ವಿಧಾನಸಭೆ: ಬಿಬಿಎಂಪಿ ವ್ಯಾಪ್ತಿಯ 5,458 ಕೊಳವೆ ಬಾವಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎಂಬುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಉಲ್ಲೇಖೀಸಿದೆ. ಏಳು ನಗರಸಭೆ, 1 ಪುರಸಭೆ ಬಿಬಿಎಂಪಿಗೆ ವ್ಯಾಪ್ತಿಗೆ ಸೇರಿದ ನಂತರ ಅಲ್ಲಿದ್ದ 3,454 ಕೊಳವೆ ಬಾವಿಗಳು ಜಲಮಂಡಳಿಗೆ ಹಸ್ತಾಂತರಗೊಂಡವು.
ಒಟ್ಟಾರೆ ಬಿಬಿಎಂಪಿಯ 12,986 ಕೊಳವೆಬಾವಿಗಳನ್ನು ಬಾರ್ಕ್ ಸಂಸ್ಥೆಯಿಂದ ಪರಿಶೀಲನೆ ಮಾಡಿಸಿದಾಗ 5,958 ದುಸ್ಥಿತಿಯಲ್ಲಿದ್ದವು. 6308 ಕೊಳವೆ ಬಾವಿಗಳು ಸುಸ್ಥಿತಿಯಲ್ಲಿದ್ದವು. ಸುಸ್ಥಿತಿಯಲ್ಲಿದ್ದ ಕೊಳವೆ ಬಾವಿಗಳ ನೀರನ್ನು ಪರಿಶೀಲಿಸಿದಾಗ ಕೇವಲ 850 ಕೊಳವೆ ಬಾವಿಗಳ ನೀರು ಮಾತ್ರ ಕುಡಿಯಲು ಯೋಗ್ಯ ಎಂದು ಪತ್ತೆಯಾಗಿದೆ. ಕುಡಿಯಲು ಯೋಗ್ಯವಲ್ಲದ 5,458 ಕೊಳವೆ ಬಾವಿಗಳ ಬಗ್ಗೆ ಜಲಮಂಡಳಿ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪಾಲಿಕೆಯಿಂದ ಜಲಮಂಡಳಿಗೆ ಹಸ್ತಾಂತರಗೊಂಡ 3,454 ಕೊಳವೆ ಬಾವಿಗಳ ಪೈಕಿ ಎಷ್ಟರಲ್ಲಿ ಕುಡಿಯಲು ಯೋಗ್ಯವಾದ ನೀರು ಇದೆ ಎಂಬುದರ ಮಾಹಿತಿಯೂ ಜಲಮಂಡಳಿಯಲ್ಲಿ ಇಲ್ಲ. ಜಲಮಂಡಳಿಯು ಹೊಸದಾಗಿ 2,100 ಕೊಳವೆ ಬಾವಿ ಕೊರೆಸಲು ಪಟ್ಟಿ ಸಿದ್ಧಪಡಿಸಿದೆ. ಆದರೆ, ಯಾವ ಮಾನದಂಡದಡಿ ಕೊಳವೆ ಬಾವಿ ಕೊರೆಸಲು ಸ್ಥಳ ಆಯ್ಕೆ ಮಾಡಲಾಯಿತು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಕೊಳವೆ ಬಾವಿ ಕೊರೆಯುವ ಟೆಂಡರ್ ಆವಧಿ ಮುಗಿದ ನಂತರ ಹೊಸ ಟೆಂಡರ್ ಕರೆಯದೆ 75 ಕೊಳವೆ ಬಾವಿಗಳಿಗೆ 28.28 ಕೋಟಿ ರೂ.ಗಳ ಪ್ಯಾಕೇಜ್ ನೀಡಲಾಗಿದೆ. ಕಾಮಗಾರಿಗಳ ನಿರ್ವಹಣೆಗೆ ಬೇಕಾಗುವ ಸಾಮಗ್ರಿ ಖರೀದಿಯಲ್ಲಿ ನಿಯಮ ಪಾಲಿಸಿಲ್ಲ. ನಕಲಿ ಮಂಜೂರಾತಿ ಆದೇಶದಗಳ ಮೇಲೆ 6.06 ಕೋಟಿ ರೂ. ಮೊತ್ತದ 879 ವಸ್ತು ಖರೀದಿ ಮಾಡಲಾಗಿದೆ.
ಸಾಮಗ್ರಿಗಳ ಸರಬರಾಜು ಕೋರಿಕೆ ಪತ್ರಗಳ ಮೂಲ ಪ್ರತಿಗೂ ನಕಲು ಪ್ರತಿಗೂ ವ್ಯತ್ಯಾಸವಿದ್ದು ಪರಿಮಾಣ ತಿದ್ದಲಾಗಿದೆ. ನಕಲಿ ಆದೇಶ ಗಮನಿಸುವಲ್ಲಿ ಪ್ರಧಾನ ಎಂಜಿನಿಯರ್ ವಿಫಲರಾಗಿದ್ದಾರೆ. 4.36 ಕೋಟಿ ರೂ. ಸಾಮಗ್ರಿ ವೆಚ್ಚ ಹಾಗೂ ಕೊಳವೆ ಬಾವಿ ಸಮಗ್ರ ವಿವರಣೆ ಹೊಂದಿರುವ ದಾಖಲೆ ಇಟ್ಟಿಲ್ಲದಿರುವುದು ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿದೆ.