Advertisement

ಒಂದು ವರ್ಷ ಸರಕಾರ ಸುಭದ್ರ

06:00 AM Jun 16, 2018 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯುವ ವರೆಗೆ ನನ್ನನ್ನು ಯಾರೂ ಮುಟ್ಟಲಾಗದು. ಕನಿಷ್ಠ ಒಂದು ವರ್ಷವಂತೂ ಮುಖ್ಯಮಂತ್ರಿ ಯಾಗಿ ಇರುತ್ತೇನೆ. ಈ ಅವಧಿಯಲ್ಲಿ ನಾನು ಅಂದುಕೊಂಡಿದ್ದನ್ನು ಮಾಡಿ ತೋರಿಸುತ್ತೇನೆ. ಇದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ. ಈ ತನಕ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತೇನೆ ಎನ್ನುತ್ತಿದ್ದ ಕುಮಾರಸ್ವಾಮಿ, ದಿಢೀರಾಗಿ ಇಂಥದ್ದೊಂದು ಹೇಳಿಕೆ ನೀಡಿರುವುದು ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ. ಸಚಿವ ಸಂಪುಟ ರಚನೆಯ ಬಳಿಕ ಹಾಗೂ ಸಮನ್ವಯ ಸಮಿತಿ ಸಭೆಯ ಬೆನ್ನಲ್ಲೇ ಸಿಎಂ ಈ ಹೇಳಿಕೆ ಈಗ ಚರ್ಚೆಗೂ ಗ್ರಾಸವಾಗಿದೆ.

Advertisement

ಶುಕ್ರವಾರ ಬೆಂಗಳೂರಿನಲ್ಲಿ 15ನೇ ರಾಜ್ಯ ಮಟ್ಟದ ಲೆಕ್ಕಪರಿಶೋಧಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾಧ್ಯಮ ಗಳು ನಕಾರಾತ್ಮಕವಾಗಿ ವರದಿ ಮಾಡುತ್ತಿವೆ. ಆದರೆ ಎಷ್ಟು ದಿನಗಳ ಕಾಲ ಇದೇ ವರದಿ ಮಾಡುತ್ತೀರಾ? ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಕನಿಷ್ಠ ಲೋಕಸಭಾ ಚುನಾವಣೆ ಮುಗಿಯುವವರೆಗಂತೂ ನನ್ನನ್ನು ಯಾರೂ ಏನೂ ಮಾಡಲು ಆಗದು. ಈ ಅವಧಿಯಲ್ಲಿ ನಾನು ಅಂದುಕೊಂಡ ಅಭಿವೃದ್ಧಿ ಮಾಡುತ್ತೇನೆ ಎಂದರು. ಪ್ರಕೃತಿಯೂ ಈಗ ನನ್ನ ಪರವಾಗಿದ್ದು, ಉತ್ತಮ ಮುಂಗಾರು ಮಳೆ ಆಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದರಿಂದ ಹೊರೆ ಕಡಿಮೆ ಆದಂತಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.

ಹೊಸ ಬಜೆಟ್‌ ಬಗ್ಗೆ ಭಯ: ಶಿಕ್ಷಣ, ಆರೋಗ್ಯ ಮತ್ತು ವಸತಿ ನನ್ನ ಮೊದಲ ಆದ್ಯತೆ ಆಗಿರಲಿದೆ. ಈ ನಿಟ್ಟಿನಲ್ಲಿ ಸರಕಾರದ ಯೋಜನೆಗಳನ್ನು ರೂಪಿಸಲಾಗುವುದು. ಜುಲೈ ಮೊದಲ ವಾರದಲ್ಲಿ ಬಜೆಟ್‌ ಮಂಡನೆ ಮಾಡಲಿದ್ದು, ಇದಕ್ಕೆ ಪೂರಕ ಸಿದ್ಧತೆ ನಡೆದಿವೆ. ಆದರೆ ಕೆಲವರು ಮತ್ತೂಂದು ಬಜೆಟ್‌ ಯಾಕೆ ಎಂದು ಹೇಳುತ್ತಿದ್ದಾರೆ. ಇದರ ಹಿಂದೆ ಕುಮಾರಸ್ವಾಮಿಗೆ ಒಳ್ಳೆಯ ಹೆಸರು ಬಂದುಬಿಡುತ್ತದೆ ಎಂಬ ಭಯ ಎದ್ದುಕಾಣುತ್ತಿದೆ ಎಂದರು. ರೈತರ ಸಂಪೂರ್ಣ ಸಾಲಮನ್ನಾ ವಿಚಾರದಲ್ಲಿ ನನ್ನನ್ನು ವಚನ ಭ್ರಷ್ಟನಂತೆ ಸುದ್ದಿವಾಹಿನಿಗಳು ಬಿಂಬಿಸುತ್ತಿವೆ. ಇದರಿಂದ ಏನು ಲಾಭ? ಅಭಿವೃದ್ಧಿ ಕಡೆ ಚಿಂತನೆ ಮಾಡಿ. ಜನರ ಸಮಸ್ಯೆಗಳ ಕುರಿತು ನನ್ನ ಗಮನಸೆಳೆಯಿರಿ ಎಂದು ಮನವಿ ಮಾಡಿದರು.

ಎಸ್ಕೇಪ್‌ ಆಗುವುದಿಲ್ಲ: ಕೃಷಿ ಸಾಲಮನ್ನಾ ನಿರ್ಧಾರದಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ. ಇದು ನನ್ನ ಬದ್ಧತೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲ, ಸಹಕಾರ ಸಂಘಗಳಲ್ಲಿನ ಸಾಲಗಳ ಬಗ್ಗೆ ಮಾಹಿತಿ ಕಲೆಹಾಕಿದ್ದೇನೆ. ಮುಂಬರುವ ದಿನಗಳಲ್ಲಿ ಸಾಲಮನ್ನಾ ಘೋಷಿಸುತ್ತೇನೆ. ಯಾವುದೇ ಕಾರಣಕ್ಕೂ ಎಸ್ಕೇಪ್‌ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಡಾ| ಜಿ. ಪರಮೇಶ್ವರ ಅವರು ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಗಡುವು ವಿಧಿಸಿಲ್ಲ ಎಂದಿದ್ದಾರೆ ವಿನಾ ಸಾಲಮನ್ನಾ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಈ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ ಎಂದರು.

Advertisement

ಕನಿಷ್ಠ ಪ್ರಣಾಳಿಕೆಗೆ ಸಮಿತಿ
ಸಮ್ಮಿಶ್ರ ಸರಕಾರದ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲು ಐವರ ಸಮಿತಿ ರಚಿಸಿ ಸರಕಾರದ ಸಮನ್ವಯ ಸಮಿತಿ ಸಂಚಾಲಕ ಕೆ. ಡ್ಯಾನಿಷ್‌ ಅಲಿ ಆದೇಶ ಹೊರಡಿಸಿದ್ದಾರೆ. ಈ ಸಮಿತಿಯಲ್ಲಿ ಕಾಂಗ್ರೆಸ್‌ ಸಂಸದ ಡಾ| ಎಂ. ವೀರಪ್ಪ ಮೊಲಿ, ಸಚಿವರಾದ ಆರ್‌.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್‌, ಜೆಡಿಎಸ್‌ನ ಸಚಿವ ಎಚ್‌.ಡಿ. ರೇವಣ್ಣ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಸ್‌. ಸುಬ್ರಮಣ್ಯ ಇದ್ದಾರೆ.ಗುರುವಾರ ನಡೆದ ಸಮ್ಮಿಶ್ರ ಸರಕಾರದ ಮೊದಲ ಸಮನ್ವಯ ಸಮಿತಿ ಸಭೆಯಲ್ಲಿ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಐವರ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. 10 ದಿನಗಳಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಪಡಿಸಲಾಗುವುದು ಎಂದೂ ಹೇಳಲಾಗಿತ್ತು.

ಸಾಲಮನ್ನಾಕ್ಕೆ ಬದ್ಧ
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟ್ವೀಟರ್‌ ಮೂಲಕವೂ ಸಾಲ ಮನ್ನಾ ಕುರಿತು ಸ್ಪಷ್ಟನೆ ನೀಡಿದ್ದಾರೆ. “ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಗೊಂದಲ ಬೇಡ. ಸಾಲ ಮನ್ನಾ ಮಾಡಲು ಸಂಪೂರ್ಣ ಬದ್ಧ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶ ನನ್ನದು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅತೀ ಶೀಘ್ರ ಈ ಬಗ್ಗೆ ಘೋಷಣೆ ಮಾಡುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next