Advertisement

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

01:01 AM Oct 24, 2020 | mahesh |

ಕಾರ್ಕಳ: ಲಾಕ್‌ಡೌನ್‌ ತೆರವಿನ ಬಳಿಕ ದೇವಸ್ಥಾನಗಳು ಭಕ್ತರಿಗೆ ತೆರೆದುಕೊಂಡಿದ್ದರೂ, ರಾಜ್ಯದ ಮುಜರಾಯಿ ಇಲಾಖೆಯಡಿ ಬರುವ ಅವಧಿ ಮುಕ್ತಾಯಗೊಂಡ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕವಾಗಿಲ್ಲ. ಒಂದು ವರ್ಷದಿಂದ ಆಡಳಿತಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ಭಕ್ತರ ಮೂಲಸೌಕರ್ಯ, ದೇಗುಲದ ಬೆಲೆಬಾಳುವ ಸೊತ್ತುಗಳ ಭದ್ರತೆ ಕುರಿತು ಆತಂಕ ಎದುರಾಗಿದೆ.

Advertisement

ಸಮಿತಿ ನವೀಕರಿಸಿಲ್ಲ
ರಾಜ್ಯದಲ್ಲಿ 90, ಉಡುಪಿ ಜಿಲ್ಲೆಯಲ್ಲಿ 25 ಮತ್ತು ದ.ಕ.ದಲ್ಲಿ 36 “ಎ’ ಗ್ರೇಡ್‌ ದೇವಸ್ಥಾನಗಳಿವೆ. ಉಡುಪಿಯಲ್ಲಿ 20 ಮತ್ತು ದ.ಕ. ಜಿಲ್ಲೆಯಲ್ಲಿ 25ರಷ್ಟು ಅವಧಿ ಪೂರ್ಣಗೊಂಡ “ಎ’ ಗ್ರೇಡ್‌ ದೇವಸ್ಥಾನಗಳಲ್ಲಿ ಹೊಸ ವ್ಯವಸ್ಥಾಪನ ಸಮಿತಿ ರಚನೆಗೆ ಸಂಬಂಧಿಸಿ ಅರ್ಜಿ ಸ್ವೀಕೃತವಾಗಿದೆ.

ಚಟುವಟಿಕೆ ಕುಂಠಿತ
ಅವಿಭಜಿತ ಜಿಲ್ಲೆಗಳ ಬಿ’ ಮತ್ತು ಸಿ’ ವರ್ಗದ ಬಹುತೇಕ ದೇವಸ್ಥಾನಗಳಿಗೂ ವ್ಯವಸ್ಥಾಪನ ಸಮಿತಿ ನೇಮಕವಾಗಿಲ್ಲ. ಅರ್ಜಿ ಸ್ವೀಕೃತಗೊಂಡಿದೆಯಷ್ಟೆ. ಈ ಎಲ್ಲ ಶ್ರೇಣಿಯ ದೇವಸ್ಥಾನಗಳು ಲಕ್ಷಾಂತರ ಬೆಲೆಬಾಳುವ ಆಸ್ತಿಪಾಸ್ತಿ ಹೊಂದಿವೆ. ತೋಟವನ್ನು ಹೊಂದಿರುವ ದೇವಸ್ಥಾನಗಳು ಇವೆ. ಇಲ್ಲೆಲ್ಲ ಪೂಜೆ ವಿಧಿವಿಧಾನಗಳು ನಡೆದರೂ ವ್ಯವಸ್ಥಾಪನ ಸಮಿತಿಗಳಿಲ್ಲದೇ ಕೃಷಿ ಉತ್ಪನ್ನಗಳ ಏಲಂ ಇತ್ಯಾದಿ ಜತೆ ಅಭಿವೃದ್ಧಿಯೂ ಕುಂಠಿತವಾಗಿವೆ.

ರಕ್ಷಣೆ, ಭದ್ರತೆ ಮುಖ್ಯ
ಉಭಯ ಜಿಲ್ಲೆಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಮಂದಾರ್ತಿ ಸಹಿತ ಅನೇಕ ದೇಗುಲಗಳು ಭಾರೀ ಆದಾಯ ತಂದು ಕೊಡುತ್ತಿವೆ. ಅಪಾರ ಬೆಲೆಬಾಳುವ ಸೊತ್ತುಗಳನ್ನು ಹೊಂದಿದ್ದು, ಕೋಟ್ಯಂತರ ರೂ. ಬೆಲೆಬಾಳುವ ಆಭರಣ, ಮೂರ್ತಿ ಸ್ಥಿರ ಮತ್ತು ಚರಾಸ್ಥಿಗಳನ್ನು ಹೊಂದಿವೆ. ಇಲ್ಲೆಲ್ಲದರ ರಕ್ಷಣೆ ಜತೆಗೆ ಭದ್ರತೆ ಕಾಪಾಡುವುದು ಅತಿಮುಖ್ಯವಾಗಿದೆ.

“ಬಿ’ ಮತ್ತು “ಸಿ’ ದರ್ಜೆ ದೇವಸ್ಥಾನಗಳಲ್ಲಿ ಭದ್ರತೆ ಎನ್ನುವುದೇ ಇಲ್ಲ. ರಾತ್ರಿ ಒಮ್ಮೆ ಪೊಲೀಸರು ಗಸ್ತು ತಿರುಗಿ ಬರುವುದೇ ಈ ದೇವಸ್ಥಾನಗಳಿಗಿರುವ ದೊಡ್ಡ ಭದ್ರತೆ. ದೇಗುಲ ಭದ್ರತೆ, ಹುಂಡಿ ಹಣ ಸಂಗ್ರಹ, ಅಭಿವೃದ್ಧಿ ಮೇಲೆ ವ್ಯವಸ್ಥಾಪನ ಸಮಿತಿ ಕಣ್ಣಿಟ್ಟಿರುತ್ತದೆ. ಹೀಗಾಗಿ ಸಮಿತಿ ಇರಬೇಕೆಂದು ಭಕ್ತರ ಆಶಯವಾಗಿದೆ.

Advertisement

ಕುಕ್ಕೆ: ಸಿಎಂ ಅಂಗಳದಲ್ಲಿ ಚೆಂಡು!
ಬೆಂಗಳೂರಿನಲ್ಲಿ ಧಾರ್ಮಿಕ ಪರಿಷತ್‌ ಸಭೆ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಕುಕ್ಕೆ ದೇಗುಲದ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಪ್ರಾಧಿಕಾರ ರಚನೆಗೂ ಮೊದಲು 5 ಮಂದಿಯ ಅಭಿವೃದ್ಧಿ ಸಲಹಾ ಸಮಿತಿ ರಚನೆ ಪ್ರಸ್ತಾವವಿದ್ದರೂ, ಅದಿನ್ನು ಅಂತಿಮವಲ್ಲ. ಮುಖ್ಯಮಂತ್ರಿಗಳು ವ್ಯವಸ್ಥಾಪನ ಸಮಿತಿ ನೇಮಿಸುವ ಬಗ್ಗೆ ಒಲವು ಹೊಂದಿದ್ದು. ಅವರೇ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.

ಹುದ್ದೆ ನಿಯೋಜನೆಗೊಂಡ ಬಳಿಕ ಇತ್ತೀಚೆಗಷ್ಟೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಆಡಳಿತ ಮಂಡಳಿ ನೇಮಕಾತಿಗೆ ಸಂಬಂಧಿಸಿ ಪ್ರಕ್ರೀಯೆಗಳು ನಡೆಯುತ್ತಿವೆ.
-ಕೆ.ಎ. ದಯಾನಂದ್‌ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ-ಬೆಂಗಳೂರು

ಸಭೆಯಲ್ಲಿ ನಿರ್ಧಾರ
ಶೀಘ್ರ 90ರಷ್ಟು ದೇಗುಲಗಳ ನೇಮಕಾತಿಯಾಗಲಿವೆ. ಉಳಿದಿರುವುದು ಮುಂದಿನ ಹಂತದಲ್ಲಿ ಆಗಲಿದೆ.
-ಕಶೆಕೋಡಿ ಸೂರ್ಯನಾರಾಯಣ ಭಟ್‌ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರು

ಅಂಕಿಅಂಶ
ದ.ಕ. ಮತ್ತು ಉಡುಪಿ ದೇವಸ್ಥಾನಗಳು-1,304
ದ.ಕ. ಜಿಲ್ಲೆ – 494
“ಎ’ ಗ್ರೇಡ್‌ – 39
“ಬಿ’ ಗ್ರೇಡ್‌ – 44
“ಸಿ’ ಗ್ರೇಡ್‌ – 411
ಉಡುಪಿ ಜಿಲ್ಲೆ – 810
“ಎ’ ಗ್ರೇಡ್‌ – 25
“ಬಿ’ ಗ್ರೇಡ್‌ – 19
“ಸಿ’ ಗ್ರೇಡ್‌ – 766

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next