Advertisement

ಕರ್ನಾಟಕ ಬಂದ್ : ಕಾರವಾರದಲ್ಲಿ ಮನವಿಗಷ್ಟೇ ಸೀಮಿತವಾದ ಹೋರಾಟ! ಜನಜೀವನ ಯಥಾಸ್ಥಿತಿ

04:53 PM Sep 28, 2020 | sudhir |

ಕಾರವಾರ : ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಹಾಗೂ ಬಂದ್ ಗೆ ಕಾರವಾರದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಹಳಿಯಾಳದಲ್ಲಿ ಮಾತ್ರ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಮುಂಡಗೋಡ, ಶಿರಸಿ ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ ಪ್ರತಿಭಟನೆ ಹಾಗೂ ಮನವಿ ನೀಡಿಕೆಗೆ ರೈತಪರ ಹೋರಾಟ ಕಂಡು ಬಂತು. ಬಂದ್ ಕರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಲಿಲ್ಲ.

ಕಾರವಾರದಲ್ಲಿ ಕೆಲ ಅಂಗಡಿಗಳು ಮುಚ್ಚಿದ್ದರೆ, ಕೆಲ ಅಂಗಡಿ, ಹೋಟೆಲ್‌ಗಳು ತೆರೆದಿದ್ದವು. ಜನ ಜೀವನ ಎಂದಿನಂತೆ ಇತ್ತು. ಹೊರ ತಾಲೂಕಿಗೆ ಜನರ ಸಂಚಾರ ವಿರಳವಾಗಿದ್ದ ಕಾರಣ ಬಸ್ ಸಂಚಾರವೂ ವಿರಳವಾಗಿತ್ತು.

ರೈತಾಪಿ ಕೃಷಿ ಸಂಬಂಧಿತ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಯ ಅಪಾಯಕಾರಿ ಅಂಶಗಳನ್ನು ಖಂಡಿಸಿ ಕರ್ನಾಟಕದಾದ್ಯಂತ ಹಮ್ಮಿಕೊಂಡಿರುವ ಸ್ವಯಂ ಪ್ರೇರಿತ ಮಹಾ ಹೋರಾಟಕ್ಕೆ ಕಾರವಾರದಲ್ಲಿ ಸಮಾನ ಮನಸ್ಕ ಜನಪರ ಸಂಘಟನೆಗಳು, ಸಿಐಟಿಯು ಕೆಪಿಆರ್ ಎಸ್, ಎಸ್ ಎಫ್ ಐ, ದಲಿತ ಪರ ಸಂಘಟನೆಗಳು, ಕೆಲ ಮಹಿಳಾ ಸಂಘಟನೆಗಳ ಮುಖಂಡರು ನಗರದ ಮಾಲಾದೇವಿ ಕ್ರೀಡಾಂಗಣದಿಂದ ಆರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಗರದ ಲಂಡನ್ ಬ್ರಿಜ್ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು. ನಂತರ ಮೆರವಣಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಹಾದು ಜಿಲ್ಲಾಧಿಕಾರಿ ಕಚೇರಿ ತಲುಪಿತು. ಅಲ್ಲಿ ಯಮುನಾ ಗಾಂವ್ಕರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ :ಹಾರ್ದಿಕ್‌ ಪಾಂಡ್ಯಾ ಮತ್ತೆ ಬೌಲಿಂಗ್‌ ಮಾಡೋದು ಯಾವಾಗ? ಇಲ್ಲಿದೆ ಜಹೀರ್‌ ಖಾನ್‌ ಉತ್ತರ

Advertisement

ರಾಜ್ಯ ಸರ್ಕಾರ ಈಗಾಗಲೇ ಕರ್ನಾಟಕ ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಗಳಿಗೆ ತಿದ್ದುಪಡಿ ತಂದಿದ್ದು ಇದರಿಂದ ರಾಜ್ಯದ ರೈತ, ಕೂಲಿಕಾರ, ಕಾರ್ಮಿಕರ ಮತ್ತು ದಲಿತರ ಬದುಕಿಗೆ ಅಪಾರ ಹಾನಿಯಾಗಲಿದೆ. ಇದನ್ನು ಪ್ರಶ್ನಿಸಲು ಮತ್ತು ಜನಪರ ಪರ್ಯಾಯ ನೀತಿಗಳಿಗಾಗಿ ದೇಶದ ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಕರ್ನಾಟಕದಾದ್ಯಂತ ವ್ಯಾಪಕ ಸ್ವಯಂಪ್ರೇರಿತ ಹೋರಾಟ ನಡೆದಿದೆ. ಇಲ್ಲಿ ಸಹ ನಾವು ದುಡಿಯುವ ಜನತೆಯ ಹಿತದೃಷ್ಟಿಯಿಂದ, ರೈತರು ಕಂಪನಿಗಳ ಗುಲಾಮರಾಗುವುದನ್ನು ತಡೆಯಲು, ಸಾಮಾನ್ಯ ಜನತೆ, ಕಾರ್ಮಿಕರು, ನೌಕರರು, ದಲಿತರು, ಕೂಲಿಕಾರರುಗಳು ಸಂವಿಧಾನದ ಹಕ್ಕಿನಿಂದ ವಂಚಿತರಾಗುವುದನ್ನು ತಪ್ಪಿಸಲು ಈ ಭ್ರಹತ್ ದೇಶಪ್ರೇಮಿ ಐಕ್ಯ ಹೋರಾಟದ ಭಾಗವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ :ಕರಣ್‌ ಜೋಹರ್‌ಗೂ ಡ್ರಗ್‌ ಸಂಕಷ್ಟ? ವಿಡಿಯೋ ತಿರುಚಿದ್ದಲ್ಲ: FSL‌ ವರದಿಯಿಂದ ಸ್ಪಷ್ಟ

ಕಾರವಾರದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ರೈತ ವಿರೋಧಿ ಭೂ ಸುಧಾರಣಾ ನೂತನ ಕಾಯ್ದೆ ಪಾಸ್ ಮಾಡದಿರಲು ಒತ್ತಾಯಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಲಿಖಿತ ಮನವಿ ಅರ್ಪಿಸಿದರು. ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಅಲ್ತಾಫ್ ಶೇಖ್, ಇಮ್ತಿಯಾಜ್ ಬುಖಾರಿ, ದಲಿತ ಸಂಘಟನೆಗಳ ಪರವಾಗಿ ಶ್ಯಾಮಸುಂದರ ಗೋಕರ್ಣ, ದೇವಾನಂದ ಠಾಣೇಕರ್, ಸಿಐಟಿಯುನ ಯಮುನಾ ಗಾಂವ್ಕರ್, ಕರ್ನಾಟಕ ಪ್ರಾಂತ ರೈತ ಸಂಘದ ಶ್ಯಾಮನಾಥ ನಾಯ್ಕ, ಮಂಜುಳಾ ಕಾಣಕೋಣಕರ್, ತಾರಾ ನಾಯ್ಕ, ಎಸ್. ಎಫ್ ಐ ನ ವಿಶಾಲ್, ರಮೇಶ ಮುದ್ಗೇಕರ್, ಪ್ರಶಾಂತ ಲಾಂಜೇಕರ್, ಘಾರು ಮಾಂಗ್ರೇಕರ್ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next