ಹೊಸದಿಲ್ಲಿ: ಮೇ 29ರಂದು ಕೇರಳ ಮೂಲಕ ದೇಶಕ್ಕೆ ಆಗ ಮಿಸಿರುವ ಮುಂಗಾರು ಮಳೆಯು ಈ ಬಾರಿ ದೀರ್ಘಾವಧಿ ಸರಾಸರಿಗಿಂತ ಕೊಂಚ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) ಮಂಗಳವಾರ ತಿಳಿಸಿದೆ.ಮುಂಗಾರು ಮಳೆ
ದೇಶಾದ್ಯಂತ ಒಟ್ಟಾರೆಯಾಗಿ ಈ ಬಾರಿ ದೀರ್ಘಾವಧಿ ಸರಾಸರಿಯ ಶೇ. 103 ಮುಂಗಾರು ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಈ ಹಿಂದೆ ಈ ಬಗ್ಗೆ ಪ್ರಕಟನೆ ಹೊರಡಿಸಿದ್ದ ಐಎಂಡಿ, ದೇಶದಲ್ಲಿ ಶೇ. 99 ಮಳೆಯಾಗಲಿದೆ ಎಂದು ಹೇಳಿತ್ತು. ಇದೀಗ ಮಳೆಯ ಪ್ರಮಾಣವನ್ನು ಪರಿಷ್ಕರಿಸಲಾಗಿದೆ. ಭಾರತದಲ್ಲಿ 1971-2020ರ ವರೆಗೆ ಸುರಿದ 87ಮಿ.ಮೀ. ಸರಾಸರಿ ಮಳೆಯನ್ನು ದೀರ್ಘಾವಧಿ ಸರಾಸರಿ ಮಳೆ ಎಂದು ಪರಿಗಣಿಸಲಾಗಿದೆ.
ಕೇರಳದಲ್ಲಿ ಮಳೆ ಕಡಿಮೆ!?: ಮುಂದಿನ ನಾಲ್ಕು ತಿಂಗಳಲ್ಲಿ ಕೇರಳ, ಮೆಘಾಲಯ, ಮಣಿಪುರ, ತ್ರಿಪುರಾ, ಅಸ್ಸಾಂ, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಲ, ರಾಜಸ್ಥಾನ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ದಕ್ಷಿಣದಲ್ಲಿ ಶೇ. 106ರಷ್ಟು ಮಳೆ: ದಕ್ಷಿಣ ಪರ್ಯಾಯ ದ್ವೀಪಗಳು ಮತ್ತು ಭಾರತದ ಮಧ್ಯಭಾಗದಲ್ಲಿ ಶೇ. 106 ಮಳೆಯಾಗಲಿದೆ. ಅದೇ ರೀತಿ ದಟ್ಟ ಮಲೆನಾಡು ಪ್ರದೇಶಗಳಲ್ಲೂ ಶೇ. 106 ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.