Advertisement

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

03:43 AM Jan 12, 2025 | Team Udayavani |

ಉಡುಪಿ: ಸಂವಿಧಾನ ತಿದ್ದುಪಡಿ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಾಡಿದ ಮಹಾ ಪ್ರಮಾದದಿಂದ ದೇಶಕ್ಕೆ ಭಾರೀ ಹಿನ್ನಡೆ ಆಗಿದೆ. ಅನಂತರದ ಪ್ರಧಾನಿಗಳಾದ ವಿ.ಪಿ.ಸಿಂಗ್‌, ಅಟಲ್‌ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರೆಲ್ಲ ಈ ಪ್ರಮಾದವನ್ನು ಸರಿಪಡಿಸುವ ಕಾರ್ಯ ಮಾಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.

Advertisement

ಸಿಟಿಜನ್‌ ಫಾರ್‌ ಸೋಶಿಯಲ್‌ ಜಸ್ಟಿಸ್‌ ವತಿಯಿಂದ ಶನಿವಾರ ಪುರಭವನದಲ್ಲಿ ಸಂವಿಧಾನ ಸಮ್ಮಾನ ಕಾರ್ಯಕ್ರಮದಲ್ಲಿ “ಸಂವಿಧಾನ ಬದಲಿಸಿದ್ದು ಯಾರು?’ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು.

ಅಂಬೇಡ್ಕರ್‌ ನಿಲುವಿಗೆ ಕಾಂಗ್ರೆಸ್‌ ವಿರೋಧ
ಸಂಶೋಧಕಿ ಡಾ| ಪ್ರಫ‌ುಲ್ಲಾ ಮಲ್ಲಾಡಿ ಅವರು ಕೃತಿಯ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನಿಂದ ಡಾ| ಬಿ. ಅಂಬೇಡ್ಕರ್‌ ಸಂವಿಧಾನ ಸಭೆಗೆ ಬಾರದಂತೆ ಹಲವು ಕುತಂತ್ರ ನಡೆಸಲಾಗಿತ್ತು. ಅನಂತರ ಅಂಬೇಡ್ಕರ್‌ ಮಂಡಿಸಿದ್ದ ಹಿಂದೂ ಕೋಡ್‌ ಬಿಲ್‌, ಹಿಂದುಳಿದವರಿಗೆ ಪ್ರತ್ಯೇಕ ಮೀಸಲಾತಿ ಇತ್ಯಾದಿಯನ್ನು ಕಾಂಗ್ರೆಸ್‌ ವಿರೋಧಿಸಿತ್ತು. ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ಹಾಗೂ ಮಹಿಳಾ ಮೀಸಲಾತಿ ವಿರೋಧಿ  ನಿಲುವನ್ನು ಅಂಬೇಡ್ಕರ್‌ ಕಟುವಾಗಿ ಟೀಕಿಸಿದ್ದರು. ಅಂಬೇಡ್ಕರ್‌ರನ್ನು ಕಾಂಗ್ರೆಸ್‌ ಚುನಾವಣೆಯಲ್ಲಿ ಸೋಲಿಸಿದ್ದು ಮಾತ್ರವಲ್ಲ, ಅವರಿಗೆ ಅವಮಾನವನ್ನೂ ಮಾಡಿದೆ ಎಂದರು.

ಕಚ್ಚಾರು ಶ್ರೀ ಮಾಲ್ತಿದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್‌ ದಾಸ್‌ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಸಮ್ಮಾನ ಕಾರ್ಯಕ್ರಮದ ವಿಭಾಗ ಸಂಚಾಲಕ ಕೆ. ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕಿ ರೇಶ್ಮಾ ಉದಯ ಶೆಟ್ಟಿ ಸ್ವಾಗತಿಸಿ, ಉಮೇಶ್‌ ನಾಯ್ಕ ಸಂವಿಧಾನ ಪೀಠಿಕೆ ಬೋಧಿಸಿದರು. ಜಿಲ್ಲಾ ಮಾಧ್ಯಮ ಪ್ರಮುಖ್‌ ಶ್ರೀನಿಧಿ ಹೆಗ್ಡೆ ವಂದಿಸಿ, ರತ್ನಾಕರ ಇಂದ್ರಾಳಿ ನಿರೂಪಿಸಿದರು.

ರಾಹುಲ್‌ ಹೆಸರು ಉಲ್ಲೇಖಿಸದೆ ವಾಗ್ಧಾಳಿ
ಸಂವಿಧಾನ ಬದಲಿಸುತ್ತಾರೆ ಎಂಬ ಬಗ್ಗೆ ಕೆಲವು ವರ್ಷಗಳಿಂದ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಒಬ್ಬರು ಕೈಯಲ್ಲಿ ಕೆಂಪು ಬಣ್ಣದ ಸಣ್ಣ ಪುಸ್ತಕ ಹಿಡಿದು ಎಲ್ಲೆಡೆ ಓಡಾಡುತ್ತಿದ್ದಾರೆ. ಅದರಲ್ಲಿ ಎಷ್ಟು ಪುಟವಿದೆ?, ಆರ್ಟಿಕಲ್‌ ಎಷ್ಟಿದೆ? ತಿದ್ದುಪಡಿ ಎಷ್ಟಾಗಿದೆ ಮತ್ತು ಸಸ್ಪೆಂಡ್‌ ಮಾಡಿದ್ದು ಯಾರು ಎಂಬುದು ಅವರಿಗೆ ತಿಳಿದಿರಲಿಕ್ಕಿಲ್ಲ.

Advertisement

ಸಂವಿಧಾನ ಬದಲಾಯಿಸುತ್ತಾರೆ ಎನ್ನುವವರಿಗೆ ಸಂವಿಧಾನ ಬಗ್ಗೆ ಏನೂ ಗೊತ್ತಿಲ್ಲ. ತಂದೆ, ತಾಯಿ, ಅಜ್ಜ, ಅಜ್ಜಿಯಿಂದ ಸಂವಿಧಾನ ತಿದ್ದುಪಡಿಯಾಗಿ ಮೊಮ್ಮಕ್ಕಳು ಸಂವಿಧಾನದ ಕೆಂಪು ಪುಸ್ತಕ ಹಿಡಿದು ಓಡಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಹೆಸರು ಉಲ್ಲೇಖಿಸದೇ ಕೆ.ಅಣ್ಣಾಮಲೈ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.