Advertisement
ನಗರದಲ್ಲಿ ಹೆಚ್ಚುತ್ತಿರುವ ಬೈಕ್ ವೀಲಿಂಗ್ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ a ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ನಗರ ಸಂಚಾರ ವಿಭಾಗದ ಪೊಲೀಸರು, ಇದುವರೆಗೂ 161 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 160 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Related Articles
Advertisement
ಪೆಟ್ರೋಲ್ ಟ್ಯಾಂಕ್ ಬದಲಿಗೆ 5 ಕೆ.ಜಿ.ಯ ಗ್ಯಾಸ್ ಸಿಲಿಂಡರ್, ಹಿಂಭಾಗದಲ್ಲಿ ಒಂದೇ ಶಾಕ್‌ಅಬ್ಸರ್, ಆಕ್ಸಲರೇಟರ್ ಹಾಗೂ ಕಿಕರ್ ಬದಲಿಗೆ ಸ್ಟಾರ್ಟ್ ಮಾಡಲು ನೇರವಾಗಿ ವೈರ್‌ಗಳ ಸಂಪರ್ಕ ಮಾಡಿಕೊಂಡಿದ್ದಾನೆ. ಸಾಮಾನ್ಯವಾಗಿ ಡಿಯೋ ದ್ವಿಚಕ್ರ ವಾಹನಕ್ಕೆ ಹ್ಯಾಂಡ್ ಬ್ರೇಕ್ ಇರುತ್ತದೆ. ಆದರೆ, ಈತನ ಸ್ಕೈಟರ್‌ನಲ್ಲಿ ಪಾದ ಬಳಿ ಬ್ರೇಕ್ ಇದೆ. ಒಟ್ಟಾರೆ ಇಡೀ ವಾಹನವನ್ನು ವೀಲಿಂಗ್ ಮಾಡಲು ಹಗುರವಾಗಿಸಿಕೊಂಡು ನಡು ರಸ್ತೆಯಲ್ಲಿ ವೀಲಿಂಗ್ ಮಾಡಿ, ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಅನಿವಾಸಿ ಭಾರತೀಯ ಬಂಧನ: ಕೊತ್ತನೂರು, ನಾರಾಯಣಪುರ ಭಾಗದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಲಿಂಗರಾಜಪುರದ ಕರಿಯಣ್ಣ ಪಾಳ್ಯ ನಿವಾಸಿ ಆಂಗ್ಲೋ-ಇಂಡಿಯನ್ ಆಗಸ್ಟಿನ್ (23) ಎಂಬಾತನನ್ನು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಗಸ್ಟಿನ್ ಬೈಕ್ ವೀಲಿಂಗ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದ. ಈ ಮಾಹಿತಿ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ನಾರಾಯಣಪುರದಲ್ಲಿ ಬೈಕ್ ವೀಲಿಂಗ್ ಮಾಡುವಾಗ ಬಂಧಿಸಿದ್ದಾರೆ. ಈತನ ಈ ಕೃತ್ಯಕ್ಕೆ ಆಗಸ್ಟಿನ್ ಪೋಷಕರು ಸಹಕಾರ ನೀಡುತ್ತಿದ್ದಾರೆ ಎಂದು ನಗರ ಸಂಚಾರ ಪೊಲೀಸರು ಹೇಳಿದರು.
ಅಲ್ಲದೆ, ಈ ರೀತಿ ಸಾಹಸಮಯ ವೀಲಿಂಗ್ ಮಾಡುವುದಕ್ಕೆ ಕೆಲ ದ್ವಿಚಕ್ರ ವಾಹನಗಳ ಬಿಡಿಭಾಗಗಳ ಕಂಪನಿಗಳು ಹಾಗೂ ಹೆಲ್ಮೆಟ್ ತಯಾರಿಸುವ ಕಂಪನಿಯೊಂದು ಈತನಿಗೆ ಹಣ ಸಂದಾಯ ಮಾಡುತ್ತಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನನ್ನು ಮತ್ತೂಮ್ಮೆ ವಿಚಾರಣೆಗೊಳಪಡಿಸಿ, ಸಂಬಂಧಿಸಿದ ಕಂಪನಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ವೀಲಿಂಗ್ ಮಾಡೋರ ವಾಟ್ಸ್‌ಆ್ಯಪ್ ಗ್ರೂಪ್: ನಗರದಲ್ಲಿ ಬೈಕ್ ವೀಲಿಂಗ್ ಮಾಡುವ ಯುವಕರು ಹತ್ತಾರು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. “ಯಮಹಾ 84 ರೈಡರ್ಸ್’, “ಲಯನ್ ವೀಲರ್ಸ್’, “ಬ್ಯಾಡ್ ರೈಡರ್ಸ್’, “ಪ್ಲೇ ಬಾಯ್ಸ’, “94 ಯಂಗ್ ಟೈಗರ್ಸ್’, “46 ರೈಡರ್ಸ್’ ಎಂಬುದೂ ಸೇರಿ ಇಂತಹದ್ದೇ ರೇಸ್-ರೈಡ್ ಹೆಸರಿನ ಹತ್ತಾರು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳನ್ನು ರೈಡರ್‌ಗಳು ಮಾಡಿಕೊಂಡಿದ್ದಾರೆ. ಗ್ರೂಪ್‌ನ ಸದಸ್ಯರು ಯಾರೇ ವೀಲಿಂಗ್ ಮಾಡಿದರೂ, ಅದರ ವಿಡಿಯೋ ಗ್ರೂಪ್‌ಗೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೈ ಮಾಮ್ ಸೇಸ್ ನೋ ವೀಲಿಂಗ್: ನಡು ರಸ್ತೆಯಲ್ಲೇ ಬೈಕ್ ವೀಲಿಂಗ್ ಮಾಡುತ್ತಿದ್ದ ಅಬ್ರಾಸ್ ಖಾನ್ ಎಂಬಾತನನ್ನು ಕೆ.ಜಿ.ಹಳ್ಳಿ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಈತನಿಂದ ವಶ ಪಡಿಸಿಕೊಂಡಿರುವ ದ್ವಿಚಕ್ರ ವಾಹನದ ಹಿಂಭಾಗದಲ್ಲಿ “ಮೈ ಮಾವ್ ಸೇಸ್ ನೋ ವೀಲಿಂಗ್’ ಎಂದು ಬರೆಸಿಕೊಂಡೇ ವೀಲಿಂಗ್ ಮಾಡುತ್ತಿದ್ದ.
ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುವ ಅಬ್ರಾಸ್ ಖಾನ್ ತನ್ನ ದ್ವಿಚಕ್ರ ವಾಹನವನ್ನು ಮಾರ್ಪಾಡು ಮಾಡಿಕೊಂಡು ವೀಲಿಂಗ್ ಮಾಡುತ್ತಿದ್ದ. ಈತನ ಸಾಹಸ ದೃಶ್ಯವನ್ನು ಕಂಡ ಈತನ ಸಂಬಂಧಿ ಸದ್ದಾಂ ಎಂಬುವವರು, ನಿಮ್ಮ ತಾಯಿ ವೀಲಿಂಗ್ ಮಾಡದ್ದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಈ ರೀತಿ ಮಾಡುವುದು ಸರಿಯಲ್ಲ ಎಂದು ಸಾಕಷ್ಟು ಬುದ್ಧಿ ಹೇಳಿದ್ದರು. ಹೀಗಾಗಿ ಇತ್ತೀಚೆಗೆ ವೀಲಿಂಗ್ ಕಡಿಮೆ ಮಾಡಿದ್ದ. ಈ ವೇಳೆಯೇ ಸಂಚಾರ ಪೊಲೀಸರು ಬಂಧಿಸಿದ್ದಾರೆ.