Advertisement

ಪ್ರಚಾರಕ್ಕಿಳಿಯದ ಸಂಸದ: ಬಿಜೆಪಿಗೆ ತಲೆನೋವು

10:34 PM Nov 25, 2019 | Lakshmi GovindaRaj |

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಈವರೆಗೆ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ರಾಜ್ಯ ಬಿಜೆಪಿ ನಾಯಕರು ಇದನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್‌ ಬಚ್ಚೇಗೌಡ ಸ್ಪರ್ಧಿಸಿರುವ ಹೊಸಕೋಟೆ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣಾ ಕಣಗಳಲ್ಲಿ ಒಂದಾಗಿದೆ.

Advertisement

ಉಪಚುನಾವಣೆ ಘೋಷಣೆಯಾದಾಗಿನಿಂದಲೂ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಶರತ್‌ ಬಚ್ಚೇಗೌಡ, ಬಿಜೆಪಿ ಟಿಕೆಟ್‌ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಬಿ.ಎನ್‌.ಬಚ್ಚೇಗೌಡ ಅವರು ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಆಗಿರುವ ಬಚ್ಚೇಗೌಡರು, ಈವರೆಗೆ ಆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರವಾಗಿಯೂ ಪ್ರಚಾರ ನಡೆಸಿಲ್ಲ.

ಅಲ್ಲದೇ, ಜಿದ್ದಾಜಿದ್ದಿನ ಕಣವಾಗಿ ರೂಪುಗೊಂಡಿರುವ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್‌ ಪರವಾಗಿಯೂ ಪ್ರಚಾರ ನಡೆಸಿಲ್ಲ. ಇದು ರಾಜ್ಯ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಮನಸ್ಸಿಲ್ಲದಿದ್ದರೆ, ಉಸ್ತುವಾರಿಯಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಾದರೂ ಪ್ರಚಾರ ನಡೆಸಬಹುದಿತ್ತು.

ಆದರೆ ಈವರೆಗೆ ಪ್ರಚಾರಕ್ಕೆ ಬಂದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದು, ಅಭ್ಯರ್ಥಿ ಆಡಳಿತ ಪಕ್ಷದ ಸಂಸದರು ಪ್ರಚಾರ ನಡೆಸದಿರುವುದು ಸರಿ ಎನಿಸದು. ಈ ಸಂಬಂಧ ಹಿರಿಯ ನಾಯಕರು ಬಚ್ಚೇಗೌಡ ಅವರನ್ನು ಕರೆದು ಮಾತನಾಡುವ ಸಾಧ್ಯತೆಯಿದೆ. ನಂತರವೂ ಸ್ಪಂದಿಸದಿದ್ದರೆ ಮುಂದಿನ ಕ್ರಮದ ಬಗ್ಗೆ ಕೈಗೊಳ್ಳಬಹುದು ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next