ಅಜೆಕಾರು: ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಹೊಂದಿರದ ಕುಟುಂಬಗಳಿಗೆ ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಡಿ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಕೆರ್ವಾಶೆ ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಸರಕಾರದ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರದಾನ ಮಂತ್ರಿಯವರ ಉಜ್ವಲ ಭಾರತ ಯೋಜನೆಯಡಿ ದೇಶಾದ್ಯಂತ ಉಚಿತವಾಗಿ ಅಡುಗೆ ಅನಿಲ ವಿತರಿಸಲಾಗುತ್ತಿದ್ದು ಇದರಿಂದಾಗಿ ಹೊಗೆಮುಕ್ತ ದೇಶವನ್ನಾಗಿ ಮಾಡಲಾಗುತ್ತಿದೆ ಎಂದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವರ್ಷ ದಾಖಲೆಯ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು ಈ ಬಾರಿ ಕಾಲುಸಂಕಗಳ ನಿರ್ಮಾಣ ನಡೆಯ ಲಿವೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ವಹಿಸಿದ್ದರು. ಸದಸ್ಯರಾದ ಧರ್ಮರಾಜ್ ಹೆಗ್ಡೆ, ಸದಾನಂದ ಸಾಲ್ಯಾನ್, ಸುನಿಲ್ ಶೆಟ್ಟಿ, ಭೋಜ ಪೂಜಾರಿ, ಚಂದ್ರಾವತಿ, ಗ್ಯಾಸ್ ಏಜೆನ್ಸಿಯವರಾದ ರಾಮಕೃಷ್ಣ, ತಾ.ಪಂ. ಅಧಿಕಾರಿ ಕೇಶವ ಶೆಟ್ಟಿಗಾರ್, ಗ್ರಾಮಕರಣಿಕ ಸಂಗಮೇಶ್, ಪಿಡಿಒ ಮಧು ಎಂ.ಸಿ. ಕಾರ್ಯದರ್ಶಿ ಅಂಬುಜಾ ಪಾಲ್ಕೆ ಉಪಸ್ಥಿತರಿದ್ದರು.ಗ್ರಾ.ಪಂ ಸದಸ್ಯ ಸದಾನಂದ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಧು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬಂದಿ ಸಹಕರಿಸಿದರು.