ಹುಬ್ಬಳ್ಳಿ: ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಗುರುವಾರ ಬಂದ್‌ಗೆ ಕರೆ ನೀಡಲಾಗಿದೆಯಾದರೂ, ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಂಭವವಿದೆ.
ಈ ಭಾಗದ 13 ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುರುವಾರ ಬಂದ್ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ಹೈದರಾಬಾದ್
ಕರ್ನಾಟಕದ ಆರು ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಈ ಮಧ್ಯೆ, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಂದ್ ವಿರೋಧಿಸಿಯೇ ಬುಧವಾರ ಪ್ರತಿಭಟನೆ ನಡೆಯಿತು. ಈ ನಡುವೆ, ರಾಯಚೂರಿನಲ್ಲಿ ಕೆಲ ಸಂಘಟನೆಗಳು ಗುರುವಾರ ಬಂದ್‌ಗೆ ಪರ್ಯಾಯವಾಗಿ 371 (ಜೆ) ಕಲಂನ ಸಮರ್ಪಕ ಅನುಷ್ಠಾನದ ಮೂಲಕ ಈ ಭಾಗದ ಪ್ರಗತಿಗೆ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿ ಹೋರಾಟ ನಡೆಸಲು ನಿರ್ಧರಿಸಿವೆ.
ಇನ್ನು, ಮುಂಬೈ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲೂ ಬಂದ್‌ಗೆ ನಿರೀಕ್ಷಿತ ಬೆಂಬಲ ದೊರೆಯುವ ಸೂಚನೆಯಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು, ಮುಖಂಡರು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲ ನೀಡಲು ಮುಂದೆ ಬಂದಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಬಂದ್‌ಗೆ ಕರೆ ನೀಡಿದ ಸಂಘಟನೆಗಳು ಜನರ ಮಧ್ಯೆ ಸ್ಪಷ್ಟ ರೀತಿಯಲ್ಲಿ ಗುರುತಿಸಿಕೊಂಡಿರಲಿಲ್ಲ. ಹೀಗಾಗಿ, ಬಂದ್‌ಗೆ ನಿರೀಕ್ಷಿತ ಬೆಂಬಲ ದೊರೆಯುವ ಸಂಭವ ಕಡಿಮೆ.
ಇನ್ನು ಕೆಲವು ಸಂಘಟನೆಗಳು ಎರಡನೇ ರಾಜಧಾನಿಯಾಗಿ ಬೆಳಗಾವಿ ಅಭಿವೃದಿಟಛಿ,ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಉಪ ಲೋಕಾಯುಕ್ತ ಕಚೇರಿ, ಉತ್ತರ ಕರ್ನಾಟಕ ಭಾಗಕ್ಕೆ ಕೆಲ ಕಚೇರಿಗಳ ಸ್ಥಳಾಂತರಿಸುವ ಸಿಎಂ ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ಕಾದು ನೋಡುವ ನಿರ್ಧಾರ ತೆಗೆದುಕೊಂಡಿವೆ. ಸೂಕ್ತ ಸ್ಪಂದನೆ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರತೆಯ ಎಚ್ಚರಿಕೆ ನೀಡಿವೆ.
ಇವೆಲ್ಲದರ ನಡುವೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗು ತೀವ್ರತೆ ಪಡೆದು, ಮಠಾಧೀಶರೂ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಪ್ರತ್ಯೇಕತೆ ಧ್ವನಿ ಹೆಚ್ಚಲಿದೆ ಎಂಬ ನಿರೀಕ್ಷೆ ಮೂಡಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಭರವಸೆ ಸದ್ಯಕ್ಕೆ ಆ ಧ್ವನಿ ಕ್ಷೀಣಿಸುವಂತೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಉತ್ತರ ಕರ್ನಾಟಕ ರೈತ ಸಂಘ ಸೇರಿದಂತೆ ಕೆಲ ಸಂಘಟನೆಗಳು ಮಾತ್ರ ಮುಖ್ಯಮಂತ್ರಿಗಳು ಏನೇ ಭರವಸೆ ನೀಡಿದ್ದರೂ ಬಂದ್ ಕರೆ ಹಿಂಪಡೆಯುವುದು ಸಾಧ್ಯವಿಲ್ಲ. ಬಂದ್ ನಡೆದೇ ತೀರುತ್ತದೆ ಎಂದು ಹೇಳಿವೆ.