Advertisement

ಈಶಾನ್ಯ ಭಾರತದಲ್ಲಿ ಅಧಿಕಾರದ ಪದ್ಮಾಸನ

06:00 AM Mar 05, 2018 | |

ಶಿಲ್ಲಾಂಗ್‌/ಕೊಹಿಮಾ/ಅಗರ್ತಲಾ: ಪ್ರಧಾನಿ ಮೋದಿ ಅವರ ಲುಕ್‌ ಈಸ್ಟ್‌ ಪಾಲಿಸಿಯಂತೆಯೇ ಬಿಜೆಪಿ “ಈಶಾನ್ಯ ಹ್ಯಾಟ್ರಿಕ್‌’ ಸಾಧಿಸಿದೆ. ಶನಿವಾರ ಫ‌ಲಿತಾಂಶ ಪ್ರಕಟವಾದ ಮೂರೂ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆಯೇರುವಲ್ಲಿ ಕಮಲಪಕ್ಷ ಯಶಸ್ವಿಯಾಗಿದೆ.

Advertisement

ಮೇಘಾಲಯದಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಮತ್ತೆ ಎಡವಿದೆ. ಮಣಿಪುರ ಮತ್ತು ಗೋವಾದ ಮಾದರಿಯಲ್ಲೇ ಮೇಘಾಲಯದಲ್ಲೂ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಸಫ‌ಲವಾಗಿರುವ ಬಿಜೆಪಿ ನಾಯಕರು, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ(ಎನ್‌ಪಿಪಿ)ಯ ನೇತೃತ್ವದಲ್ಲಿ ಸರ್ಕಾರ ರಚಿಸುವತ್ತ ಹೆಜ್ಜೆಯಿಟ್ಟಿದ್ದಾರೆ. ಅದರಂತೆ, ಎನ್‌ಪಿಪಿ ರಾಷ್ಟ್ರೀಯ ಅಧ್ಯಕ್ಷ ಕೊನ್ರಾಡ್‌ ಸಂಗ್ಮಾ ಅವರು ಮೇಘಾಲಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

ಭಾನುವಾರ ಸಂಜೆ ರಾಜ್ಯಪಾಲ ಗಂಗಾಪ್ರಸಾದ್‌ ಅವರನ್ನು ಭೇಟಿಯಾದ ಸಂಗ್ಮಾ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ತಮ್ಮ ಬೆಂಬಲಿತ ಶಾಸಕರ ಪಟ್ಟಿಯನ್ನೂ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಹೀಗಾಗಿ, ಮತ್ತೂಂದು ರಾಜ್ಯವೂ ಕಾಂಗ್ರೆಸ್‌ನ ಕೈ ತಪ್ಪಿದೆ.

ದಿನವಿಡೀ ಹೈಡ್ರಾಮಾ: ಇದಕ್ಕೂ ಮುನ್ನ, ಭಾನುವಾರ ಬೆಳಗ್ಗಿನಿಂದಲೂ ಮೇಘಾಲಯದ ರಾಜಕೀಯ ವಲಯದಲ್ಲಿ ಹೈಡ್ರಾಮಾಗಳು ನಡೆದವು. 6 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಯುನೈಟೆಡ್‌ ಡೆಮಾಕ್ರಾಟಿಕ್‌ ಪಾರ್ಟಿ(ಯುಡಿಪಿ)ಯೇ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಹೀಗಾಗಿ, ಯುಡಿಪಿ ನಾಯಕ ದೋಂಕುಪಾರ್‌ ರಾಯ್‌ ಅವರ ಮನವೊಲಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಪೈಪೋಟಿ ನಡೆಸಿದರು. ಒಂದು ಹಂತದಲ್ಲಿ ಎರಡೂ ಪಕ್ಷಗಳ ನಾಯಕರು ರಾಯ್‌ ಮನೆಯಲ್ಲಿ ಮುಖಾಮುಖೀಯಾಗಿದ್ದೂ ಕಂಡುಬಂತು. ಆದರೆ, ಕಾಂಗ್ರೆಸ್‌ ಇಲ್ಲೂ ಸೋತಿತು. ಯುಡಿಪಿ ನಾಯಕರ ಮನವೊಲಿಸುವಲ್ಲಿ ಬಿಜೆಪಿ ನಾಯಕರಾದ ಕಿರಣ್‌ ರಿಜಿಜು, ಕೆ.ಜೆ. ಅಲೊ#àನ್ಸ್‌, ಹಿಮಾಂತ ಬಿಸ್ವಾ ಶರ್ಮ ಯಶಸ್ವಿಯಾದರು. ಮಾತುಕತೆ ಬಳಿಕ ಮಾತನಾಡಿದ ರಾಯ್‌, ಮೇಘಾಲಯದಲ್ಲಿ ಕಾಂಗ್ರೆಸೇತರ ಸರ್ಕಾರ ರಚಿಸುವ ಉದ್ದೇಶದಿಂದ ನಾವು ಎನ್‌ಪಿಪಿಗೆ ಬೆಂಬಲ ಘೋಷಿಸುತ್ತಿದ್ದೇವೆ ಎಂದರು.

ಕಳೆದ ವರ್ಷ ನಡೆದ ಗೋವಾ ಮತ್ತು ಮಣಿಪುರ ಚುನಾವಣೆಯಲ್ಲೂ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲ ಪಡೆದು ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿತ್ತು.

Advertisement

ನಾಗಾಲ್ಯಾಂಡ್‌ನ‌ಲ್ಲಿ ರಿಯೋ ಸರ್ಕಾರ
ಮತ್ತೂಂದು ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್‌ನ‌ಲ್ಲೂ ಬಿಜೆಪಿ ಬೆಂಬಲಿತ ಸರ್ಕಾರವೇ ಗದ್ದುಗೆಯೇರಲು ಸಿದ್ಧತೆ ನಡೆಸಿದೆ. 60 ಸದಸ್ಯಬಲದ ಅಸೆಂಬ್ಲಿಯಲ್ಲಿ 32 ಶಾಸಕರ ಬೆಂಬಲವನ್ನು ಹೊಂದಿರುವ ನ್ಯಾಷನಲ್‌ ಡೆಮಾಕ್ರಾಟಿಕ್‌ ಪ್ರೊಗ್ರೆಸ್ಸಿವ್‌ ಪಾರ್ಟಿ(ಎನ್‌ಡಿಪಿಪಿ) ನಾಯಕ ನೈಫ್ಯೂ ರಿಯೋ ಮುಖ್ಯಮಂತ್ರಿಯಾಗುವತ್ತ ಹೆಜ್ಜೆಯಿಟ್ಟಿದ್ದಾರೆ. ಭಾನುವಾರ ರಾಜ್ಯಪಾಲ ಪಿ.ಬಿ. ಆಚಾರ್ಯರನ್ನು ಭೇಟಿಯಾಗಿ, ರಿಯೋ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಬಳಿಕ ಮಾತನಾಡಿದ, ರಾಜ್ಯಪಾಲ ಆಚಾರ್ಯ ಅವರು, “ಸೋಮವಾರ ರಿಯೋ ತಮ್ಮ ಬೆಂಬಲಿತ 32 ಶಾಸಕರ ಸಹಿಗಳನ್ನು ಒಪ್ಪಿಸುತ್ತಾರೆ. ಅವರಿಗೆ ಬಹುಮತವಿರುವ ಕಾರಣ, ಅವರು ಸರ್ಕಾರ ರಚಿಸಲು ಅರ್ಹರಾಗಿರುತ್ತಾರೆ’ ಎಂದು ಹೇಳಿದ್ದಾರೆ. ಇಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಕ್ರಮವಾಗಿ 18 ಮತ್ತು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇನ್ನು ಜೆಡಿಯು ಮತ್ತು ಪಕ್ಷೇತರ ಶಾಸಕರಿಬ್ಬರು ಈ ಮಿತ್ರಕೂಟಕ್ಕೆ ಬೆಂಬಲ ಘೋಷಿಸಿವೆ.

ರಾಜೀನಾಮೆಗೆ ನಕಾರ: ಈ ನಡುವೆ, ನಾಗಾಲ್ಯಾಂಡ್‌ನ‌ ನಿರ್ಗಮಿತ ಸಿಎಂ ಟಿ.ಆರ್‌.ಝೆಲಿಯಾಂಗ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ತಾವು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಿ, ರಾಜ್ಯದಲ್ಲಿ ಹೆಚ್ಚು ಸ್ಥಿರ ಸರ್ಕಾರ ರಚನೆಗೆ ಯತ್ನಿಸುತ್ತೇನೆ ಎಂದಿದ್ದಾರೆ. ಝೆಲಿಯಾಂಗ್‌ ನೇತೃತ್ವದ ನಾಗಾ ಪೀಪಲ್ಸ್‌ ಫ್ರಂಟ್‌(ಎನ್‌ಪಿಎಫ್) 29 ಸ್ಥಾನಗಳಲ್ಲಿ ಜಯಗಳಿಸಿದೆ. ಎನ್‌ಪಿಎಫ್ನಲ್ಲೇ ಇದ್ದ ರಿಯೋ ಅವರು ಬೇರ್ಪಟ್ಟು, ಎನ್‌ಡಿಪಿಪಿ ಸ್ಥಾಪಿಸಿದ್ದರು. ಅವರು ಬಿಜೆಪಿ ಜತೆ ಸಖ್ಯ ಬೆಳೆಸಿ, ಹೊಸ ಸರ್ಕಾರ ರಚನೆಗೆ ಮುಂದಾಗಿರುವುದು ಝೆಲಿಯಾಂಗ್‌ಗೆ ತಲೆನೋವು ಉಂಟುಮಾಡಿದೆ.

ನಾಳೆ ತ್ರಿಪುರ ಸಿಎಂ ಆಯ್ಕೆ
ತ್ರಿಪುರದಲ್ಲಿ ಸಿಪಿಎಂ ಭದ್ರಕೋಟೆಯನ್ನು ಛಿದ್ರ ಮಾಡಿ ಅಭೂತಪೂರ್ವ ಜಯ ಸಾಧಿಸಿರುವ ಬಿಜೆಪಿ, ಮಂಗಳವಾರ ಅಗರ್ತಲಾದಲ್ಲಿ ಸಭೆ ಸೇರಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದೆ. ಬಿಜೆಪಿಯ 35 ಮತ್ತು ಮಿತ್ರಪಕ್ಷ ಐಪಿಎಫ್ಟಿಗೆ ಸೇರಿದ 8 ಶಾಸಕರು, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರದ ಇತರೆ ಸಚಿವರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಸಂಭಾವ್ಯ ಸಿಎಂ ಬಿಪ್ಲಬ್‌ ದೇಬ್‌ ಹೇಳಿದ್ದಾರೆ. ಏತನ್ಮಧ್ಯೆ, ಭಾನುವಾರ ತ್ರಿಪುರದ ನಿರ್ಗಮಿತ ಸಿಎಂ ಮಾಣಿಕ್‌ ಸರ್ಕಾರ್‌ ರಾಜ್ಯಪಾಲ ತಥಾಗತ ರಾಯ್‌ರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ವೇಳೆ, 25 ವರ್ಷಗಳ ಕಾಲ ಆಡಳಿತ ನಡೆಸಿರುವ ಸರ್ಕಾರ್‌ ಅವರಿಗೆ ಹೊಸ ಸಿಎಂ ಪ್ರಮಾಣ ಸ್ವೀಕರಿಸುವವರೆಗೂ ಮುಂದುವರಿಯುವಂತೆ ರಾಜ್ಯಪಾಲರು ಕೋರಿದ್ದಾರೆ.

ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲೂ ಕಮಲ ಅರಳಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಿಜೆಪಿ ಗದ್ದುಗೆಯೇರುವ ಸಮಯ ದೂರವಿಲ್ಲ.
– ಯೋಗಿ ಆದಿತ್ಯನಾಥ್‌, ಉತ್ತರಪ್ರದೇಶ ಸಿಎಂ

ಪಕ್ಷಾಂತರವನ್ನು ಪ್ರೇರೇಪಿಸಿ ಹಾಗೂ ಭ್ರಷ್ಟ ರಾಜಕಾರಣಿಗಳನ್ನು ಓಲೈಸುವ ಮೂಲಕ ಬಿಜೆಪಿ ಈಶಾನ್ಯದಲ್ಲಿ ಗೆಲುವು ಸಾಧಿಸಿದೆ. ಇಂಥ ಟೊಳ್ಳು ಗೆಲುವು ಕರ್ನಾಟಕದ ಚುನಾವಣೆ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ.
– ರಾಜೀವ್‌ ಗೌಡ, ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next