Advertisement
ಕರಾವಳಿಗೆ ಬಂದವರಿಗೆ ಇಷ್ಟವಾಗುವ ತರಕಾರಿಗಳಲ್ಲಿ ಉಡುಪಿ ಗುಳ್ಳ ಬದನೆ ಮುಖ್ಯವಾದುದು. ಹಾಗೆಯೇ, ಕರಾವಳಿಯ ಎಲ್ಲ ತಾಲೂಕುಗಳಲ್ಲಿಯೂ ಬೇಸಿಗೆಯಲ್ಲಿ ಹೆಚ್ಚು ಜನರು ಬೆಳೆಯುವ ಕಾಯಿಪಲ್ಲೆಗಳಲ್ಲಿ ನಾಮದ ಬದನೆಗೆ ಅಗ್ರಸ್ಥಾನವಿದೆ. ದುಂಡಗಿರುವ ಈ ಬದನೆಕಾಯಿ, ಚೆನ್ನಾಗಿ ಪೋಷಿಸಿದರೆ ಒಂದು ಕಿ.ಲೋದ ತನಕ ತೂಗುವ ಕಾರಣ ಬೆಳೆದವನಿಗೆ ಸಮೃದ್ಧವಾಗಿ ಲಾಭ ತಂದುಕೊಡುತ್ತದೆ.
Related Articles
Advertisement
ಗಿಡ ನಾಟಿಗೆ ಎರಡು ಅಡಿ ಆಳ ಮತ್ತು ಅಗಲವಿರುವ ಸಾಲುಗಳನ್ನು ತೆಗೆದು, ಕಸಕಡ್ಡಿಗಳನ್ನು ಸುಟ್ಟು ಸಿದ್ಧಪಡಿಸಿದ ಸುಡುಮಣ್ಣು ಮತ್ತು ಒಣಗಿದ ಸಗಣಿ ಗೊಬ್ಬರವನ್ನು ತುಂಬುತ್ತಾರೆ. ಮಡಿಯಿಂದ ಕಿತ್ತ ಬದನೆ ಗಿಡವನ್ನು ಕರಗಿಸಿದ ಹಸೀ ಸಗಣಿಯಲ್ಲಿ ಬೇರಿನ ತನಕ ಮುಳುಗಿಸಿ ನಾಟಿ ಮಾಡಿದರೆ ಗಿಡಗಳಿಗೆ ಅದೇ ಮೊದಲ ಪೋಷಕಾಂಶವಾಗುವುದಂತೆ.
ನೆಟ್ಟ ಗಿಡಗಳಿಗೆ ಬೆಳಗ್ಗೆ ಮತ್ತು ಸಂಜೆ ಬಿಸಿಲಿಲ್ಲದಿರುವಾಗ ಸಗಣಿಯನ್ನು ನೀರಿನಲ್ಲಿ ತೆಳ್ಳಗೆ ಕರಗಿಸಿ,ಬುಡಕ್ಕೆ ಹೊಯ್ದು, ಅದು ನೆನೆಯುವಷ್ಟು ನೀರು ಚಿಮುಕಿಸುತ್ತಾರೆ. ಗಿಡ ಜೀವ ಹಿಡಿಯುವ ತನಕ ಕೃತಕ ನೆರಳೂ ಬೇಕಾಗುತ್ತದೆ. ಗಿಡ ಚಿಗುರುತ್ತಿದ್ದಂತೆ ಹಸಿರೆಲೆಯ ಸಗಣಿ ಗೊಬ್ಬರವನ್ನು ಬುಡಕ್ಕಿರಿಸಿ ತೆಳ್ಳಗೆ ಸುತ್ತಲಿನ ಮಣ್ಣನ್ನು ಸಾಲುಗಳ ಇಕ್ಕಡೆಗಳಿಗೂ ಹಾರೆಯಿಂದ ಸೇರಿಸುತ್ತಾರೆ.
ಸುಫಲ ರಸಗೊಬ್ಬರವನ್ನು ಅಲ್ಪ ಪ್ರಮಾಣದಲ್ಲಿ ವಾರಕ್ಕೊಮ್ಮೆ ಕೊಡಬೇಕು, ತಿಂಗಳಿಗೊಮ್ಮೆ ಸಗಣಿ ಗೊಬ್ಬರವನ್ನು ಬುಡಕ್ಕಿಡಬೇಕು. ಮತ್ತೆ ಮಣ್ಣು ಸೇರಿಸಬೇಕು. ನೆಟ್ಟು ಒಂದೂವರೆ ತಿಂಗಳಲ್ಲಿ ಕಾಯಿಗಳಿಂದ ಗಿಡ ಬಾಗಿ, ಕಿ.ಲೋ ಗಾತ್ರದ ಬದನೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಮೂರು ದಿನಗಳಿಗೊಮ್ಮೆ ಒಂದು ಗಿಡದಿಂದ ಎರಡು ಕಿ.ಲೋ ಬದನೆಕಾಯಿಗಳನ್ನು ಐದು ತಿಂಗಳವರೆಗೆ ಕೊಯ್ಯಬಹುದು.
ಕಿ.ಲೋಗೆ ಆರಂಭದಲ್ಲಿ ಮೂವತ್ತು ರೂಪಾಯಿ ಇರುತ್ತದೆ. ಇದು ತುಂಬ ಲಾಭ ತರುವ ಸುಲಭ ಕೃಷಿಯ ಬೆಳೆ ಎಂಬುದು ವಿನ್ಸಿ ಅನುಭವ. ಎರಡು ಅಡಿಗೊಂದರಂತೆ ಗಿಡ ನಾಟಿ ಮಾಡಬೇಕು. ಗಿಡಗಳು ಹೆಚ್ಚು ಒತ್ತಾಗಿದ್ದರೆ ಫಸಲು ಕಡಮೆಯಾಗುತ್ತದೆ. ಒಂದು ಗಿಡದಿಂದ ಕಡಮೆ ಎಂದರೂ ಐದು ನೂರು ರೂಪಾಯಿ ಗಳಿಸಬಹುದು. ಎಕರೆಗೆ ಖರ್ಚು ಕಳೆದು ಐವತ್ತು ಸಾವಿರ ಲಾಭ.
ಇದರ ಜೊತೆಗೆ ಅಂತರದ ನಡುವೆ ಹರಿವೆ, ಅಲಸಂದೆ, ಬೆಂಡೆ, ಮೆಣಸಿನಕಾಯಿ, ಸಿಹಿ ಗೆಣಸು, ಮರಗೆಣಸು ಬೆಳೆಯುತ್ತ ಅದರಿಂದ ಪ್ರತ್ಯೇಕ ಆದಾಯ ಪಡೆಯುತ್ತಿದ್ದೇನೆಂದು ವಿನ್ಸಿ ವಿವರಿಸುತ್ತಾರೆ. ನಾಮದ ಬದನೆ, ಸಮಾರಂಭಗಳ ಅಡುಗೆಗೆ ಬೇಕೇ ಬೇಕು. ಕರಾವಳಿಯ ಪೋಡಿ ಅಥವಾ ಬೋಂಡಾ ತಯಾರಿಕೆಗೆ ಅದು ಸೂಕ್ತವಾಗಿದೆ. ಪಲ್ಯ, ಸಾಂಬಾರು, ಗೊಜ್ಜು ಮತ್ತು ಮಜ್ಜಿಗೆ ಹುಳಿಗಳಿಗಂತೂ ತುಂಬ ರುಚಿ ಕೊಡುತ್ತದೆ.
ಏಪ್ರಿಲ್ ತಿಂಗಳ ಬಳಿಕ ರುಚಿ ಕಹಿಯಾಗುವ ಕಾರಣ ಬೇಡಿಕೆ ತಗ್ಗುತ್ತದೆಯಂತೆ. ನಾಮದ ಬದನೆಗೂ ಹಳುಗಳ ಕಾಟವಿದೆ. ಎಲೆಗಳನ್ನು ಸುರುಳಿ ಸುತ್ತುವ ಹುಳಗಳನ್ನು ವಿನ್ಸಿ ಕೈಯಿಂದ ತೆಗೆದು ಕೊಲ್ಲುತ್ತಾರೆ. ಕಾಯಿ ಕೊರಕಗಳ ನಿವಾರಣೆಗೆ ಪೂರ್ವಭಾವಿಯಾಗಿ ಪರಿಸರ ಸ್ನೇಹಿಯಾದ ಕೀಟನಾಶಕ ಸಿಂಪಡಿಸುತ್ತಾರೆ. ಗಿಡಗಳಿಗೆ ಬುಡಕ್ಕೆ ನೀರಿನ ಕೊರತೆಯಾದರೆ ಗೆದ್ದಲುಗಳ ಬಾಧೆಯಿಂದ ಗಿಡ ಸಾಯುವ ಸಮಸ್ಯೆಯೂ ಇದೆಯಂತೆ.
ನೂರು ಬದನೆ ಗಿಡಗಳಿದ್ದರೆ ಸರಾಸರಿ ತಿಂಗಳಿಗೆ ಎಂಟರಿಂದ ಹತ್ತು ಸಾವಿರ ರೂಪಾಯಿಗಳಿಸಲು ಸಾಧ್ಯವೆನ್ನುವ ವಿನ್ಸಿ ಒಂದು ಹಸು ಸಾಕಿದ್ದಾರೆ. ಕೊಟ್ಟಿಗೆ ತೊಳೆದ ಗಂಜಲು ಮಿಶ್ರಿತ ನೀರನ್ನು ಗಿಡಗಳ ಬುಡಕ್ಕೆ ಸೇರಿಸುತ್ತಾರೆ. ನೆನೆಸಿದ ಶೇಂಗಾ ಹಿಂಡಿಯನ್ನು ಹಸೀ ಸೆಗಣಿಯೊಂದಿಗೆ ನೀರಿನಲ್ಲಿ ಕರಗಿಸಿ ಹುಳಿ ಬಂದ ಬಳಿಕ ಪ್ರತೀ ಗಿಡದ ಬುಡಕ್ಕೆ ಮಿತವಾಗಿ ನೀಡುವ ಕ್ರಮವನ್ನು ಇಪ್ಪತ್ತು ದಿನಗಳಿಗೊಮ್ಮೆ ಮಾಡುತ್ತಾರೆ. ಇದರಿಂದಾಗಿ ಹೆಚ್ಚು ಸಾವಯವದ ಸಣ್ತೀವುಂಡ ಗಿಡಗಳು ಭರ್ತಿ ತೂಕದ ಕಾಯಿ ಕೊಡುತ್ತವೆ. ಪರಿಮಳ, ಮೃದುವಾಗಿ ಬೇಯುವ ಗುಣ, ಆಕರ್ಷಕ ಬಣ್ಣಗಳಿಂದಾಗಿ ಬದನೆಕಾಯಿಗಳು ಸುಲಭವಾಗಿ ಗ್ರಾಹಕರ ಮನ ಗೆಲ್ಲುತ್ತವೆ.
* ಪ. ರಾಮಕೃಷ್ಣ ಶಾಸ್ತ್ರಿ