ನವದೆಹಲಿ: ನಾಗರ ಹಾವಿನ ವಿಷದ ರೇವ್ ಪಾರ್ಟಿ ಆಯೋಜಿಸಿದ್ದ ಆರೋಪದಲ್ಲಿ ಬಿಗ್ ಬಾಸ್ OTT 2 ಸೀಸನ್ ವಿಜೇತ ಎಲ್ವಿಶ್ ಯಾದವ್ ಸೇರಿದಂತೆ ಐವರು ಆರೋಪಿಗಳನ್ನು ನೋಯ್ಡಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:Congress; ಸಿದ್ದರಾಮಯ್ಯರದ್ದು ವೈಯಕ್ತಿಕ ಅಭಿಪ್ರಾಯ; ಹೇಳಿಕೆಯೇ ಶಾಸನವಲ್ಲ: ಪ್ರಿಯಾಂಕ್
ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಲ್ವಿಶ್ ಯಾದವ್, ರಾಹುಲ್, ಟಿಟುನಾಥ್, ಜಯಕರಣ್, ನಾರಾಯಣ್ ಹಾಗೂ ರವಿನಾಥ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಎಫ್ ಐಆರ್ ಮಾಹಿತಿಯಂತೆ ರೇವ್ ಪಾರ್ಟಿ ನಡೆಸುತ್ತಿದ್ದ ಬ್ಯಾಂಕ್ವೆಟ್ ಹಾಲ್ ನಲ್ಲಿ 5ನಾಗರಹಾವು, 1 ಹೆಬ್ಬಾವು, ಎರಡು ತಲೆಯ ಹಾವು 1, ಇಲಿ ಹಾವು ಒಂದು ಸೇರಿದಂತೆ ಒಟ್ಟು ಒಂಬತ್ತು ವಿಷಕಾರಿ ಹಾವು ಹಾಗೂ 20 ಗ್ರಾಂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ರೇವ್ ಪಾರ್ಟಿಯಲ್ಲಿ ಮಾದಕ ವ್ಯಸನಿಗಳು ನಾಗರ ಹಾವಿನಿಂದ ಕಚ್ಚಿಸಿಕೊಳ್ಳುವುದು, ಅಧಿಕ ಅಮಲಿಗಾಗಿ ವಿಷ ಸೇವನೆ ಮಾಡುವುದು ಸಾಮಾನ್ಯವಾಗಿದೆ. ಈ ರೇವ್ ಪಾರ್ಟಿಯಲ್ಲಿಯೂ ಬಂಧಿತ ಆರೋಪಿಗಳು ಹಾವಿನ ವಿಷ ಸೇವನೆಯಲ್ಲಿ ತೊಡಗಿಕೊಂಡಿರುವುದಾಗಿ ಎನ್ ಜಿಒ ನೀಡಿದ ಖಚಿತ ಮಾಹಿತಿ ಮೇರೆಗೆ ನೋಯ್ಡಾ ಪೊಲೀಸರು ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ರೇವ್ ಪಾರ್ಟಿಗೆ ವಿದೇಶಿ ಮಹಿಳೆಯೊಬ್ಬಳನ್ನು ಆಹ್ವಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆ 1972ರ ಸೆಕ್ಷನ್ 9, 39, 48(ಎ), 49, 50 ಮತ್ತು 51ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಸಂದೀಪ್ ಚೌಧರಿ ತಿಳಿಸಿದ್ದಾರೆ.