ಸಿಡ್ನಿ: ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಕ್ರಿಕೆಟ್ ಆಡಲು ಹಲವು ದೇಶಗಳು ಹಿಂದೆ ಮುಂದೆ ನೋಡುತ್ತಿದೆ. 18 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ಥಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡವು ಮೊದಲ ಪಂದ್ಯಕ್ಕೆ ಆರಂಭಕ್ಕೆ ಮುನ್ನವೇ ಪ್ರವಾಸವನ್ನು ಮೊಟಕುಗೊಳಿಸಿತ್ತು. ಭದ್ರತೆ ಭೀತಿಯ ಕಾರಣಕ್ಕೆ ಮೈದಾನಕ್ಕೆ ಇಳಿಯದ ಕಿವೀಸ್ ಪಡೆ ಮರುದಿನವೇ ಹೊರಟು ನಿಂತಿತ್ತು.
ಇದಾದ ಕೆಲ ದಿನಗಳ ಬಳಿಕ ಇಂಗ್ಲೆಂಡ್ ಕೂಡಾ ತನ್ನ ಪಾಕ್ ಪ್ರವಾಸವನ್ನು ರದ್ದು ಮಾಡಿತ್ತು. ಅದೇ ಭಧ್ರತೆಯ ನೆಪವೊಡ್ಡಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದಿನ ತಿಂಗಳು ನಡೆಯಬೇಕಿದ್ದ ಸರಣಿಯನ್ನು ರದ್ದು ಮಾಡಿತ್ತು. ಇದು ಪಾಕ್ ಕ್ರಿಕೆಟ್ ಬೋರ್ಡ್ ಮತ್ತು ಪಾಕ್ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿತ್ತು.
ಈ ಘಟನೆಯ ಬಗ್ಗೆ ಹಲವಾರು ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವರು ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಜರೆದಿದ್ದಾರೆ. ಇದೀಗ ಆಸೀಸ್ ಕ್ರಿಕೆಟಿಗ ಉಸ್ಮಾನ್ ಖ್ವಾಜಾ ಕೂಡಾ ಧ್ವನಿಗೂಡಿಸಿದ್ದಾರೆ.
ಇದನ್ನೂ ಓದಿ:ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೆ ಇಂದಿಗೆ 14 ವರ್ಷ: ಇಲ್ಲಿದೆ ಹೈಲೈಟ್ಸ್
ಆಟಗಾರರಿಗೆ ಮತ್ತು ಸಂಸ್ಥೆಗಳಿಗೆ ಪಾಕಿಸ್ಥಾನಕ್ಕೆ ‘ನೋ’ ಎನ್ನಲು ಬಹುಶಃ ಸುಲಭವಾಗಿರುತ್ತದೆ. ಯಾಕೆಂದರೆ ಅದು ಪಾಕಿಸ್ಥಾನ. ಬಹುಶಃ ಬಾಂಗ್ಲಾದೇಶಕ್ಕೂ ಇದು ಅನ್ವಯವಾಗುತ್ತದೆ. ಆದರೆ ಇದೇ ಭದ್ರತೆ ಭೀತಿಯಂತಹ ಪರಿಸ್ಥಿತಿ ಭಾರತದಲ್ಲಾದರೆ ಯಾವ ಆಟಗಾರ, ದೇಶವೂ ‘ನೋ’ ಎನ್ನುವುದಿಲ್ಲ ಎಂದು ಉಸ್ಮಾನ್ ಖ್ವಾಜಾ ಹೇಳಿದ್ದಾರೆ.
ಹಣದ ಮಹತ್ವವಿದು. ನಮಗೆಲ್ಲಾ ಗೊತ್ತಿರುವಂತೆ ಹಣ ದೊಡ್ಡ ಪ್ರಭಾವ ಬೀರುತ್ತದೆ. ಪಾಕಿಸ್ಥಾನವು ಕ್ರಿಕೆಟ್ ಆಡಲು ಸುರಕ್ಷಿತ ಸ್ಥಳ ಎಂದು ತಮ್ಮ ಪಂದ್ಯಾವಳಿಗಳ ಮೂಲಕ ಪದೇ ಪದೇ ಸಾಬೀತುಪಡಿಸುತ್ತಲೇ ಇದ್ದಾರೆ. ಹೀಗಾಗಿ ಯಾರೂ ಅಲ್ಲಿಗೆ ಹೋಗದಿರಲು ಯಾವುದೇ ಕಾರಣವಿಲ್ಲ ಎಂದು ಪಾಕಿಸ್ಥಾನದಲ್ಲಿ ಹುಟ್ಟಿ ಆಸೀಸ್ ಪರವಾಗಿ ಆಡುತ್ತಿರುವ ಉಸ್ಮಾನ್ ಖ್ವಾಜಾ ಹೇಳಿದ್ದಾರೆ.