Advertisement

ಸುಗಮ ಸಂಗೀತಕ್ಕೆ ಸಿಗದ ಪ್ರೋತ್ಸಾಹ

01:25 PM Apr 14, 2017 | |

ದಾವಣಗೆರೆ: ಸರ್ಕಾರ ಆದಿಯಾಗಿ ಯಾವ ಕಡೆಯಿಂದಲೂ ಸುಗಮ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ, ಮನ್ನಣೆ ದೊರೆಯುತ್ತಿಲ್ಲ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ಡಾ| ಕಿಕ್ಕೇರಿ ಕೃಷ್ಣಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ. 

Advertisement

ಗುರುವಾರ ಸುಗಮ ಸಂಗೀತ ಪರಿಷತ್‌, ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡ ಗೀತಗಾಯನ ತರಬೇಶಿ ಶಿಬಿರ ಸಂಗೀತ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಹಿತ್ಯ ಸಮ್ಮೇಳನ ಒಳಗೊಂಡಂತೆ ಅನೇಕ  ಕಾರ್ಯಕ್ರಮದಲ್ಲಿ ಸುಗಮ ಸಂಗೀತಕ್ಕೆ ಹೆಚ್ಚಿನಪ್ರಾಧಾನ್ಯತೆ, ಅವಕಾಶ ನೀಡಲಾಗುತ್ತಿಲ್ಲ. ಅವಕಾಶ  ಸಿಗದೆ ಸಾವಿರಾರು ಪ್ರತಿಭಾವಂತರ ಪ್ರತಿಭೆ ನಾಲ್ಕು ಮೂಲೆಯ ಮಧ್ಯೆದಲ್ಲಿಯೇ ಮುರುಟಿ ಹೋಗುತ್ತಿದೆ ಎಂದು ಬೇಸರಿಸಿದರು. 

ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುವ ತನಕ ಕನ್ನಡ ಎನ್ನುತ್ತಾರೆ ಅಧಿಕಾರದ ಕುರ್ಚಿ ಸಿಕ್ಕ ತಕ್ಷಣ ಕನ್ನಡವನ್ನೇ  ಮರೆಯುತ್ತಾರೆ. ಕನ್ನಡದ ಕಾರ್ಯಕ್ರಮಕ್ಕೆ ಹೇಮಾಮಾಲಿನಿ, ಸೋನು ನಿಗಮ್‌ ಅಂತಹವರನ್ನು ಲಕ್ಷಗಟ್ಟಲೆ ಹಣ ನೀಡಿ ಕರೆಸಲಾಗುತ್ತದೆ. ಸುಗಮ ಸಂಗೀತ ಲೋಕದ ದಿಗ್ಗಜರನ್ನೇ ಕರೆಸಲು ಮೀನಾ ಮೇಷ ಎಣಿಸಲಾಗುತ್ತದೆ.

ಕರೆಸಿದರೂ ಕೊಡುವ ಗೌರವಧನದ ಬಗ್ಗೆ ಹೇಳುವಂತೆಯೇ ಇಲ್ಲ. ಅಧಿಕಾರಿ ವರ್ಗದ ಅಹಂನ ಪ್ರತೀಕವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡನಾಡಿನ ಕಲಾವಿದರ ಅಪಮಾನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ, ಅಧಿಕಾರಿಗಳು ನೆರವು ನೀಡಲಿ ಬಿಡಲಿ ನಾವೆಲ್ಲರೂ ಒಗ್ಗೂಡಿ ಸುಗಮ ಸಂಗೀತ ಪರಿಷತ್‌ ಬೆಳೆಸಬೇಕು.

Advertisement

ಪ್ರತಿ ಜಿಲ್ಲೆಯಲ್ಲಿ 1 ಸಾವಿರವಾದರೂ ಸದಸ್ಯತ್ವ ಆಗಬೇಕು. ಅದಕ್ಕಾಗಿಯೇ ಸದಸ್ಯತ್ವ ನೋಂದಣಿ ಅಭಿಯಾನ ಪ್ರಾರಂಭಿಸಲಾಗುವುದು. 30 ಜಿಲ್ಲೆಯ 30 ಸಾವಿರ ಜನರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಿದರೆ ಎಲ್ಲರೂ ಬರುತ್ತಾರೆ. ಬೇಕಾದ ನೆರವು ನೀಡುತ್ತಾರೆ.

ವಿಶ್ವ ಸುಗಮ ಸಂಗೀತ ಸಮ್ಮೇಳನ, ಕನ್ನಡೋತ್ಸವದ ವಾತಾವರಣ ನಿರ್ಮಾಣದ ಜೊತೆಗೆ ಮಾದರಿ ಪರಿಷತ್‌, ಅಕಾಡೆಮಿ ಆಗಲು ಕನ್ನಡಿಗರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪರಿಷತ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ನಗರ ಶ್ರೀನಿವಾಸ ಉಡುಪ ಮಾತನಾಡಿ, ನಾಡಿನ ಪ್ರಖ್ಯಾತ ಕವಿಗಳ ಗೀತೆಗಳನ್ನು ಕನ್ನಡಿಗರ ಮನ,

ಹೃದಯಕ್ಕೆ ಮುಟ್ಟಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಸುಗಮ ಸಂಗೀತ ಪ್ರಾಕಾರಕ್ಕೆ ಅಕಾಡೆಮಿ ಪ್ರಾರಂಭಿಸಿದಲ್ಲಿ ಸುಗಮ ಸಂಗೀತ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತದೆ. ಮುಂಚೂಣಿಗೆ ಬರುತ್ತದೆ. ಸರ್ಕಾರ ಅಕಾಡೆಮಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. 

ಶಿಬಿರ ಉದ್ಘಾಟಿಸಿದ ನಾಡೋಜ ಡಾ| ಬಿ.ಕೆ. ಸುಮಿತ್ರಾ ಮಾತನಾಡಿ, ನಾವೆಲ್ಲ ಸಣ್ಣವರಿದ್ದಾಗ ಈ ರೀತಿಯ ತರಬೇತಿ, ಶಿಬಿರ ಯಾವುದೂ ಇರಲಿಲ್ಲ. ನಾವಾಗಿಯೇ ಕಲಿಯಬೇಕಿತ್ತು. ಈಗ ಇರುವ ಸಾಕಷ್ಟು ಅವಕಾಶ ಸದುಪಯೋಗಪಡಿಸಿಕೊಂಡು ಚೆನ್ನಾಗಿ ಕಲಿತು, ಒಳ್ಳೆಯ ಗಾಯಕರಾಗಿ ಹೊರ ಹೊಮ್ಮಬೇಕು ಎಂದು ಆಶಿಸಿದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ವಾಮದೇವಪ್ಪ, ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್‌, ರೇಖಾ ಓಂಕಾರಪ್ಪ, ವೀಣಾ ಕೃಷ್ಣಮೂರ್ತಿ ಇತರರು ಇದ್ದರು. ಹೇಮಂತ್‌ ಕುಮಾರ್‌ ಪ್ರಾರ್ಥಿಸಿದರು. ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next