Advertisement
ಅಮೆರಿಕ ಅಧ್ಯಕ್ಷರ ಚುನಾವಣೆ ನಡೆದಾಗ ನಾನು ಅಲ್ಲಿನ ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿದ್ದೆ. ಅಲ್ಲಿನ ಚುನಾವಣೆಗೂ ನಮ್ಮಲ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. ಇಡೀ ನಗರದಲ್ಲಿ ನನಗೆ ಎಲ್ಲಿಯೂ ಒಂದು ಬ್ಯಾನರ್ ಆಗಲೀ ಅಥವಾ ಫ್ಲೆಕ್ಸ್ ಆಗಲೀ ಕಾಣಿಸಲಿಲ್ಲ. ಮೈಕಿನ ಅರಚಾಟವೂ ಕೇಳಿಸಲಿಲ್ಲ. ಇಡೀ ನಗರ ಎಂದಿನಂತೆ ಸಹಜ ಲಯದಲ್ಲಿತ್ತು. ಆದರೆ, ಎಲ್ಲ ಜನರೂ ಚುನಾವಣೆಯ ಬಗ್ಗೆಯೇ ಮಾತನಾಡುತ್ತಿದ್ದರೆಂಬುದು ಅರಿವಿಗೆ ಬರುತ್ತಿತ್ತು. ಚುನಾವಣೆಯ ಕಾವು ವಾತಾವರಣದಲ್ಲಿಯೇ ಇತ್ತು. ಟಿವಿಯಲ್ಲಿ ಆ ಬಗ್ಗೆ ಚರ್ಚೆ ಏರುಗತಿಯಲ್ಲಿ ನಡೆಯುತ್ತಿತ್ತು. ಅಧ್ಯಕ್ಷ ಅಭ್ಯರ್ಥಿಗಳ ವಾದ-ವಿವಾದಗಳನ್ನಂತೂ ಎಲ್ಲರೂ ತಪ್ಪದೇ ನೋಡುತ್ತಿದ್ದರು. ಭಾರತೀಯರಲ್ಲಂತೂ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಅದೊಂದು ಜಾಗತಿಕ ವಿದ್ಯಮಾನವೆಂಬಂತೆ ಚುನಾವಣೆಯ ಕುರಿತು ಚಿಂತಿಸುತ್ತಿದ್ದರು. ನಾನು ಗಮನಿಸಿದಂತೆ ಕ್ಯಾಲಿಫೋರ್ನಿಯಾದ ಭಾರತೀಯರ ಒಲವು ಹಿಲರಿ ಕಡೆಗಿದ್ದಂತೆ ತೋರುತ್ತಿತ್ತು. ಟ್ರಂಪ್ ಬಗ್ಗೆ ಒಂದು ರೀತಿಯ ಭಯಮಿಶ್ರಿತ ಅಸಮಾಧಾನ ವ್ಯಕ್ತವಾಗುತ್ತಿತ್ತು. ಅದಕ್ಕೆ ಪ್ರಮುಖವಾಗಿ ಮೂರು ಕಾರಣಗಳು: ಮೊದಲನೆಯದು ಆತನ ಹುಂಬ ಮನೋಭಾವ, ಇದ್ದಕ್ಕಿದ್ದಂತೆ ನಿರ್ಧಾರ ಕೈಗೊಳ್ಳುವ ಸ್ವಭಾವ, ಎರಡನೆಯದು ರಾಜಕೀಯ ಜೀವನದಲ್ಲಿನ ಅನನುಭವ, ಮೂರನೆಯದು ಅಮೆರಿಕವೇ ವಲಸಿಗರ ನಾಡಾದರೂ ಟ್ರಂಪ್‌ಗೆ ವಲಸಿಗರ ಬಗೆಗಿರುವ ಅಸಮಾಧಾನ, ಜೊತೆಗೆ ಟ್ರಂಪ್‌ನ ರಾಜತಾಂತ್ರಿಕ ನಿಪುಣತೆಗಿಂತ ವ್ಯಾಪಾರೀ ಬುದ್ಧಿಯೇ ಪ್ರಧಾನವಾಗುತ್ತದೆಂಬ ಆತಂಕ.
Related Articles
Advertisement
ಅಮೆರಿಕದ ಚುನಾವಣೆಯ ಫಲಿತಾಂಶ ಬಂದಾಗಲೂ ನಾನು ಅಲ್ಲಿದ್ದೆ. ಫಲಿತಾಂಶ ಅನಿರೀಕ್ಷಿತವಾಗಿತ್ತು. ಅಮೆರಿಕದ ಮೂಲಭೂತವಾದಿಗಳು ಸದ್ದಿಲ್ಲದೆ ಟ್ರಂಪ್‌ರನ್ನು ಬೆಂಬಲಿಸಿದ್ದರು. ಒಳಗಿನವರು- ಹೊರಗಿನವರು ಎಂಬ ಒಡಕು ನಿಶ್ಚಿತ ಪರಿಣಾಮ ಬೀರಿತ್ತು. ನಾನು ಹೇಳಿದ ಮೂರನೆಯ ಗುಂಪಿನ ಭಾರತೀಯರ ಮುಖದ ಮೇಲೆ ಅಸ್ಪಷ್ಟವಾಗಿ ಕರಿನೆರಳಿನ ಛಾಯೆ ಮುಸುಕಿತ್ತು.
ಈಗ ನಾನು ಅಮೆರಿಕದಿಂದ ಹಿಂದಿರುಗಿ ಭಾರತದಲ್ಲಿದ್ದೇನೆ. ನಾನು ಅಲ್ಲಿದ್ದಾಗ ಕಂಡ ಆತಂಕದ ಛಾಯೆ ಈಗ ನಿಜವಾಗುತ್ತಿರುವುದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇನೆ. ಟ್ರಂಪ್‌ನ ವಿದೇಶಾಂಗ ನೀತಿ ಹಿಂಸೆಗೆ ಅವಕಾಶ ಮಾಡಿಕೊಡುತ್ತಿದೆ. ಮಾನವತಾವಾದದ ಸರಳ ತತ್ವವನ್ನೇ ಪ್ರಶ್ನಿಸುತ್ತಿದೆ. ಅಲ್ಲಿರುವ ಬಹುಪಾಲು ಭಾರತೀಯರ ಭವಿಷ್ಯ ತೂಗುಯ್ನಾಲೆಯಲ್ಲಿದೆ.
ಈಗ ಇದನ್ನು ಎರಡು ರೀತಿಯಲ್ಲಿ ಎದುರಿಸುವ ಅಗತ್ಯವಿದೆ. ಮೊದಲನೆಯದು ರಾಜತಾಂತ್ರಿಕ ನೆಲೆ. ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯರ ಹಿತಾಕಾಂಕ್ಷೆಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು. ಯಾವ ದೇಶವೇ ಆಗಲೀ ತನ್ನ ದೇಶವಾಸಿಗಳ ಹಿತ ಕಾಪಾಡಬೇಕೆನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಅಂತಹ ನಿರ್ಧಾರ ಇತರ ದೇಶವಾಸಿಗಳ ಬದುಕಿನ ಮೇಲೆ ದುಷ್ಪರಿಣಾಮ ಬೀರಬಾರದು. ಇದು ಸಾಮಾಜಿಕ ಬದುಕಿನಲ್ಲಿ ಸಹಬಾಳ್ವೆಯ ಮೂಲತತ್ವ. ಹೀಗಾಗಿ ಇದನ್ನು ರಾಜತಾಂತ್ರಿಕ ನೆಲೆಯಲ್ಲಿಯೇ ಎದುರಿಸಬೇಕು. ಇದು ಕೇವಲ ಉದ್ಯೋಗದ ಪ್ರಶ್ನೆ ಮಾತ್ರವಾಗದೆ ಜನಾಂಗೀಯ ದ್ವೇಷದ ರೂಪ ತಾಳಿದರೆ ಅದರ ಹೊಣೆಯನ್ನು ಯಾರು ಹೊರಬೇಕು? ಅಮೆರಿಕ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಶ್ರೀನಿವಾಸ ಕುಚಿಭೊಟ್ಲ ಹತ್ಯೆ , ಹರ್ನಿಶ್ ಪಟೇಲ್ ಹತ್ಯೆ, ದೀಪ್‌ರಾಯ್ ಮೇಲಿನ ಹಲ್ಲೆ ಇವೆಲ್ಲ ನಾಗರಿಕ ಸಮಾಜದ ಲಕ್ಷಣಗಳೇ? ನಾವು ಎತ್ತ ಸಾಗುತ್ತಿದ್ದೇವೆ?
ಮತ್ತೂಂದು ನೆಲೆ ಅಮೆರಿಕದ ಈ ನಿಲುವು ನಮ್ಮನ್ನು ನಾವು ಮರುಚಿಂತನೆ ಮಾಡಿಕೊಳ್ಳಲು ಕಾರಣವಾಗಬೇಕು. ಭಾರತ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಗಳಲ್ಲೊಂದು ಪ್ರತಿಭಾ ಪಲಾಯನ. ಇದರ ಬಗ್ಗೆ ನಾವು ಮತ್ತೆ ಮತ್ತೆ ಚರ್ಚೆ ಮಾಡಿದರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇದು ನಮ್ಮ ಶಿಕ್ಷಣನೀತಿ, ಅಭಿವೃದ್ಧಿಯ ಪರಿಕಲ್ಪನೆ, ಸಾಮಾಜಿಕ ರಚನೆ, ಕೌಟುಂಬಿಕ ನೆಮ್ಮದಿ- ಇಂತಹ ಅನೇಕ ಸಂಗತಿಗಳ ಬಗ್ಗೆ ಚಿಂತಿಸಲು ಅವಕಾಶ ಮಾಡಿಕೊಟ್ಟಿದೆ. ಪದವಿ ಶಿಕ್ಷಣದವರೆಗೆ ನಮ್ಮ ತೆರಿಗೆಯ ಹಣದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿ ನಂತರ ಉನ್ನತ ಅಧ್ಯಯನಕ್ಕೆಂದು ವಿದೇಶಕ್ಕೆ ಹೋಗಿ ಅಲ್ಲಿಯೇ ನೆಲೆ ನಿಲ್ಲುವ ಪರಿಯಿಂದ ಭಾರತ ಪಡೆಯುವುದೇನು? ಕಳೆದುಕೊಳ್ಳುವುದೇನು? ಎಲ್ಲವನ್ನೂ ವಿದೇಶೀ ವಿನಿಮಯದ ಪರಿಭಾಷೆಯಲ್ಲಿಯೇ ನಾವು ವ್ಯಾಖ್ಯಾನಿಸಬೇಕೆ? ಇಂತಹ ಸವಲತ್ತುಗಳೂ ಯಾರ ಪಾಲಾಗುತ್ತಿವೆ? ಜಾಗತೀಕರಣದ ಅಪಾಯಗಳು ಯಾವುವು? ಇದಕ್ಕೂ ನಮ್ಮ ರೈತರ ಆತ್ಮಹತ್ಯೆಗೂ ಸಂಬಂಧ ಇಲ್ಲವೆನ್ನುತ್ತೀರಾ? ನಮ್ಮ ಪ್ರಗತಿಯ ಪರಿಕಲ್ಪನೆಯಿಂದುಂಟಾಗುತ್ತಿರುವ ಅಪಾಯಗಳು ಯಾವುವು? ಏಕಾಕೃತಿಯ ಆಧುನಿಕ ಸಾಮ್ರಾಜ್ಯಶಾಹಿಯಿಂದ ಬಹುಸಂಸ್ಕೃತಿಯ ನಾಶವಾಗುತ್ತಿರುವುದನ್ನು ನಾವು ನೋಡುತ್ತ ಸುಮ್ಮನಿರಬೇಕೆ? ನಮ್ಮ ತರುಣಜನಾಂಗಕ್ಕೆ ಇಲ್ಲಿಯೇ ಅವಕಾಶಗಳನ್ನು , ಸವಲತ್ತುಗಳನ್ನು ಕಲ್ಪಿಸಿಕೊಡಲು ಸಾಧ್ಯವಿಲ್ಲವೆ?
ಇಂತಹ ಪ್ರಶ್ನೆಗಳನ್ನು ಕೇಳುವುದೂ ನಮ್ಮ ಇಂದಿನ ಅಗತ್ಯವಾಗಿದೆ. ಇಂತಹ ಪ್ರಶ್ನೆಗಳನ್ನು ಕೇಳಲು ಟ್ರಂಪ್ ನಿಲುವು ನಮ್ಮನ್ನು ಒತ್ತಾಯಿಸುವಂತಿದೆ. ಸಂವಾದ ಸಾಧ್ಯವೆ?
ನರಹಳ್ಳಿ ಬಾಲಸುಬ್ರಹ್ಮಣ್ಯ