ಶಹಾಪುರ: ತಾಲೂಕಿನ ಸಗರ ಗ್ರಾಮದ ಗ್ರಾಮ ದೇವತೆ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ವರ್ಷದಲ್ಲಿ ಎರಡು ಬಾರಿ ನಡೆಯುವುದು ವಿಶೇಷವಾಗಿದೆ. ಅದರಂತೆ ಫೆ. 19ರಂದು ಜಾತ್ರೆ ಆರಂಭವಾಗಲಿದೆ.
ಆದರೆ ದೇವಸ್ಥಾನ ಮುಜರಾಯಿ ಖಾತೆಗೆ ಒಳಪಟ್ಟಿದ್ದು, ತಾಲೂಕು ಆಡಳಿತದ ತಹಶೀಲ್ದಾರರು ದೇವಸ್ಥಾನ ಕಮಿಟಿ ಅಧ್ಯಕ್ಷರಾಗಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಜಾತ್ರೆ ಆರಂಭವಾಗಲಿದೆ. ಜವಾಬ್ದಾರಿ ಹೊಂದಿದ ತಾಲೂಕು ಆಡಳಿತ ಇದುವರೆಗೂ ಜಾತ್ರಾ ಅಂಗವಾಗಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತ್ರೆಗೆ ಸಹಸ್ರಾರು ಭಕ್ತಾದಿಗಳು ಆಗಮಿಸಲಿದ್ದು, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ ಇದುವರೆಗೂ ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಜಾತ್ರೆ ವೇಳೆ ಬರುವ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಟ್ಟದ ಮೇಲಿರುವ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆಯಲು ಸಮರ್ಪಕ ರಸ್ತೆ ಇಲ್ಲ. ಮೆಟ್ಟಿಲುಗಳು ನೆಲಕ್ಕುರುಳಿವೆ. ರಸ್ತೆ ಹದಗೆಟ್ಟಿದೆ. ಕಳೆದ ವರ್ಷವೇ ರಸ್ತೆ ಮೆಟ್ಟಿಲು ನೆಲಕ್ಕೆ ಉರುಳಿ ಜನರು ಪರದಾಡುವಂತಾಗಿದೆ. ಇದನ್ನು ಅರಿತ ದೇವಸ್ಥಾನ ಕಮಿಟಿ ಹಾಗೂ ತಾಲೂಕು ಆಡಳಿತ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಿವುರು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ವರ್ಷದಲ್ಲಿ ಎರಡು ಬಾರಿ ಜಾತ್ರೆ: ಪ್ರತಿವರ್ಷ ಭಾರತ ಹುಣ್ಣಿಮೆ ಮುನ್ನವೇ ಬರುವ ಮಂಗಳವಾರ ಹಾಗೂ ಪ್ರತಿ ಸಲ ಹೋಳಿ ಹುಣ್ಣಿಮೆ ಮುನ್ನ ಬರುವ ಶುಕ್ರವಾರ ಹೀಗೆ ಎರಡು ಬಾರಿ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ. ಎರಡು ಬಾರಿ ಜಾತ್ರೆಯಲ್ಲಿ ಅಸಂಖ್ಯಾತ ಜನ ಸೇರಲಿದೆ. ಮಹಾರಾಷ್ಟ್ರದಿಂದ ಭಕ್ತಾದಿಗಳು ಜಾತ್ರೆಗೆ ಆಗಮಿಸುತ್ತಾರೆ. ಮುಜರಾಯಿ ಖಾತೆ ಅಧಿಕಾರಿಗಳ ಪ್ರಕಾರ 25 ಲಕ್ಷ ರೂ. ಅನುದಾನ ಇದ್ದು, ಅಭಿವೃದ್ಧಿ ಕಾರ್ಯಕ್ಕೆ ಇಷ್ಟೊಂದು ಹಣ ಸಾಲುವುದಿಲ್ಲ ಎಂಬ ನೆಪ ಹೇಳುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.