿಲೇವಾರಿ ಮಾಡಿದರೆ ಸಂಸ್ಥೆಗೆ 50ರಿಂದ 60 ಕೋಟಿ ರೂ. ಹಣ ಬರುವ ಸಾಧ್ಯತೆ  ಇದೆ. ಈ ಹಣ ಬಂದಲ್ಲಿ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಕೊಡಲು ಸಾಧ್ಯವಾಗುತ್ತದೆ. ಇದರತ್ತ ಸಂಸ್ಥೆಯ ಮುಖ್ಯಸ್ಥರು ಗಮನ ಹರಿಸಿಲ್ಲ.

ತೆರಿಗೆ ವಿನಾಯಿತಿ: ಈ ಹಿಂದೆ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎನ್‌ಇಕೆಆರ್‌ಟಿಸಿ ಹಾಗೂ ವಾಯವ್ಯ ಕರ್ನಾಟಕ ಸಂಸ್ಥೆಗೆ ವಾಹನ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಅದನ್ನು ಕೆಲವು ವರ್ಷಗಳ ಕಾಲ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ ಕಳೆದ ಐದಾರು ವರ್ಷಗಳಿಂದ ಈ ವಿನಾಯ್ತಿ ಕೈ ಬಿಡಲಾಗಿದೆ. ಈಗ ಮತ್ತೆ ಕಾರ್ಯರೂಪಕ್ಕೆ ತರುವ ಮುಖಾಂತರ ಸಂಸ್ಥೆಯ ಬಲವರ್ಧನೆ ಗೊಳಿಸಬೇಕೆಂಬ ಮಾತು ಕೇಳಿಬರುತ್ತಿದೆ.

ಕಲಬುರಗಿಗೆ ಇಂದು ಸಾರಿಗೆ ಸಚಿವರು :  ಉಪ ಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಜೂನ್‌ 8ರಂದು ಕಲಬುರಗಿಗೆ ಆಗಮಿಸಿ, ಎನ್‌ಇಕೆಆರ್‌ ಟಿಸಿ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಈ ಸಂದರ್ಭ ಸಚಿವರು ರಜೆ ಮಂಜೂರಾತಿಯ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರುವುದು, ಬಸ್‌ಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವರೇ ಎನ್ನುವುದನ್ನು ಕಾಯ್ದುನೋಡಬೇಕಿದೆ.

 

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next