ಪ್ಯಾಂಗ್ಯಾಂಗ್: ಇತರೆ ದೇಶಗಳಿಗೆ ಹೋಲಿಸಿದರೆ ಉತ್ತರ ಕೊರಿಯಾ ನಿಜಕ್ಕೂ ವಿಚಿತ್ರವಾದ ದೇಶ. ಅದು ತನ್ನದೇ ವಿಚಿತ್ರ ಕಾನೂನುಗಳನ್ನು ಹೊಂದಿದೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಅಲ್ಲಿನ ಸರ್ಕಾರ, ನವಜಾತ ಶಿಶುಗಳಿಗೆ “ಬಾಂಬ್’, “ಗನ್’ ಹಾಗೂ “ಸ್ಯಾಟಲೈಟ್’ ಎಂದು ನಾಮಕರಣ ಮಾಡುವಂತೆ ಪೋಷಕರಿಗೆ ಆದೇಶಿಸಿದೆ. ನಾಗರಿಕರಲ್ಲಿ ದೇಶ ಭಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.
ಈ ಹಿಂದೆ ಅ ರೀ(ಪ್ರೀತಿಪಾತ್ರರು) ಹಾಗೂ ಸು ಮಿ(ಸೌಂದರ್ಯವತಿ) ಎಂಬ ಹೆಸರುಗಳನ್ನು ಮಕ್ಕಳಿಗೆ ಇಡಲಾಗುತ್ತಿತ್ತು. ಇದು ತುಂಬ ಸೌಮ್ಯವಾದ ಹೆಸರುಗಳಾಗಿರುವುದರಿಂದ, ಇದರ ಬದಲಾಗಿ ಮಕ್ಕಳಿಗೆ ಸೈದ್ಧಾಂತಿಕ ಮತ್ತು ಮಿಲಿಟರಿ ಅರ್ಥ ಬರುವಂಥ ಹೆಸರುಗಳನ್ನು ಇಡುವಂತೆ ಆದೇಶಿಸಲಾಗಿದೆ.
ಉತ್ತರ ಕೊರಿಯಾ ತನ್ನದೇ ಸ್ವಂತ ಕ್ಯಾಲೆಂಡರ್ ಪಾಲಿಸುತ್ತದೆ. ಅನುಮತಿ ಇಲ್ಲದೇ ಇಲ್ಲಿನ ನಾಗರಿಕರು ಬೇರೆ ದೇಶಗಳಿಗೆ ತೆರಳುವಂತಿಲ್ಲ. ವಿದೇಶಿ ಸಂಗೀತಕ್ಕೆ ನಿಷೇಧವಿದೆ. ನಿಯಮ ಉಲ್ಲಂಘಿಸಿದರೆ ಅತಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೇ ಕ್ಷೌರ ಕೂಡ ಸರ್ಕಾರ ಹೇಳಿದಂತೆಯೇ ಮಾಡಿಸಿಕೊಳ್ಳಬೇಕು ಎಂಬೆಲ್ಲ ಕಠಿಣ ನಿಯಮಗಳು ಇಲ್ಲಿವೆ.