Advertisement
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮೇಯರ್ ವೈದ್ಯಕೀಯ ನಿಧಿಯಿಂದ ಪರಿಹಾರ ಕೋರಿ ನೂರಾರು ಅರ್ಜಿಗಳು ಬಂದಿವೆ. ಆದರೆ, ಎರಡು ವರ್ಷಗಳಿಂದ ಅರ್ಹರಿಗೆ ಪರಿಹಾರ ಬಿಡುಗಡೆಯಾಗಿಲ್ಲ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಕೆಲವರು ಈಗಾಗಲೇ ನಿಧನರಾಗಿದ್ದು, ಅವರ ಕುಟುಂಬಗಳಿಗೂ ಪರಿಹಾರ ತಲುಪಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
Related Articles
Advertisement
ಇದೇ ವೇಳೆ ಮಾತನಾಡಿದ ಪದ್ಮನಾಭರೆಡ್ಡಿ, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಲ್ಯಾಪ್‌ಟಾಪ್ ನೀಡಿಲ್ಲವೆಂದರೆ ಹೇಗೆ? ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ, ಮಾರ್ಷಲ್‌ಗಳ ನೇಮಕಕ್ಕೆ ಯಾವುದೇ ನಿಯಮಗಳು ಬೇಕಾಗಿಲ್ಲ. ಅದೇ ಬಡವರಿಗೆ ಅನುಕೂಲವಾಗುವ ಯೋಜನೆಗಳಿಗೆ ಕೆಟಿಟಿಪಿ ಕಾಯ್ದೆ ಅಡ್ಡಿಯಾಗುತ್ತದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಶೇಷ ಆಯುಕ್ತ ರವೀಂದ್ರ ಉತ್ತರಿಸಿ, ಹಿಂದೆ ಪ್ರತಿ ಲ್ಯಾಪ್‌ಟಾಪ್‌ಗೆ 33 ಸಾವಿರ ರೂ. ನಿಗದಿಪಡಿಸಿ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಆದರೆ, ವಿಶೇಷ ಆಯುಕ್ತರಾದ ಸಾವಿತ್ರಿ ಅವರು ಲ್ಯಾಪ್‌ಟಾಪ್ ಟೆಂಡರ್ ಕರೆಯಲು ವಲಯಗಳಿಗೆ ಅಧಿಕಾರ ನೀಡಿದ್ದಾರೆ ಎಂದರು. ಕೂಡಲೇ ಕಿಯೋನಿಕ್ಸ್ ವತಿಯಿಂದ ಲ್ಯಾಪ್‌ಟಾಪ್ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
ಹಣ ಬಳಕೆಗೆ ಆದೇಶಿಸಿ: ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಬಿಬಿಎಂಪಿಗೆ 14ನೇ ಹಣಕಾಸು ಆಯೋಗದಿಂದ ಬಂದಿರುವ ಹಣ ಬಳಸಿಕೊಳ್ಳಲು ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ನಿಂದ ಕೈಗೊಳ್ಳಲು ಆಯುಕ್ತರು, ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಆದೇಶಿಸಬೇಕು ಎಂದು ರಿಜ್ವಾನ್ ಅವರು ಮೇಯರ್ ಅವರನ್ನು ಕೋರಿದರು.
14ನೇ ಹಣಕಾಸು ಆಯೋಗದ ಹಣ ಬಳಕೆಗೆ ಕೆಟಿಟಿಪಿ ಕಾಯ್ದೆಯಂತೆ ಕೆಲಸ ನಿರ್ವಹಿಸಬೇಕಿದ್ದು, ಅದಕ್ಕೆ ಹಲವಾರು ಷರತ್ತುಗಳಿವೆ. ಹೀಗಾಗಿ ಅದರಿಂದ ವಿನಾಯ್ತಿ ನೀಡಿ ಶೀಘ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೆಆರ್‌ಐಡಿಎಲ್‌ಗೆ ವಹಿಸುವ ಕುರಿತಂತೆ ಸರ್ಕಾರದ ಅನುಮತಿ ಪಡೆಯಬೇಕು ಮತ್ತು ಈಗಾಗಲೇ ಆರಂಭಿಸಿರುವ ಕಾಮಗಾರಿಗಳಿಗೂ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಎಂಜಿನಿಯರ್ ಅಮಾನತಿಗೆ ಸೂಚನೆ: ಬೆಳ್ಳಂದೂರು ಕೆರೆಯ ಬಳಿ ಬೆಂಕಿ ಕಾಣಿಸಿಕೊಂಡ 24 ಗಂಟೆ ನಂತರ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಜತೆಗೆ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವು ಪ್ರಯತ್ನವನ್ನೂ ಮಾಡಿಲ್ಲವೆಂದು ಮೇಯರ್ ದೂರಿದರು. ಇತ್ತೀಚೆಗೆ ಹೊಸಹಳ್ಳಿಯ ವಾರ್ಡ್‌ನಲ್ಲಿ ವ್ಯಕ್ತಿಯೊಬ್ಬರು ಚರಂಡಿಗೆ ಬಿದ್ದು ಸಾವನ್ನಪ್ಪಿದರೂ ಮಾಹಿತಿ ನೀಡಲು ಸಹಾಯಕ ಎಂಜಿನಿಯರ್ ಮುಂದಾಗಿಲ್ಲ.
ಹೀಗಾಗಿ ಕೂಡಲೇ ಸಂಬಂಧಿಸಿದ ಸಹಾಯಕ ಎಂಜಿನಿಯರ್‌ನ್ನು ಅಮಾನತುಗೊಳಿಸುವಂತೆ ಆಯುಕ್ತರಿಗೆ ಸೂಚಿಸಿದರು. ಜತೆಗೆ ಬೆಳ್ಳಂದೂರು ಕೆರೆಯ ಬಳಿ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಆದರೆ, ಪಾಲಿಕೆಯಿಂದ ಅವರಿಗೆ ಊಟ ಹಾಗೂ ಆ್ಯಂಬುಲೆನ್ಸ್ ಒದಗಿಸುವ ಕೆಲಸ ಮಾಡಿಲ್ಲ. ಜತೆಗೆ ಕೇಂದ್ರ ಸಚಿವರು ಸ್ಥಳಕ್ಕೆ ಬಂದರೂ ಪಾಲಿಕೆಯ ಅಧಿಕಾರಿಗಳು ಹಾಜರಿರಲಿಲ್ಲ.
ಅಂತಹ ಸಂದರ್ಭಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒಗಿಸುವುದು ಪಾಲಿಕೆಯ ಕರ್ತವ್ಯವಾಗಿರುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ವರದಿ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕ, ಸಿಬ್ಬಂದಿ ಒದಗಿಸಿ: ಯಶವಂತಪುರದಲ್ಲಿ 4 ಸಾವಿರ ಮಕ್ಕಳು ಓದುವಂತಹ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದ್ದು, ಪಾಲಿಕೆಯಿಂದ ಅಗತ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಒದಗಿಸಬೇಕು ಎಂದು ಶಾಸಕ ಮುನಿರತ್ನ ಮೇಯರ್‌ನ್ನು ಕೋರಿದರು. ಜತೆಗೆ ರಾಜರಾಜೇಶ್ವರಿ ನಗರದಲ್ಲಿ ಕಳೆದ ಮೂರು ತಿಂಗಳಿನಿಂದ 13 ಕಿ.ಮೀ ವೈಟ್‌ಟಾಪಿಂಗ್ ಕಾಮಗಾರಿ ಪೈಕಿ ಕೇವಲ 500 ಮೀಟರ್ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿದ್ದು, ಯಂತ್ರೋಪಕರಣಗಳ ಮೂಲಕ ನಡೆಸಬೇಕಾದ ಕಾಮಗಾರಿಯನ್ನು ಕಾರ್ಮಿಕರಿಂದ ನಡೆಸಲಾಗುತ್ತಿದೆ. ಹೀಗಾಗಿ ಕೂಡಲೇ ಗುತ್ತಿಗೆದಾರರನ್ನು ವಜಾಗೊಳಿಸಬೇಕು ಮತ್ತು ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಎಂದರು.
ಜೆ.ಪಿ.ಪಾರ್ಕ್ ಮೈದಾನದಲ್ಲಿ ಕಳೆದ 20 ದಿನಗಳಿಂದ ವಸ್ತುಪ್ರದರ್ಶನ ನಡೆಯುತ್ತಿದ್ದು, ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲದಂತಾಗಿದೆ. ಜತೆಗೆ ವಾರ್ಡ್‌ಗೆ ಹೊಸದಾಗಿ ಸಹಾಯಕ ಎಂಜಿನಿಯರ್ ನಿಯೋಜನೆಗೊಂಡರೂ, ಹಳೆಯ ಎಂಜಿನಿಯರ್ ಕಾಮಗಾರಿಗಳಿಗೆ ಸಹಿ ಹಾಕುತ್ತಿದ್ದು, 15 ವರ್ಷಗಳಿಂದ ಇದ್ದ ವಾರ್ಡ್ ಕಚೇರಿಯನ್ನು ಕಂದಾಯ ಕಚೇರಿಯಾಗಿಸಿದ್ದಾರೆ. ಹೀಗಾದರೆ ರಸ್ತೆಯಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವೆ?-ಮಮತಾ ವಾಸುದೇವ್, ಜೆ.ಪಿ.ಪಾರ್ಕ್ ವಾರ್ಡ್ ಸದಸ್ಯೆ