ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳು ಮಾತ್ರವಲ್ಲದೆ ಇಡಿಯ ಉತ್ತರ ಭಾರತದ ಆಗಸ ನಿರಂತರರ ಮೂರನೇ ದಿನವಾದ ಇಂದು ಗುರುವಾರ ದಟ್ಟನೆಯ ಹೊಗೆ ಮತ್ತು ಮಂಜಿನಿಂದ ಬಹುತೇಕ ಮುಚ್ಚಿ ಹೋಗಿದ್ದು ಜನರಿಗೆ ಉಸಿರಾಡಲೂ ಕಷ್ಟ ಎಂಬ ವಿಷಮ ಪರಿಸ್ಥಿತಿ ಉಂಟಾಗಿದೆ.
ದಿಲ್ಲಿ ವಾಯು ಮಾಲಿನ್ಯ ಪರಿಸ್ಥಿತಿ ಇಷ್ಟೊಂದು ಗಂಭೀರ ಹಾಗೂ ಮಾರಣಾಂತಿಕವಾಗಿರುವ ನಡುವೆಯೂ ದಿಲ್ಲಿ ಹೊರ ವಲಯ, ಪಂಜಾಬ್, ಹರಿಯಾಣದಲ್ಲಿ ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆ ಅವಶೇಷಗಳನ್ನು ನಿರಂತರವಾಗಿ, ಯಾವುದೇ ಅಡೆತಡೆ ಇಲ್ಲದೆ, ಸುಡುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿದೆ.
ಈಗ ದಿಲ್ಲಿ ಮಾತ್ರವಲ್ಲ; ನೆರೆಯ ಉತ್ತರ ಪ್ರದೇಶ ಕೂಡ ತೀವ್ರ ವಾಯು ಮಾಲಿನ್ಯಕ್ಕೆ ನಲುಗುತ್ತಿದೆ. ಇಡಿಯ ಆಗಸ ಕಪ್ಟನೆಯ ದಟ್ಟ ಧೂಮ ಮತ್ತು ಮಂಜಿನಿಂದ ಕೂಡಿದ್ದು ಜನ ಹಾಗೂ ವಾಹನ ಸಂಚಾರ ಬಹುತೇಕ ಅಸಾಧ್ಯವಾಗಿದೆ. ಎಲ್ಲೆಡೆ ವಾಹನಗಳು, ಶೂನ್ಯ ಗೋಚರತೆಯ ಪರಿಣಾಮವಾಗಿ, ಅಪಘಾತಗಳಿಗೆ ಗುರಿಯಾಗುತ್ತಿವೆ ಎಂದು ವರದಿಗಳು ತಿಳಿಸಿವೆ.
ಕಳೆದ 24 ತಾಸುಗಳಲ್ಲಿ ದಿಲ್ಲಿ ಹಾಗೂ ಸುತ್ತಮುತ್ತಲಿನ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಏರಿರುವುದನ್ನು ತೋರಿಸುತ್ತದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿ ವಸ್ತುತಃ ಗ್ಯಾಸ್ ಚೇಂಬರ್ ಆಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಸಿಎಂ ಗಳಿಗೆ ಟ್ವೀಟ್ ಮಾಡಿದ್ದಾರೆ. ನಾವೆಲ್ಲ ಜತೆಗೂಡಿ ಈ ವಿಷಮ ಪರಿಸ್ಥಿತಿಯನ್ನು ನಿಯಂತ್ರಿಸಲು ಪರಸ್ಪರ ಸಹಕರಿಸಿ ದುಡಿಯಬೇಕಾಗಿದೆ ಎಂದು ಹೇಳಿದ್ದಾರೆ.