ತಿರುವನಂತಪುರ : ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆಗೆ ಬಲಿಯಾಗಿರುವವರ ಸಂಖ್ಯೆ 29ಕ್ಕೇರಿರುವುದಾಗಿ ವರದಿಯಾಗಿದೆ. ಸುಮಾರು 54,000 ಮಂದಿ ನಿರಾಶ್ರಿತರಾಗಿದ್ದಾರೆ. ರಾಜ್ಯದಲ್ಲಿ ವ್ಯಾಪಕ ಭೂಕುಸಿತ, ಪ್ರವಾಹವೇ ಮೊದಲಾದ ದುರಂತಗಳು ಮುಂದುವರಿದಿವೆ.
ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸುತ್ತಿರುವ ನಡುವೆಯೇ ಇಡುಕ್ಕಿ ಜಲ ವಿದ್ಯುತ್ ಯೋಜನೆಯ ಎಲ್ಲ ಐದು ಕ್ರಸ್ಟ್ ಗೇಟ್ ಮತ್ತು ಇತರ ಸುಮಾರು ಹನ್ನೆರಡಕ್ಕೂ ಅಧಿಕ ಡ್ಯಾಮ್ ಗಳ ಶಟ್ಟರ್‌ಗಳನ್ನು ತೆರೆಯಲಾಗಿದೆ.
ನಿರಂತರ ಮಳೆಯಿಂದಾಗಿ ಅಣೆಕಟ್ಟುಗಳು, ನದಿಗಳು ತುಂಬಿ ಹರಿಯುತ್ತಿವೆ. ಹೆದ್ದಾರಿಗಳು ಭಾಗಶಃ ಕೊಚ್ಚಿ ಹೋಗಿವೆ. ನೂರಾರು ಮನೆಗಳು ಧರಾಶಾಯಿಯಾಗಿವೆ; ಅರ್ಧಾಂಶ ಕೇರಳವೇ ಈಗ ನೀರಿನಲ್ಲಿ ಮುಳುಗಿರುವ ಸ್ಥಿತಿಗೆ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಪ್ರವಾಹ ಪೀಡಿತ ಉತ್ತರ ಕೇರಳದ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲು ಸೇನೆಯ ಐದು ಕಾಲಂ ಗಳನ್ನು ನಿಯೋಜಿಸಲಾಗಿದೆ. ಇದೇ ವೇಳೆ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ “ಆಪರೇಶನ್ ಮದದ್’ ಆರಂಭಿಸಿದೆ.
ಪೆರಿಯಾರ್ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿರುವ ಕಾರಣ ನೌಕಾ ಪಡೆಯ ದಕ್ಷಿಣ ಕಮಾಂಡನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಕೊಚ್ಚಿಯ ವೆಲಿಂಗ್ಡನ್ ಐಲ್ಯಾಂಡ್ ಭಾಗಶಃ ಮುಳುಗಡೆಯಾಗುವ ಭೀತಿ ತಲೆದೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.