Advertisement

ಇವು…ಈಶಾನ್ಯ ಭಾರತದಲ್ಲಿ ಭೇಟಿ ನೀಡಬಹುದಾದ ಹತ್ತು ಮನಮೋಹಕ ಪ್ರವಾಸಿ ತಾಣಗಳು…

04:19 PM Oct 08, 2022 | ಸುಧೀರ್ |

ನೀವು ದೇಶದ ಯಾವುದೇ ಮೂಲೆಗೆ ಹೋದರೂ ಪ್ರವಾಸಿ ತಾಣಗಳಿಗೇನೂ ಕೊರತೆ ಇಲ್ಲ, ಈಗಿನ ಜನರಿಗೆ ಬೇಕಿರುವುದು ಕೂಡಾ ಅದುವೇ, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ಸ್ಥಳಗಳನ್ನು ಹುಡುಕುವುದು, ದೇಶ ಸುತ್ತುವುದು ಹೊಸ ಹೊಸ ಸ್ಥಳಗಳನ್ನು ಅನ್ವೇಷಣೆ ಮಾಡುವುದು,  ಅಲ್ಲಿನ ಕಲೆ ಸಂಸ್ಕೃತಿ ಜನರ ಆಚಾರ ವಿಚಾರ, ಉಡುಗೆ ತೊಡುಗೆ, ಆಹಾರ ಪದ್ಧತಿ ಇವುಗಳನ್ನೆಲ್ಲ ತಿಳಿದುಕೊಳ್ಳುವುದು ಜೊತೆಗೆ ಆ ಮಾಹಿತಿಯನ್ನು ಇತರರಿಗೆ ಹಂಚಿಕೊಳ್ಳುವುದು ನಾವು ಸದಾ ಕಾಣುತ್ತೇವೆ.

Advertisement

ಅದರಂತೆ ನಾವು ಇಂದು ಈಶಾನ್ಯ ಭಾರತದ ರಾಜ್ಯದಲ್ಲಿರುವ ಹಲವು ಪ್ರವಾಸಿ ತಾಣಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ, ಅಂದಹಾಗೆ ಈಶಾನ್ಯ ಭಾರತವನ್ನು ಭಾರತದ ಏಳು ಸೋದರಿ ರಾಜ್ಯಗಳು (ಸೆವೆನ್ ಸಿಸ್ಟರ್ ಸ್ಟೇಟ್ಸ್ ಆಫ್ ಇಂಡಿಯಾ) ಎಂದು ಕರೆಯುತ್ತಾರೆ. ಅವುಗಳೆಂದರೆ; ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ,ಅಸ್ಸಾಂ, ನಾಗಾಲ್ಯಾಂಡ್, ಮತ್ತು ತ್ರಿಪುರ. ಈ ಏಳು ರಾಜ್ಯಗಳು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ, ಆ ಏಳು ರಾಜ್ಯಗಳ ಹೆಸರುಗಳೇ ಅಷ್ಟೊಂದು ಅದ್ಭುತವಾಗಿದ್ದರೆ ಅಲ್ಲಿನ ಪ್ರವಾಸಿ ತಾಣಗಳು ಇನ್ನೆಷ್ಟು ಸುಂದರವಾಗಿರಲಿಕ್ಕಿಲ್ಲ ಹೇಳಿ… ಈಶಾನ್ಯ ಭಾರತದಲ್ಲಿ ಪ್ರವಾಸಿ ತಾಣಗಳ ಪಟ್ಟಿ ಮಾಡಲು ಹೊರಟರೆ ಮುಗಿಯದಷ್ಟು ಇವೆ ಆದರೆ ಅದರಲ್ಲಿ ಪ್ರಮುಖವಾದ ಪ್ರವಾಸಿ ತಾಣಗಳ ಕಿರು ಮಾಹಿತಿ ಇಲ್ಲಿದೆ…

1. ತವಾಂಗ್, (ಅರುಣಾಚಲ ಪ್ರದೇಶ)
ಅರುಣಾಚಲ ಪ್ರದೇಶದಲ್ಲಿ ನೆಲೆಗೊಂಡಿರುವ ತವಾಂಗ್ ಸುಮಾರು 3048 ಮೀಟರ್ ಎತ್ತರದಲ್ಲಿದೆ ಜೊತೆಗೆ ಈಶಾನ್ಯ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಹಲವಾರು ಪ್ರಾಚೀನ ಮಠಗಳಿವೆ, ಇನ್ನೊಂದು ಪ್ರಮುಖ ಅಂಶವೆಂದರೆ ಇದು ದಲೈ ಲಾಮಾ ಅವರ ಜನ್ಮಸ್ಥಳ! ಬೌದ್ಧಧರ್ಮದ ಅನೇಕ ಅನುಯಾಯಿಗಳನ್ನು ಇಲ್ಲಿ ಕಾಣಬಹುದು. ಧಾರ್ಮಿಕ ಸ್ಥಳದ ಜೊತೆಗೆ ದಟ್ಟ ಅರಣ್ಯ ಪ್ರದೇಶಗಳು ಇಲ್ಲಿವೆ ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ.

2. ನಾಂಗ್ರಿಯಾಟ್, ರಿವಾಯ್ (ಮೇಘಾಲಯ)
ಈಶಾನ್ಯ ಭಾರತದ ಸುಂದರ ರಾಜ್ಯಗಳಲ್ಲಿ ಮೇಘಾಲಯ ಕೂಡಾ ಒಂದು. ಅದ್ಭುತ ಪ್ರಾಕೃತಿಕ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಮೇಘಾಲಯ ಪ್ರವಾಸೋದ್ಯಮದ ವಿಷಯದಲ್ಲೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸಾಕಷ್ಟು ಅಪೂರ್ವ ತಾಣಗಳು ಇಲ್ಲಿವೆ. ಇದೇ ಕಾರಣದಿಂದ ಸಾಕಷ್ಟು ಪ್ರವಾಸಿಗರು ಮೇಘಾಲಯಕ್ಕೆ ಭೇಟಿ ನೀಡುತ್ತಾರೆ.

ಮೇಘಾಲಯದ ಮೋಡಿ ಮಾಡುವ ಗ್ರಾಮಗಳಲ್ಲಿ ಒಂದು ರಿವಾಯ್. ಈ ಗ್ರಾಮ ತನ್ನ ವಿಶೇಷತೆಯಿಂದಲೇ ಪ್ರಮುಖ ಪ್ರವಾಸಿ ತಾಣವಾಗಿಯೂ ರೂಪುಗೊಂಡಿದೆ. ಈ ಗ್ರಾಮದ ವಿಶೇಷತೆಗಳು ಎಂದರೆ ಬೇರುಗಳಿಂದಲೇ ರೂಪುಗೊಂಡ ನೈಸರ್ಗಿಕ ಸೇತುವೆಗಳು…! ನೀರು ಹರಿಯುವ ಜಾಗದ ಇಕ್ಕೆಲಗಳಲ್ಲಿ ಗಟ್ಟಿಯಾದ ಬೇರುಗಳುಳ್ಳ ಮರಗಳನ್ನು ನೆಟ್ಟು ನೈಸರ್ಗಿಕ ಸೇತುವೆಯನ್ನು ಹೆಣೆಯುವ ಕಲೆಯನ್ನು ಇಲ್ಲಿನ ಜನ ಅರಿತುಕೊಂಡಿದ್ದರು.

Advertisement

ನಾಂಗ್ರಿಯಾಟ್ ಮೇಘಾಲಯದ ಅತ್ಯಂತ ಪ್ರಸಿದ್ಧ ಹಳ್ಳಿ. ಇಲ್ಲೂ ನೀವು ಮರದ ಬೇರಿನ ಸುಂದರ ಸೇತುವೆಗಳನ್ನು ನೋಡಬಹುದು. ಪ್ರಪಂಚದ ಏಕೈಕ ಡಬಲ್ ಡೆಕ್ಕರ್ ಲಿವಿಂಗ್ ರೂಟ್ ಬ್ರಿಡ್ಜ್‌ಗಳಿಗೆ ಇದು ನೆಲೆಯಾಗಿದೆ. ಇದೇ ಕಾರಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

3. ಪೈನುರ್ಸ್ಲಾ (ಮೇಘಾಲಯ)
ಮೇಘಾಲಯದ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಪೈನುರ್ಸ್ಲಾಗೆ ಬರಬೇಕು. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಒಂದು ಸುಂದರ ಪ್ರದೇಶವಿದು. ಇನ್ನು `ಮೇಘಾಲಯದ ಸ್ವಿಟ್ಜರ್ಲೆಂಡ್’ ಎಂದೂ ಕರೆಯಲಾಗುತ್ತದೆ. ಇಲ್ಲಿನ ನೈಸರ್ಗಿಕ ಸಿರಿ ನಮ್ಮನ್ನು ತನ್ಮಯರನ್ನಾಗಿಸದೇ ಇರದು. ಈ ಗ್ರಾಮ ಸುಂದರ ಸರೋವರ, ಜಲಪಾತಗಳು ಮತ್ತು ಗುಹೆಗಳಿಗೆ ಹೆಸರುವಾಸಿ. ಇಲ್ಲಿನ ಸುಂದರ ಕಾಡುಗಳು, ಹುಲ್ಲುಗಾವಲು, ಸರೋವರಗಳು ಇಲ್ಲಿನ ಸೌಂದರ್ಯದ ಗರಿಗಳು. ಜಂಗಲ್ ಕ್ಯಾಂಪಿಂಗ್ ಟ್ರಿಪ್, ಜಲಪಾತಗಳ ವೀಕ್ಷಣೆಗೆ ಇದು ಹೇಳಿ ಮಾಡಿಸಿದಂತಹ ತಾಣವಾಗಿದೆ.

4. ಮಜುಲಿ, (ಅಸ್ಸಾಂ)
ನಗರ ಜೀವನದ ಜಂಜಾಟದಿಂದ ದೂರವಿರಲು ಬಯಸುವವರು ಮಜುಲಿ ಬರುವುದು ಉತ್ತಮ. ಸೊಂಪಾದ ಹಸಿರು ಮತ್ತು ಸಿಹಿನೀರಿನ ದ್ವೀಪದಿಂದ ಆವೃತವಾದ ಮಜುಲಿ ಸ್ವಚ್ಛ ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿದೆ. ಬ್ರಹ್ಮಪುತ್ರ ನದಿಯ ಮಡಿಲಲ್ಲಿ ನೆಲೆಗೊಂಡಿರುವ ಮಜುಲಿ 880 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಮಾಲಿನ್ಯ ಮುಕ್ತ ನೈಸರ್ಗಿಕ ಧಾಮವಾಗಿದ್ದು, ಇದು ವಿಶ್ವದ ಅತಿದೊಡ್ಡ ನದಿ ದ್ವೀಪವಾಗಿದೆ.

5. ಲುಂಗ್ಲೆ (ಮಿಜೋರಾಂ)
ಲುಂಗ್ಲೆ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರಿಯರು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದವರಾಗಿದ್ದರೆ ಅಂಥವರಿಗೆ ಇದು ಅತ್ಯುತ್ತಮ ತಾಣವಾಗಿದೆ. ಚಾರಣ, ಪಕ್ಷಿ ವೀಕ್ಷಣೆ ಮತ್ತು ಸಾಹಸ ಕ್ರೀಡೆಗಳನ್ನು ಆನಂದಿಸಲು ಪ್ರವಾಸಿಗರು ಆಗಾಗ್ಗೆ ಲುಂಗ್ಲೆಗೆ ಬರುತ್ತಾರೆ. ಈ ಪಟ್ಟಣವು ಮಿಜೋರಾಂ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಈ ಪ್ರದೇಶವು ವಿಶಿಷ್ಟ ಪ್ರವಾಸಿ ಆಕರ್ಷಣೆಯನ್ನು ಹೊಂದಿದ್ದು, ನೈಸರ್ಗಿಕ ಸೌಂದರ್ಯ, ತಂಪಾದ ಹವಾಮಾನ, ರಮಣೀಯ ನೋಟ ಇದನ್ನು ಜನಪ್ರಿಯ ಪ್ರವಾಸಿ ತಾಣವಾಗಿ ರೂಪಿಸಿವೆ. ಹಾಗೆಯೇ ಐಜ್ವಾಲ್‌ ನಗರಕ್ಕೆ ಹತ್ತಿರದಲ್ಲಿರುವುದರಿಂದ ಈ ಪಟ್ಟಣವೂ ಪ್ರಸಿದ್ಧವಾಗಿದೆ.

6. ಚಂಪೈ- ಮಾಮಿತ್ (ಮಿಜೋರಾಂ)
ಮಿಜೋರಾಂನ ಸರಳವಾದ ಪಟ್ಟಣ ಚಂಪೈ ಇದು ಸುಂದರವಾದ ಬೆಟ್ಟಗಳನ್ನು ಹೊಂದಿರುವುದರ ಜೊತೆಗೆ ಹಲವಾರು ಪ್ರವಾಸಿ ಆಕರ್ಷಣೆಯನ್ನು ಕೂಡಾ ಹೊಂದಿದೆ. ಇವುಗಳಲ್ಲಿ ಕುಂಗಾವ್ರಿ ಪುಕ್ ಎಂಬ ಗುಹೆ, ಟಿಯಾವ್ ಲುಯಿ ಎಂಬ ನದಿ, ರಿಹ್ ದಿಲ್ ಸರೋವರ, ಲಿಯಾಂಚಿಯಾರಿ ಲುಂಗ್ಲೆನ್ ಟ್ಯಾಂಗ್ ಮತ್ತು ಇನ್ನೂ ಕೆಲವು ಸೇರಿವೆ. ಬೇಕಾದರೆ ಥಾಸಿಯಾಮಾ ಸೆನೋ ನೀಹ್ನಾದಲ್ಲಿ ಚಾರಣ ಕೈಗೊಳ್ಳಬಹುದು. ಇನ್ನು ಮಾಮಿತ್ ಜಿಲ್ಲೆಯು ಮಿಜೋರಾಂ ರಾಜ್ಯದ ನಾಲ್ಕನೇ ಅತಿದೊಡ್ಡ ಜಿಲ್ಲೆಯಾಗಿದೆ. ಸುಂದರವಾದ ಸ್ಥಳಗಳು ಮತ್ತು ಭವ್ಯತೆಗೆ ಹೆಸರುವಾಸಿಯಾಗಿದೆ, ಮಿಜೋರಾಂಗೆ ಪ್ರವಾಸ ಕೈಗೊಂಡಾಗ ಈ ಸ್ಥಳಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ.

7. ಇಟಾ ಕೋಟೆ (ಅರುಣಾಚಲ ಪ್ರದೇಶ)
ಇಟಾ ಕೋಟೆ 15 ನೇ ಶತಮಾನದಷ್ಟು ಹಿಂದಿನದು ಇದನ್ನು ಇಟ್ಟಿಗೆಗಳ ಸಹಾಯದಿಂದ ನಿರ್ಮಿಸಲಾಗಿದೆ. ಇಟಾ ಕೋಟೆ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿದ್ದು, ನಡೆದಾಡಲು ಇಷ್ಟಪಡುವವರು ಇಲ್ಲಿಗೆ ತೆರಳಬಹುದು. ಈ ಪ್ರಾಚೀನ ಕೋಟೆಯಲ್ಲಿರುವ ಅನೇಕ ಪ್ರಾಚೀನ ಕಲಾಕೃತಿಗಳನ್ನು ಸ್ಥಳಾಂತರಿಸಲಾಗಿದ್ದು, ಅವುಗಳನ್ನು ಜವಾಹರಲಾಲ್ ನೆಹರು ಮ್ಯೂಸಿಯಂನಲ್ಲಿ ಅಂದವಾಗಿ ಪ್ರದರ್ಶಿಸಲಾಗಿದೆ. ಸಮೃದ್ಧ ಸಸ್ಯ ಸಂಗ್ರಹಕ್ಕೆ ಹೆಸರುವಾಸಿಯಾದ ಇಂದಿರಾ ಗಾಂಧಿ ಉದ್ಯಾನವನವು ಇಟಾ ಕೋಟೆಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ.

8. ಸಿಯಾಂಗ್ ರಿವರ್ ಫೆಸ್ಟಿವಲ್ , (ಅರುಣಾಚಲ ಪ್ರದೇಶ)
ಬ್ರಹ್ಮಪುತ್ರಾ ನದಿಯ ಭಾಗವಾಗಿರುವ ಅರುಣಾಚಲ ಪ್ರದೇಶದ ಸಿಯಾಂಗ್ ನದಿಯಲ್ಲಿ, ರಿವರ್ ರಾಫ್ಟಿಂಗ್ ನಂತಹ ಸಾಹಸಮಯ ವಾಟರ್ ಸ್ಪೋರ್ಟ್ಸ್ ಗಳನ್ನು ಆಡಲು ಮತ್ತು ಟ್ರೆಕ್ಕಿಂಗ್ ಇತ್ಯಾದಿಗಳನ್ನು ಮಾಡಲು ಇಲ್ಲಿ ಅವಕಾಶವಿದೆ. ಸಿಯಾಂಗ್ ರಿವರ್ ಫೆಸ್ಟಿವಲ್ ಅನ್ನು , ಯೊಮ್ಗೋ ರಿವರ್ ಫೆಸ್ಟಿವಲ್ ಎಂದು ಕೂಡ ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಈ ಉತ್ಸವವನ್ನು ಸಿಯಾಂಗ್ ನದಿಯ ಬಳಿ ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ, ನೀವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದು, ಆಹಾರ ಉತ್ಸವದಲ್ಲಿ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು, ವಿಭಿನ್ನ ಬಗೆಯ ಜಲ ಕ್ರೀಡೆ ಮತ್ತು ಆಟಗಳಲ್ಲಿ ಭಾಗವಹಿಸಬಹುದು. ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿರುವ ಆಲೋದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ.

9. ಲೋಕ್‌ಟಕ್ ಲೇಕ್ ಮತ್ತು ಸೆಂಡ್ರಾ ದ್ವೀಪ (ಮಣಿಪುರ)
ಇವು ಪ್ರವಾಸಿಗರು ನೋಡಲೇಬೇಕಾದ ಸ್ಥಳ. ಇಂಫಾಲದಿಂದ 48 ಕಿ.ಮೀ. ದೂರದಲ್ಲಿದೆ. ಸೆಂಡ್ರಾ ದ್ವೀಪವು ಲೋಕ್‌ಟಕ್ ಲೇಕ್‌ನ ಮಧ್ಯದಲ್ಲಿದ್ದು, ಗಗನ ಚುಂಬಿಸುವ ಎತ್ತರದ ಪರ್ವತಗಳು ಕಣ್ಮನ ಸೆಳೆಯುತ್ತವೆ. ನೀಲಿ ಬಣ್ಣದ ನೀರು ಹೊಳೆಯುತ್ತದೆ. ನಾನಾ ಸಸ್ಯ ಪ್ರಭೇದಗಳೂ ಇಲ್ಲಿವೆ. ದೋಣಿ ವಿಹಾರ ಮಾಡಲು ಉತ್ತಮ ಸ್ಥಳ.

10. ಕೊಹಿಮಾ (ನಾಗಾಲ್ಯಾಂಡ್)
ಕೊಹಿಮಾ ಪ್ರದೇಶ ಮಾನ್ ಜಿಲ್ಲೆಯಲ್ಲಿದೆ. ನಾಗಾಲ್ಯಾಂಡ್‍ನಲ್ಲಿ ಇದು ಉತ್ತಮವಾದ ಸ್ಥಳವಾಗಿದೆ, ಇಲ್ಲಿ ಬುಡಕಟ್ಟು ಜನರು ವಾಸಿಸುವ ಸ್ಥಳ ಸುಮಾರು ಸಾವಿರ ವರ್ಷಗಳ ಹಿಂದೆ ಇಲ್ಲಿ ತಮಿಳರು ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇದೊಂದು ವರ್ಣರಂಜಿತವಾದ ಪ್ರದೇಶವಾದ್ದರಿಂದ ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

11. ಚಬಿಮುರ…! (ತ್ರಿಪುರ )
ಇದು ತ್ರಿಪುರದಲ್ಲಿರುವ ಅಪೂರ್ವ ಮತ್ತು ಅಷ್ಟೇ ವಿಸ್ಮಯಕಾರಿ ಸ್ಥಳ. ಗೋಮತಿ ನದಿಯಲ್ಲಿ ಒಂದಷ್ಟು ದೂರ ಸಾಗಿದಾಗ ನದಿಗೆ ಅಂಟಿಕೊಂಟಿರುವ ಬೆಟ್ಟದ ಕಲ್ಲಿನಲ್ಲಿ ದೇವಾನುದೇವತೆಗಳ ರೂಪಗಳು ಕಾಣಿಸುತ್ತವೆ. ಪಂಚಶಕ್ತಿ ವೈಭವವಿದು. ಶಿವ, ವಿಷ್ಣು, ಪಾರ್ವತಿ, ಗಣೇಶ ಮತ್ತು ಕಾರ್ತಿಕೇಯ ದೇವರ ರೂಪಗಳನ್ನು ಇಲ್ಲಿ ನೋಡಬಹುದು. ಪುರಾತನ ಕಾಲದಲ್ಲಿ ಕೆತ್ತಿರುವ ಶಿಲ್ಪಗಳು ಇವುಗಳು. ಇಲ್ಲಿನ ಒಂದೊಂದು ಕೆತ್ತನೆಗಳೂ ಪರಮೇಶ್ವರನೊಂದಿಗೆ ಸಂಬಂಧ ಹೊಂದಿವೆ. ತ್ರಿಪುರ ರಾಜಧಾನಿ ಅಗರ್ತಲಾದಿಂದ 82 ಕಿಮೀ ದೂರದಲ್ಲಿ ಈ ದೇವಾನುದೇವತೆಗಳ ಕೆತ್ತನೆಯನ್ನು ನೋಡಬಹುದು.

– ಸುಧೀರ್ ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next